ವಿಜಯಪುರ : ಜಿಲ್ಲೆಯ ಬಬಲೇಶ್ವರ ಬಳಿಯ ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾದ ಘಟನೆ ಸಂಭವಿಸಿದೆ. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ ಕಬ್ಬು ಹಾನಿಯಾಗಿ, ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಬಬಲೇಶ್ವರ ಗ್ರಾಮದ ಮಲ್ಲಪ್ಪ ಭೀಮಪ್ಪ ಬೂದಿಹಾಳ ಅವರ ಗದ್ದೆಯಲ್ಲಿ ಕಟಾವು ಹಂತದಲ್ಲಿದ್ದ 3.20 ಎಕರೆ ಜಮೀನಿನಲ್ಲಿನ ಕಬ್ಬು ಬೆಳೆಗೆ ಏಕಾಏಕಿ ವಿದ್ಯುತ್ ಶಾಟ್ ಸರ್ಕ್ಯೂಟ್ ಸಂಭವಿಸಿದ್ದು, ಸುಮಾರು 8-10 ಅಡಿ ಎತ್ತರ ಬೆಳೆದಿದ್ದ ಕಬ್ಬಿಗೆ ತಾಗಿದೆ.
ಇದರಲ್ಲಿ ಈಗಾಗಲೇ ಸುಮಾರು1.20 ಎಕರೆ ಜಮೀನಿನ ಕಬ್ಬು ಕಟಾವು ಮಾಡಿದ್ದು, 80 ಟನ್ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿತ್ತು.
ಬಾಕಿ 2 ಎಕರೆ ಪ್ರದೇಶದ ಕಬ್ಬು ಕಟಾವು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರಾತ್ರಿ ವೇಳೆ ವಿದ್ಯುತ್ ಕಂಬದಿಂದ ಪಂಪ್ ಸೆಡ್ ಮೋಟರ್ ರವರೆಗೆ ಎಳೆಯಲಾದ ವಿದ್ಯುತ್ ಕೇಬಲ್ ಸುಟ್ಟು ಬೆಳೆದು ನಿಂತಿದ್ದ ಕಬ್ಬಿಗೆ ಬೆಂಕಿ ತಗುಲಿದೆ. ಇದರಿಂದಾಗಿ ರಯತ ಮಲ್ಲಪ್ಪ ತಮಗೆ ಸುಮಾರು 8 ಲಕ್ಷ ರೂ. ಮೌಲ್ಯದ ಹಾನಿ ಸಂಭವಿಸಿದೆ ಎಂದು ಕಂಗಾಲಾಗಿ, ಕಣ್ಣೀರು ಹಾಕುತ್ತಿದ್ದಾರೆ.
ಭೀಕರ ಬರದ ಸಂಕಷ್ಟದ ಮಧ್ಯೆಯೂ ರೈತ ಮಲ್ಲಪ್ಪ ಕಷ್ಟಪಟ್ಟು ಕಬ್ಬು ಬೆಳೆದಿದ್ದ. ಇದೀಗ ವಿದ್ಯುತ್ ಅವಘಡದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಕಂದಾಯ, ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.