ವರದಿ: ಕೇಶವ ಆದಿ
ಬೆಳಗಾವಿ: ಕಬ್ಬಿನ ಬಾಕಿ ಹಣ ಪಾವತಿ ಮತ್ತು ಕಬ್ಬಿಗೆ ದರ ನಿಗದಿ ವಿಷಯದಲ್ಲಿ ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ನಡುವಿನ ಸಂಘರ್ಷ ಇನ್ನೂ ಕಡಿಮೆಯಾಗಿಲ್ಲ. ಕಳೆದ ಹಲವಾರು ವರ್ಷಗಳಿಂದ ನಡೆದು ಬಂದಿರುವ ಈ ವಿವಾದ ಕೊರೊನಾ ಕಾಲದಲ್ಲಿಯೂ ಮುಂದುವರಿದಿದೆ. ಮೊದಲು ಬರಗಾಲ ನಂತರ ಪ್ರವಾಹದಿಂದ ತತ್ತರಿಸಿದ್ದ ಕಬ್ಬು ಬೆಳೆಗಾರರು ಈಗ ಕೊರೊನಾ ಹಾವಳಿಯಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಪರಿಸ್ಥಿತಿ ಶೋಚನೀಯವಾಗಿದ್ದರೂ ಕಬ್ಬು ಬೆಳೆಗಾರರ ನೆರವಿಗೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಇನ್ನೂ ಪೂರ್ಣವಾಗಿ ಸ್ಪಂದಿಸಿಲ್ಲ. ಬಾಕಿ ಹಣ ತಕ್ಷಣ ಪಾವತಿಸಬೇಕೆಂದು ಸರ್ಕಾರ ಆದೇಶದ ಮೇಲೆ ಆದೇಶ ಮಾಡಿದರೂ ಅದಕ್ಕೆ ಕಾರ್ಖಾನೆಗಳು ಬೆಲೆ ಕೊಟ್ಟಿಲ್ಲ. ವಿಷಾದದ ಸಂಗತಿ ಎಂದರೆ ಸಕ್ಕರೆ ಕಾರ್ಖಾನೆಗಳು ಕೊಡುವ ಲೆಕ್ಕಕ್ಕೂ ಕಬ್ಬು ಬೆಳೆಗಾರರು ಹೇಳುವ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ರಾಜ್ಯದಲ್ಲಿ ಬಾಕಿ ಹಣ ಪಾವತಿ ವಿಷಯದಲ್ಲಿ ಸುಮಾರು 300 ರಿಂದ 400 ಕೋಟಿ ರೂ. ವ್ಯತ್ಯಾಸ ಬರುತ್ತಿದೆ. ಸರ್ಕಾರ ಕಾರ್ಖಾನೆಗಳು ಕೊಡುವ ವರದಿಯನ್ನೇ ನಂಬುತ್ತಿದೆ. ನಾವು ಕೊಡುವ ಲೆಕ್ಕಕ್ಕೆ ಬೆಲೆಯೇ ಇಲ್ಲ. ನಮ್ಮ ವರದಿಗಳ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯ. ಹೀಗಾಗಿ ಕೋಟ್ಯಂತರ ಬಾಕಿ ಹಣ ಬರುವುದೇ ಇಲ್ಲ ಎಂಬುದು ರೈತರ ಆರೋಪ.
ಸರ್ಕಾರದ ಹೇಳಿಕೆ ಪ್ರಕಾರ ಈಗಾಗಲೇ ಪ್ರತಿಶತ 80ಕ್ಕೂ ಹೆಚ್ಚು ಹಣ ಪಾವತಿಯಾಗಿದೆ. ಅಂದರೆ ರಾಜ್ಯದ 64 ಸಕ್ಕರೆ ಕಾರ್ಖಾನೆಗಳಿಂದ ಈಗ 450 ಕೋಟಿ ರೂ. ಮಾತ್ರ ಬಾಕಿ ಉಳಿದಿದೆ. ಆದರೆ ಕಬ್ಬು ಬೆಳೆಗಾರರ ಲೆಕ್ಕದಂತೆ ರಾಜ್ಯದ ಇನ್ನೂ 700 ಕೋಟಿ ರೂ. ಬಾಕಿ ಬರಬೇಕು. ಈ ವ್ಯತ್ಯಾಸದ ಲೆಕ್ಕಕ್ಕೆ ಹೊಣೆ ಯಾರು? ಎಂಬುದು ರೈತರ ಪ್ರಶ್ನೆ. ಕಳೆದ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ 13,347 ಕೋಟಿ ರೂ. ನೀಡಬೇಕಿದ್ದು ಅದರಲ್ಲಿ 1,588 ಕೋಟಿ ರೂ. ಬಾಕಿ ಉಳಿದಿತ್ತು. ಅದರಲ್ಲೂ ರಾಜ್ಯದಲ್ಲೇ ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 25 ಕಾರ್ಖಾನೆಗಳಿಂದ ಸುಮಾರು 5,722 ಕೋಟಿ ರೂ. ಹಣ ರೈತರಿಗೆ ಪಾವತಿಯಾಗಬೇಕು. ಈಗ ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ ಒಂಭತ್ತು ಕಾರ್ಖಾನೆಗಳಿಂದ 141 ಕೋಟಿ ರೂ. ಮಾತ್ರ ಬಾಕಿ ಉಳಿದಿದೆ. ಶೇ.96 ಹಣ ಪಾವತಿಯಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ. ಆದರೆ ಕಬ್ಬು ಬೆಳೆಗಾರರು ಸರ್ಕಾರದ ಈ ಲೆಕ್ಕ ಒಪ್ಪುತ್ತಿಲ್ಲ.
ಇದು ಕಾರ್ಖಾನೆಗಳು ನೀಡಿರುವ ಲೆಕ್ಕ. ಸರ್ಕಾರ ನಿಜವಾದ ಅಂಕಿ-ಅಂಶ ಪರಿಗಣಿಸಿಯೇ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 300 ರಿಂದ 400 ಕೋಟಿ ರೂ. ಬಾಕಿ ಬರಬೇಕಿದೆ. ಈ ರೀತಿ ಬಾಕಿ ಉಳಿಸಿಕೊಂಡವರಲ್ಲಿ ಪ್ರಬಲ ರಾಜಕಾರಣಿಗಳೇ ಇದ್ದಾರೆ. ಅವರ ಒಡೆತನದ ಕಾರ್ಖಾನೆಗಳಿಂದ ರೈತರಿಗೆ 200 ಕೋಟಿಗೂ ಹೆಚ್ಚು ಬಾಕಿ ಬರಬೇಕೆಂಬುದು ಕಬ್ಬು ಬೆಳೆಗಾರರ ಸಂಘದ ಮುಖಂಡರ ಹೇಳಿಕೆ.