ಕುಷ್ಟಗಿ: ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಕೋಲಾಹಲ ಸೃಷ್ಟಿಸಿದೆ. ಸರ್ಕಾರ ಹಾಗೂ ಅನ್ನದಾತರ ನಡುವಿನ ಸಂಘರ್ಷದಲ್ಲಿ ತಾವು ಬೆಳೆದಿರುವ ಕಬ್ಬಿನ ಗತಿ ಏನೂ? ಎಂಬ ಚಿಂತೆ ಕಾಡಲಾರಂಭಿಸಿದೆ.
ಕಬ್ಬಿನ ಬಾಕಿ ಪಾವತಿ, ಸಮರ್ಪಕ ಬೆಲೆಗೆ ಆಗ್ರಹಿಸಿ ಹೋರಾಟ ವ್ಯಾಪಕವಾಗುತ್ತಿದೆ. ಅಲ್ಲಿ ಬೆಳೆಗಾರರ ಆಕ್ರೋಶ ವಿಕೋಪಕ್ಕೆ ತಿರುಗಿರುವುದು ಇಲ್ಲಿನ ಕಬ್ಬು ಬೆಳೆಗಾರರ ಆತಂಕ ಹೆಚ್ಚಲು ಕಾರಣವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಕಬ್ಬು ಬೆಳೆ ಪ್ರಮಾಣ ಕಡಿಮೆಯಾಗಿದ್ದು, ಅಂತರ್ಜಲ ಕ್ಷೀಣತೆ ಕಾರಣವಾಗಿದೆ. ಈ ಪರಿಸ್ಥಿತಿಯಲ್ಲಿ ನೀರಿನ ಅಭಾವದ ನಡುವೆಯೂ ಬೆರಳಣಿಕೆಯಷ್ಟೇ ರೈತರು ಬೆಳೆದಿರುವ ಕಬ್ಬು, ಕಟಾವಿಗೆ ಸನ್ನಿಹಿತವಾಗಿದೆ. ಕೆಲವು ರೈತರು ಸಕ್ಕರೆ ಕಾರ್ಖಾನೆಗಳ ಜೊತೆಗೆ ಒಪ್ಪಂದದ ಮೇರೆಗೆ ಕಬ್ಬು ಕಟಾವು ಮಾಡುವ ಕಾರ್ಮಿಕರ ನಿರೀಕ್ಷೆಯಲ್ಲಿದ್ದು, ಈಗಲೇ ಬಂದರೆ ಸರ್ಕಾರ ಘೋಷಿಸಲಿರುವ ಸಮರ್ಪಕ ದರ ಸಿಗುತ್ತದೆಯೋ ಇಲ್ಲವೋ ಆತಂಕ ರೈತರದ್ದಾಗಿದೆ. ಕಳೆದ ವರ್ಷದಲ್ಲಿ ಪ್ರತಿ ಟನ್‌ಗೆ 1700 ರೂ. ಸಿಕ್ಕಿತ್ತು. ಇದೀಗ 2,100 ರೂ. ಹಾಗೂ ಇದಕ್ಕಿಂತ ಹೆಚ್ಚು ದರ ಸಿಗಬಹುದು ನಿರೀಕ್ಷೆಯಲ್ಲಿರುವ ರೈತರಿಗೆ 2 ಸಾವಿರ ರೂ.ಕ್ಕಿಂತ ಹೆಚ್ಚಿಗೆ ದರ ಲಭ್ಯವಾದಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎನ್ನುವ ಲೆಕ್ಕಾಚಾರ ರೈತರದ್ದಾಗಿದೆ.
ತಾಲೂಕಿನ ಯಲಬುರ್ತಿ ಗ್ರಾಮದ ರೈತ ಯಮನೂರಪ್ಪ ಭೋವಿ ಅವರು, ತಮ್ಮ 4 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದಾರೆ. ಅಂಗಾಂಶ ಕೃಷಿಯ ಸುಧಾರಿತ ಕಬ್ಬಿನ ಸಸಿಗಳನ್ನು ಬೆಳಗಾವಿ ಜಿಲ್ಲೆಯ ಯರಗಟ್ಟಿಯಿಂದ ಖರೀದಿಸಿ ನಾಟಿ ಮಾಡಿದ್ದಾರೆ. ಸದ್ಯ 11 ತಿಂಗಳ ಬೆಳೆ ಇದ್ದು, ನೀರು ನಿರ್ವಹಣೆ ಅಗತ್ಯ ಕ್ರಮದಿಂದಾಗಿ ಕಬ್ಬು ನಿರೀಕ್ಷಿತ ಆದಾಯದ ಬೆಳೆಯ ಭರವಸೆ ರೈತ ಯಮನೂರಪ್ಪ ಅವರಲ್ಲಿ ಮೂಡಿಸಿದೆ. ಬೆಲೆ ಪ್ರತಿ ಟನ್ ಗೆ 2,500 ರೂ.ವರೆಗೂ ದರ ಸಿಕ್ಕಲ್ಲಿ ಕಬ್ಬು ಬೆಳೆದಿರುವುದಕ್ಕೂ ಸಾರ್ಥಕದ ವ್ಯಾಖ್ಯಾನ ಅವರದು. ತಾವು ಬೆಳೆದಿರುವ ಕಬ್ಬು ಡಿಸೆಂಬರ್ ಕೊನೆಯ ವಾರ ಇಲ್ಲವೇ ಜನವರಿ ಮೊದಲ ವಾರದಲ್ಲಿ ಕಟಾವಿಗೆ ಬರುವ ಸಾಧ್ಯತೆಗಳಿವೆ. ಅಷ್ಟರೊಳಗೆ ರಾಜ್ಯದಲ್ಲಿ ಕಬ್ಬು ಬೆಳೆಗಾರರ ವಿಕೋಪದ ವಾತಾವರಣ ತಿಳಿಕೊಂಡು, ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಯಮನೂರಪ್ಪ ಭೋವಿ.
ಆಲಮಟ್ಟಿಯ ಬಾಲಾಜಿ ಸಕ್ಕರೆ ಕಾರ್ಖಾನೆ ಒಪ್ಪಂದ ಮೇರೆಗೆ ಕಬ್ಬು ಬೆಳೆಸಲಾಗಿದೆ. ಕಾರ್ಖಾನೆ 100 ಕಿಮೀ ಅಂತರವಿದೆ. ಸಾಗಾಣಿಕೆಯ ವೆಚ್ಚ ಇಲ್ಲ. ಸರ್ಕಾರದಿಂದ ಕಬ್ಬಿಗೆ 2,500ಕ್ಕಿಂತ ಅಧಿ ಕ ಬೆಂಬಲ ಬೆಲೆ ಸಿಕ್ಕರೆ ಮಾತ್ರ ಲಾಭದಾಯಕವೆನಿಸಲಿದೆ.
.
ಯಮನೂರಪ್ಪ ಭೋವಿ,
ಕಬ್ಬು ಬೆಳೆಗಾರ.
ಅಂತರ್ಜಲ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕಬ್ಬು ಬೆಳೆ ಪ್ರಮಾಣ ಕಡಿಮೆಯಾಗಿದೆ. ತಾಲೂಕಿನಲ್ಲಿ 40 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.
. ವೀರಣ್ಣ ಕಮತರ,
ಸಹಾಯಕ ಕೃಷಿ ನಿರ್ದೇಶಕ ಕೃಷಿ ಇಲಾಖೆ.
ಮಂಜುನಾಥ ಮಹಾಲಿಂಗಪುರ