ಹಾವೇರಿ: ಕಬ್ಬಿಗೆ ಸರಿಯಾದ ದರ ಸಿಗದೆ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರಿಂದ ಪ್ರತಿವರ್ಷ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ಗುತ್ತಿಗೆದಾರರ ವಿರುದ್ಧ ಹೋರಾಟ ರೂಪಿಸಲು ಫೆ. 25ರಂದು ಮಧ್ಯಾಹ್ನ 12ಗಂಟೆಗೆ ಕಾರ್ಖಾನೆ ರೈತ ಭವನದಲ್ಲಿ ಕಬ್ಬು ಬೆಳೆಗಾರರ ಸಭೆ ಕರೆಯಲಾಗಿದೆ ಎಂದು ಅಖೀಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಗುರುಮಠ ತಿಳಿಸಿದರು.
ಶುಕ್ರವಾರ ನಗರದ ಪ್ರವಾಸಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಸರಿಯಾದ ದರ ನೀಡದೆ ಪ್ರತಿ ವರ್ಷ ಕಬ್ಬು ಬೆಳೆಗಾರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಒಂದು ಟನ್ ಕಬ್ಬಿಗೆ ಕನಿಷ್ಟ 1200ರೂ. ಸಹ ಸಿಗದ ಪರಿಸ್ಥಿತಿ ಬೆಳೆಗಾರರು ಎದುರಿಸುವಂತಾಗಿದೆ. ಹೀಗಾಗಿ ಕಬ್ಬು ಬೆಳೆಗಾರರು ಸಂಘಟಿತರಾಗಿ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದೆ. ಗುತ್ತಿಗೆದಾರರ ವಿರುದ್ಧ ಹೋರಾಟ ಯಾವ ರೀತಿ ಮಾಡಬೇಕು. ಯಾವಾಗ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸಹಕಾರಿಗಳ ಕೈಯಲ್ಲಿದ್ದ ಕಾರ್ಖಾನೆಯನ್ನು ಅತ್ಯಂತ ಕಡಿಮೆ ದರಕ್ಕೆ ಅಂದರೆ, 30ವರ್ಷಕ್ಕೆ 42 ಕೋಟಿ ರೂ.ಗಳಿಗೆ ಗುತ್ತಿಗೆ ಕೊಡಲಾಗಿದೆ. ಆಗ ಮಾಡಿಕೊಂಡ ಕರಾರಿನ ಪ್ರಕಾರ 30ವರ್ಷಗಳ ಬಳಿಕ ಬೆಳೆಗಾರರು ಗುತ್ತಿಗೆದಾರರು ಕಾರ್ಖಾನೆಗೆ ಮಾಡಿದ ಖರ್ಚಿನ ಹಣ ಕೊಟ್ಟು ಕಾರ್ಖಾನೆ ಬಿಡಿಸಿಕೊಳ್ಳಬೇಕಾಗುತ್ತದೆ. ಗುತ್ತಿಗೆದಾರರು ಈಗಲೇ 350 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳುತ್ತಿದ್ದು, ಗುತ್ತಿಗೆ ಅವಧಿ ಮುಗಿಯುವುದರೊಳಗೆ ಅದು 400-500 ಕೋಟಿ ರೂ.ಗಳಾದರೂ ಅಚ್ಚರಿಯಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡಿ ರೈತರು ಕಾರ್ಖಾನೆ ವಾಪಸ್ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಲೇ ಈ ಬಗ್ಗೆ ಗಂಭೀರ ಚಿಂತನೆ ಮಾಡಿ ಮರಳಿ ರೈತರ ಕೈಗೆ ಕಾರ್ಖಾನೆ ವಾಪಸ್ ಪಡೆಯಲು ಪ್ರಯತ್ನಿಸಬೇಕಿದೆ ಎಂದರು.
ಒಂದು ಟನ್ ಕಬ್ಬು ಬೆಳೆಯಲು ರೈತರಿಗೆ ಒಟ್ಟು 1730ರೂ. ಖರ್ಚು ತಗಲುತ್ತದೆ. ಕಾರ್ಖಾನೆಯವರು ಟನ್ ಕಬ್ಬಿಗೆ 2663ರೂ. ನೀಡುತ್ತಿದ್ದಾರೆ. ಇದರಿಂದ ಟನ್ ಕಬ್ಬಿಗೆ ರೈತರಿಗೆ ಕೇವಲ 933ರೂ. ಸಿಗುವಂತಾಗಿದೆ. ಇನ್ನು ಒಂದು ಟನ್ ಕಬ್ಬಿನಿಂದ ಕಾರ್ಖಾನೆಯವರಿಗೆ 4820ರೂ. ಆದಾಯ ಬರುತ್ತದೆ. ಇದರಲ್ಲಿ 3463ರೂ. ಖರ್ಚು ಕಳೆದರೆ ಸರಾಸರಿ ಟನ್ ಕಬ್ಬಿನಿಂದ 1357ರೂ. ಲಾಭಕಾರ್ಖಾನೆಯವರಿಗೆ ಆಗುತ್ತದೆ. ಇಷ್ಟೊಂದು ದೊಡ್ಡ ಲಾಭವಿದ್ದರೂ ಗುತ್ತಿಗೆದಾರ ರೈತರಿಗೆ ಹೆಚ್ಚಿನ ದರ ಕೊಡಲು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಸಭೆಯಲ್ಲಿ ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು. ಇದೇಸಂದರ್ಭದಲ್ಲಿ ತಮ್ಮ ಸಂಘಟನೆಯ ಜಿಲ್ಲಾ ಘಟಕದ ಉದ್ಘಾಟನೆಯೂ ನಡೆಯಲಿದೆ ಎಂದು ಶಿವಾನಂದ ನಾಡಿದು ಗುರುಮಠ ತಿಳಿಸಿದರು.