Advertisement

ಕಬ್ಬು ಎಫ್ಆರ್‌ಪಿ: ಅವೈಜ್ಞಾನಿಕ ಎಂದ ಕಬ್ಬು ಬೆಳೆಗಾರರ ಸಂಘ

08:32 PM Sep 07, 2021 | Team Udayavani |

ಬೆಂಗಳೂರು: ಕಬ್ಬು ಬೆಳೆಗೆ ನೀಡಲಾದ “ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ’ (ಎಫ್ಆರ್‌ಪಿ) ಅವೈಜ್ಞಾನಿಕವಾಗಿದ್ದು, ಕೂಡಲೇ ಮರುಪರಿಶೀಲಿಸಬೇಕು. ಇಲ್ಲದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Advertisement

ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚ 3,200 ರೂ. ಆಗುತ್ತದೆ ಎಂದು ಸ್ವತಃ ಸರ್ಕಾರದ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ವರದಿ ಸಲ್ಲಿಸಿವೆ. ಆದರೆ, ಟನ್‌ಗೆ ಕೇವಲ 50 ರೂ. ಎಫ್ಆರ್‌ಪಿ ನೀಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ತಿಂಗಳಲ್ಲಿ ಮರುಪರಿಶೀಲಿಸಿ, ನ್ಯಾಯಸಮ್ಮತ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ, ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದು, ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ. ವರ್ಷಕ್ಕೆ ಹತ್ತಾರು ಬಾರಿ ಪೆಟ್ರೋಲ್‌-ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಸರ್ಕಾರ, ಮೂರು ವರ್ಷಗಳಿಂದಲೂ ಕಬ್ಬಿನ ಎಫ್ಆರ್‌ಪಿ ದರವನ್ನು ನಿಗದಿ ಮಾಡಿಲ್ಲ. ಈಗ ಕೇವಲ 50ರೂ ಏರಿಕೆ ಮಾಡಿ ರೈತರಿಗೆ ನಿರಾಸೆ ಉಂಟುಮಾಡಿದೆ. ಕೂಡಲೇ ಪುನರ್‌ ಪರಿಶೀಲಿಸಿ ಕೃಷಿ ಇಲಾಖೆ ಪ್ರಕಾರ ಟನ್‌ ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚ 3,200 ರೂ. ಆಗುತ್ತದೆ. ಇದಕ್ಕೆ ಲಾಭ ಸೇರಿಸಿ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ರೈತರಿಗೆ ಅನುಕೂಲವಾಗುವಂತಹ ಹೊಸ ಸಕ್ಕರೆ ನೀತಿ ರೂಪಿಸಲು ಕೇಂದ್ರಕ್ಕೆ ಮನವಿ :ಸಚಿವ ಮುನೇನಕೊಪ್ಪ

ಅಲ್ಲದೆ, ಕಬ್ಬು ಬೆಳೆಗಾರರಿಗೆ ಸಕ್ಕರೆ ಇಳುವರಿಯಲ್ಲಿ ಮೋಸ, ತೂಕದಲ್ಲಿ ಮೋಸ, ಹಣ ಪಾವತಿ ವಿಳಂಬ ಮತ್ತು ಮೋಸ, ಅಷ್ಟೇ ಅಲ್ಲ ದರ ನಿಗದಿಯಲ್ಲಿಯೂ ಮೋಸವಾಗುತ್ತಿದೆ. ಎಥನಾಲ್‌ ಉತ್ಪಾದನೆಯಿಂದ ಬರುವ ಲಾಭವನ್ನು ರೈತರಿಗೆ ಹಂಚಿಕೆ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಗಳು ಸಕ್ಕರೆ ಕಂಪನಿಯ ಮಾಲೀಕರ ಹಂಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ರೈತರ ನಿರಂತರ ಶೋಷಣೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಂದ್‌ಗೆ ಬೆಂಬಲ
ಇನ್ನು ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ದ್ರೋಹ ಮಾಡುತ್ತಿದ್ದರೂ, ನಮ್ಮ ಸಂಸದರು ಮೌನವಾಗಿರುವುದು ಖಂಡನೀಯ. ಕೇಂದ್ರದ ಧೋರಣೆ ಖಂಡಿಸಿ ರಾಷ್ಟ್ರಮಟ್ಟದ ಸಂಯುಕ್ತ ಕಿಸಾನ್‌ ಮೋರ್ಚಾ ಸೆ. 27ರಂದು ಕರೆ ನೀಡಿರುವ ಭಾರತ ಬಂದ್‌ಗೆ ಕಬ್ಬು ಬೆಳೆಗಾರರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ ರಾಜ್ಯದಲ್ಲಿ ಎಲ್ಲ ಜನಪರ ರೈತ ಸಂಘಟನೆಗಳು ಸದ್ಯದಲ್ಲಿಯೇ ಸಭೆ ನಡೆಸಿ ಚರ್ಚಿಸಿ ಬೆಲೆ ಏರಿಕೆ ವಿರೋಧಿಸಿ, ಮಹದಾಯಿ ನದಿ ನೀರಿನ ವಿವಾದ ಮೇಕೆದಾಟು ಯೋಜನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕದಲ್ಲಿ ವಿಭಿನ್ನ ರೀತಿಯ ಬಂದ್‌ ಆಚರಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ರೆಡ್ಡಿ, ಪ್ರಜಾ ಪರಿವರ್ತನ ವೇದಿಕೆ ಅಧ್ಯಕ್ಷ ಬಿ. ಗೋಪಾಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next