Advertisement

ಮಳೆ-ಗಾಳಿಗೆ ಧರೆಗುರುಳಿದ ಕಬ್ಬು

10:29 AM Nov 27, 2021 | Team Udayavani |

ವಾಡಿ: ಪಟ್ಟಣ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬಹುತೇಕ ಕಡೆ ತೋಟಗಾರಿಕೆ ಬೆಳೆ ನೆಲಕಚ್ಚಿದ್ದು, ರೈತರು ಮತ್ತೂಮ್ಮೆ ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದಾರೆ. ಹವಮಾನ ವೈಪರಿತ್ಯದ ಪರಿಣಾಮ ರಾತ್ರಿ ಹಗಲೆನ್ನದೆ ಒಂದು ವಾರ ಕಾಲ ಸುರಿದ ಧಾರಾಕಾರ ಮಳೆಗೆ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ನಾಲವಾರ, ಸನ್ನತಿ, ಯಾಗಾಪುರ, ಅಳ್ಳೊಳ್ಳಿ ವಲಯದಲ್ಲಿ ಬೆಳೆಯಲಾದ ನೂರಾರು ಎಕರೆ ಕಬ್ಬು ಗಾಳಿಗೆ ಸಿಕ್ಕು ಮುಗ್ಗರಿಸಿದೆ. ಹೂಬಿಟ್ಟ ತೊಗರಿ, ಫಲಕೊಟ್ಟ ಹತ್ತಿ ಬೆಳೆ ಅತಿಯಾದ ಭೂಮಿಯ ತೇವಾಂಶದಿಂದ ನರಳಿ ಗೊಡ್ಡು ರೋಗಕ್ಕೆ ತುತ್ತಾಗಿವೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ಈ ಭಾಗದ ಅನ್ನದಾತರು ಅಕಾಲಿಕ ಮಳೆ ಹೊಡೆತಕ್ಕೆ ಸಿಲುಕಿ ಮರುಗುತ್ತಿದ್ದಾರೆ.

ಮೊದಮೊದಲು ಅತಿವೃಷ್ಟಿಗೆ ತತ್ತರಿಸಿದ ಬೇಸಾಯಗಾರರು, ತಡವಾಗಿ ತೊಗರಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಮುಂಗಾರು ಬಿತ್ತನೆ ಮಾಡಿದವರ ಬೀಜ ಭೂಮಿಯಲ್ಲೇ ಕೊಳೆತು, ಬೆಳೆ ಬಾರದೇ ಮರುಬಿತ್ತನೆ ಮಾಡಿದ್ದಾರೆ. ಈಗ ತುಸು ಬೆಳೆ ಚೇತರಿಸಿಕೊಂಡು ಉತ್ತಮ ಇಳುವರಿ ಭರವಸೆ ನೀಡುತ್ತಿದ್ದಂತೆ ಅಕಾಲಿಕ ಮಳೆ ಹೊಸ ಆಪತ್ತು ತಂದಿಟ್ಟಿದೆ.

ಚಂಡಮಾರುತ ರೂಪದ ಬಿರುಗಾಳಿ ಮಿಶ್ರಿತ ವರ್ಷಧಾರೆ ಬೆಳೆಗಳ ಮೇಲೆ ದಾಳಿ ನಡೆಸಿದೆ. ತೊಗರಿ ಹೂಗಳು ಉದುರಿ ಬಿದ್ದರೇ, ಕಬ್ಬು ಬೆಳೆ ನೆಲಕಚ್ಚಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರ ಹೊಡೆತ ತಿನ್ನುತ್ತಲೇ ಬದುಕು ದೂಡುತ್ತಿರುವ ಬಿಸಿಲು ನಾಡಿನ ರೈತರ ಎದೆಗೆ ಪ್ರಕೃತಿ ನಷ್ಟದ ಬರೆ ಎಳೆದಿದೆ.

ಚಾಮನೂರ, ಕುಂದನೂರ, ಕಡಬೂರ, ಇಂಗಳಗಿ, ಕೊಲ್ಲೂರ, ಸನ್ನತಿ ವ್ಯಾಪ್ತಿಯ ಭೀಮಾ ದಡದಲ್ಲಿರುವ ಜಮೀನುಗಳಲ್ಲಿ ಕಬ್ಬು ಬೆಳೆಯಲಾಗಿದ್ದು, ಮೊನ್ನೆ ಸುರಿದ ಮಳೆಯಿಂದ ಕಬ್ಬಿನ ಗಣಿಕೆ ಫಸಲು ಧರೆಗುರುಳಿ ರೈತರಿಗೆ ಕಣ್ಣೀರು ತರಿಸಿದೆ. ಕೂಡಲೇ ಸರ್ಕಾರ ಬೆಳೆ ನಷ್ಟ ಪಟ್ಟಿ ತಯಾರಿಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದು ನಗರದ ಯುವ ರೈತ ಸಿದ್ಧು ಪಂಚಾಳ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next