ಯಾದಗಿರಿ: ಜಿಲ್ಲೆಯ ಏಕೈಕ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ರೈತರ 23.19 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಈಗ ಮುಂಗಾರು ಬಿತ್ತನಗೆಗೆ ಕಬ್ಬು ನೀಡಿದ ರೈತರು ಆರ್ಥಿಕ ಸಂಕಷ್ಟಕ್ಕೆ ಎದುರಿಸುವಂತಾಗಿದೆ.
ಕಳೆದ 2019-20ನೇ ಸಾಲಿನಲ್ಲಿ ಬರೋಬ್ಬರಿ 2355 ರೈತರಿಂದ 2.36 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿ ಈಗ ಹಣ ಪಾವತಿಸುವುದಕ್ಕೆ ಕಾಡಿಸುತ್ತಿದ್ದು, ರೈತರು ಕಾರ್ಖಾನೆಗೆ ಹಣಕ್ಕಾಗಿ ಅಲೆದಾಡುವಂತಾಗಿದೆ.
ಒಟ್ಟು 64.81 ಕೋಟಿ ಮೊತ್ತದಲ್ಲಿ 41.57 ಕೋಟಿಯಷ್ಟು ಪಾವತಿಸಿದೆ. ಇದೀಗ ಮುಂಗಾರು ಆರಂಭವಾಗಿದೆ. ಹಲವು ಬಿತ್ತನೆ ಬೀಜ ಖರೀದಿಸಲು ಹಣದ ಅವಶ್ಯಕತೆಯಿದೆ. ಆದರೆ ವಡಗೇರಾ ತಾಲೂಕು ತುಮಕೂರು ಹತ್ತಿರದ ಸಕ್ಕರೆ ಕಾರ್ಖಾನೆ ಮಾತ್ರ ಹಣ ಸಕಾಲಕ್ಕೆ ಪಾವತಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳೆದ ಕಬ್ಬು ನೀಡಿದ್ದು ನಾವು ಕಷ್ಟಪಟ್ಟು ಬೆಳೆದ ಫಸಲಿಗೆ ಹಣ ಸರಿಯಾದ ಸಮಯಕ್ಕೆ ಸಿಗದೇ ಸಾಲ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪ್ರತಿಬಾರಿಯೂ ಕಾರ್ಖಾನೆ ರೈತರಿಂದ ಕಬ್ಬು ಪಡೆದು ಬಳಿಕ ಹಣ ಪಾವತಿಸುವುದಕ್ಕೆ ಮೀನಾಮೀಷ ಎಣೆಸುತ್ತದೆ. ಇದರಿಂದ ರೈತರು ಕಷ್ಟಕ್ಕೆ ಸಿಲುಕುವಂತಾಗಿದೆ. ಕಳೆದ ವರ್ಷವೂ ರೈತರು ಹಣಕ್ಕಾಗಿ ಕಾರ್ಖಾನೆ ಎದುರು ಮತ್ತು ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟಿದ್ದರು. ಅಲ್ಲದೇ ಕಾರ್ಖಾನೆಯನ್ನು ಸರ್ಕಾರ ಜಪ್ತಿ ಮಾಡಿದ ಘಟನೆಯೂ ನಡೆದಿತ್ತು. ಇಷ್ಟಾದರೂ ಬುದ್ಧಿ ಕಲಿಯದ ಕಾರ್ಖಾನೆ ಆಡಳಿತ ಮಂಡಳಿ ಈ ಬಾರಿಯೂ ಕಬ್ಬು ಪಡೆದು ತಿಂಗಳುಗಳೇ ಕಳೆದಿದೆ. ಸಕ್ಕರೆ ಉತ್ಪಾದನೆ ಮಾಡಿರುವ ಕಾರ್ಖಾನೆ ಸಂಪೂರ್ಣ ಸಕ್ಕರೆ ಮಾರಾಟ ಮಾಡಿದೆ. ಈಗ ಹಣ ನೀಡಲು ಮಾತ್ರ ಸತಾಯಿಸುತ್ತಿದ್ದು, ರೈತರು ಆಕ್ರೋಶಗೊಳ್ಳುವಂತೆ ಮಾಡಿದೆ.
ರೈತರಿಗೆ ಹಣ ಪಾವತಿಯಾಗದ ಕುರಿತು ದೂರುಗಳು ಬಂದ ಹಿನ್ನೆಲೆ ಜಿಲ್ಲಾಡಳಿತ ಕಾರ್ಖಾನೆಗೆ ಮೇ 12ರಂದು ನೋಟಿಸ್ ಜಾರಿಗೊಳಿಸಿದೆ. ರೈತರಿಗೆ ಶೀಘ್ರವೇ ಹಣ ಪಾವತಿಸುವಂತೆ ಎಚ್ಚರಿಕೆಯನ್ನೂ ನೀಡಿದೆ. ಆದರೆ ಕಾರ್ಖಾನೆ ಸಮಯ ಕೇಳಿದ್ದು, ನಿಗದಿತ ಸಮಯ ಪಡೆದು ರೈತರಿಗೆ ತೊಂದರೆಯಾಗದಂತೆ ಹಣ ನೀಡುವಂತೆ ತಿಳಿಸಲಾಗಿದೆ. ಜಿಲ್ಲಾಡಳಿತಕ್ಕೆ ಲಿಖೀತ ಪತ್ರವನ್ನು ನೀಡಿರುವ ಕಾರ್ಖಾನೆ 2020ರ ಜೂನ್ ಅಂತ್ಯದ ವೇಳೆಗೆ ಎಲ್ಲ ರೈತರಿಗೆ ಹಣವನ್ನು ಪಾವತಿ ಮಾಡುವ ಭರವಸೆ ನೀಡಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪ್ರತಿ ಬಾರಿಯೂ ಕಾರ್ಖಾನೆ ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಕಳೆದ ವರ್ಷವೂ ಹೀಗೆ ಪ್ರತಿಭಟನೆ ಮಾಡಿ ಹಣ ಪಡೆದುಕೊಳ್ಳಲಾಯಿತು. ನಮ್ಮ ಫಸಲು ಪಡೆದು ಹಣ ನೀಡಲ್ಲ ಎಂದರೇ ಏನರ್ಥ. ಸರ್ಕಾರ ರೈತರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವಹಿಸಬೇಕು. –
ಮಲ್ಲಣ್ಣ ಪಾಟೀಲ, ಕಬ್ಬು ಬೆಳೆಗಾರರ ಸಂಘದ ಮುಖಂಡರು
-ಅನೀಲ ಬಸೂದೆ