ಮಂಡ್ಯ: ಸಕ್ಕರೆ ನಾಡಿನಲ್ಲೀಗ ರಾಗಿ ಸುಗ್ಗಿಯ ಸಂಭ್ರಮ ಮೇಳೈಸುತ್ತಿದೆ. ಒಂದು ಕಾಲದಲ್ಲಿ ಕಬ್ಬು ಮತ್ತು ಭತ್ತದ ಬೆಳೆಗೆ ಹೆಸರುವಾಸಿಯಾಗಿದ್ದ ಮಂಡ್ಯ ಜಿಲ್ಲೆ, ಬದಲಾದ ಕಾಲಘಟ್ಟ, ಹವಾಮಾನ ವೈಪರೀತ್ಯ, ಸರಕಾರದ ಪ್ರೋತ್ಸಾಹದಿಂದಾಗಿ ರಾಗಿ ಕಣಜವಾಗಿ ಪರಿವರ್ತನೆಯಾಗುತ್ತಿದೆ. 2 ವರ್ಷಗಳ ಸತತ ಬರಗಾಲ, ನೀರಿನ ಮಿತವ್ಯಯದ ದೃಷ್ಟಿಯಿಂದ ಹೆಚ್ಚು ನೀರನ್ನು ಬೇಡುವ ಕಬ್ಬು ಮತ್ತು ಭತ್ತದ ಬೆಳೆಯಿಂದ ರೈತರು ಮಗ್ಗುಲು ಬದಲಿಸುವಂತಾಗಿದೆ. ಕಡಿಮೆ ಅವಧಿಯಲ್ಲಿ, ಮಿತ ನೀರಿ ನಲ್ಲಿ ಬೆಳೆಯಬಹುದಾದ ರಾಗಿ ಬೆಳೆಯತ್ತ ಅನ್ನದಾತರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ರಾಗಿಯ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 67,435 ಹೆಕ್ಟೇರ್ ಪ್ರದೇಶದಲ್ಲಿ 6,74,350 ಕ್ವಿಂಟಾಲ್ ರಾಗಿ ಉತ್ಪಾದನೆ ನಿರೀಕ್ಷಿಸಲಾಗಿದೆ. 12,509 ಹೆಕ್ಟೇರ್‌ನಲ್ಲಿ 5,00,360 ಕ್ವಿಂಟಾಲ್ ಭತ್ತದ ಉತ್ಪಾದನೆ ನಿರೀಕ್ಷಿಸಿದೆ. ಭತ್ತಕ್ಕೆ ಹೋಲಿಸಿದರೆ 1,73,990 ಕ್ವಿಂಟಾಲ್ ರಾಗಿಯ ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ರಾಗಿ ಬೆಳೆ ಬೆಳೆಯುವ ಪ್ರದೇಶದಲ್ಲಿ ಹೆಚ್ಚಳ ಕಂಡುಬಂದಿದೆ. ಮಳೆಯ ವಿಳಂಬದಿಂದಾಗಿ 67,435 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಯಿತು. ರಾಗಿ ಬೆಳೆಗೆ ಸೂಕ್ತವಾಗು ವಂತೆ ಮಳೆಯೂ ಆಶಾದಾಯಕವಾಗಿ ಬಂದಿದ್ದರಿಂದ ಉತ್ಪಾದನೆಯಲ್ಲೂ ಹೆಚ್ಚಳ ಕಂಡುಬಂದಿದೆ ಎನ್ನುವುದು ಕೃಷಿ ಅಧಿಕಾರಿಗಳು ಹೇಳುವ ಮಾತು.
ಸರಕಾರದಿಂದಲೇ ಮನವಿ
ಈ ಬಾರಿ ಆರಂಭದಲ್ಲಿ ಮಳೆ ಕೊರತೆ ಕಂಡಿದ್ದರಿಂದಲೇ ರಾಜ್ಯ ಸರಕಾರ ಕಾವೇರಿ ಕೊಳ್ಳದ ರೈತರಲ್ಲಿ ನೀರಾವರಿಯಾಶ್ರಿತ ಬೆಳೆ ಬೆಳೆಯದಂತೆ ಮನವಿ ಮಾಡಿಕೊಂಡಿತ್ತು. ಇದರನ್ವಯ ಇಲ್ಲಿನ ರೈತರು ಭತ್ತ ಮತ್ತು ಕಬ್ಬು ಬಿಟ್ಟು ರಾಗಿಯ ಮೊರೆ ಹೋಗಿದ್ದರು. ಮಳೆಯಾಶ್ರಿತ ಬೆಳೆಗಳಾದ ರಾಗಿ, ಹುರುಳಿ, ಮುಸುಕಿನ ಜೋಳ, ಅವರೆ ಬೆಳೆಗಳನ್ನು ಬೆಳೆಯುವಂತೆ ರೈತರಲ್ಲಿ ಮನವಿ ಮಾಡಲಾಗಿತ್ತು. ಇದರ ಪರಿಣಾಮ ರಾಗಿ ಮತ್ತು ಹುರುಳಿ ಬೆಳೆಗೆ ರೈತರು ಹೆಚ್ಚಿನ ಪ್ರಾಮುಖ್ಯ ನೀಡಿದರು.
ರಾಗಿ ಬೆಳೆಯುವ ಪ್ರದೇಶದ ವಿಸ್ತೀರ್ಣ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಹೆಚ್ಚಳವಾಗಿದೆ. ಹವಾಮಾನ ಬದಲಾವಣೆ, ಮಿತ ನೀರಿನಲ್ಲಿ ಬೆಳೆಯಬಹುದಾದ ರಾಗಿ ಬೆಳೆಗೆ ರೈತರು ಹೆಚ್ಚು ಒಲವು ತೋರಿದರು. ಇದರಿಂದ ಸಹಜವಾಗಿಯೇ ರಾಗಿ ಬೆಳೆ ಭತ್ತವನ್ನು ಮೀರಿಸಿ ಬಿತ್ತನೆಯಾಯಿತು. ಉತ್ಪಾದನೆಯಲ್ಲೂ ಹೆಚ್ಚಳವಾಗಿದೆ. ರಾಗಿಗೆ ಕೇಂದ್ರ-ರಾಜ್ಯ ಸರಕಾರಗಳೂ ಉತ್ತಮ ಬೆಂಬಲ ಬೆಲೆ ಘೋಷಿಸಿದ್ದು, ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
– ರಾಜ ಸುಲೋಚನಾ, ಜಂಟಿ ಕೃಷಿ ನಿರ್ದೇಶಕಿ
*ಮಂಡ್ಯ ಮಂಜುನಾಥ್