Advertisement
ಸಕ್ಕರೆ ಗಲಾಟೆ ಆಗಲೇ ಶುರುವಾಗಿದೆ. ಕಬ್ಬನ್ನು ನಂಬಿದ ರೈತರಿಗೆ ಸಿಹಿಗಿಂತ ಕಹಿ ಅನುಭವವೇ ಹೆಚ್ಚು. ಪ್ರತಿ ವರ್ಷ ಊರ ದೇವರ ಜಾತ್ರೆಯಂತೆಯೇ ಈ ಪ್ರತಿಭಟನೆಗಳು ವರ್ಷಕ್ಕೊಂದು ಸಲ ನಡೆಯುತ್ತಿವೆ.ಸರ್ಕಾರ ಚಾಮರಾಜನಗರ, ಮಂಡ್ಯ ಕಡೆ ಟನ್‌ಗೆ 2, 750 ಚಿಲ್ಲರೆ ಕೊಡಬೇಕು ಎಂದು ಸರ್ಕಾರ ಹೇಳಿದೆ. ಉತ್ತರ ಕರ್ನಾಟಕದಲ್ಲಿ ಇದಕ್ಕಿಂತ ಸ್ವಲ್ಪ ಜಾಸ್ತಿ ಬೆಲೆ ಇಟ್ಟಿದೆ. ಆದರೂ, ಈ ತೀರ್ಮಾನಗಳು ರೈತರಿಗೆ ಸಹಿಯಾಗಿ ಕಾಣುತ್ತಿಲ್ಲ. ಏಕೆಂದರೆ, ಸಕ್ಕರೆ ಕಾರ್ಖಾನೆ ಮಾಲೀಕರೆ ಸಕ್ಕರೆ ಪಾಲಿಸಿಗಳನ್ನು ಮಾಡುವುದರಿಂದ ಅನೇಕ ಯಡವಟ್ಟುಗಳು ಆಗುತ್ತವೆ ಅನುಮಾನ ಇದ್ದೇ ಇದೆ.
ರಾಜ್ಯದಲ್ಲಿ ಒಟ್ಟಾರೆ ಕಬ್ಬಿನ ಬೆಳೆ ವರ್ಷಕ್ಕೆ 3.5ಕೋಟಿ ಟನ್. ಇದರಲ್ಲಿ 25ಲಕ್ಷ ಟನ್ ಬಿತ್ತನೆ ಬೀಜಕ್ಕೆ ಹೋಗುತ್ತದೆ. 70ಲಕ್ಷ ಟನ್ ಬೆಲ್ಲಕ್ಕೆ ಮೀಸಲು. ಮಿಕ್ಕಿದ 2 ಕೋಟಿ ಚಿಲ್ಲರೆ ಟನ್ ಸಕ್ಕರೆಗೆ ಬೇಕೇ ಬೇಕು. ಆದರೆ ಬೆಲೆ ಮಾತ್ರ ಅಷ್ಟೇ… ಟನ್ ಕಬ್ಬಿಗೆ 2700 ಅಂತ ಇಟ್ಟು ಕೊಂಡರೂ, ಸಾಗಾಣಿಕ ವೆಚ್ಚ 500 ರುಪಾಯಿಗಳನ್ನು ತೆಗೆದರೆ ಕೈಗೆ ಸಿಗುವುದು 2200. ಅಂದರೆ ಟನ್ ಮೇಲೆ 50ರೂ. ರೈತರಿಗೆ ಲಾಸು. ಇದನ್ನೇ ಆಲೇ ಮನೆ ಕಡೆಗೆ ಕಳುಹಿಸಿದರೆ ಕನಿಷ್ಠ 3ರಿಂದ 3.5ಸಾವಿರ ಗ್ಯಾರಂಟಿ ಸಿಗುತ್ತದೆ. ಕಾರ್ಖಾನೆ ಮುಂದೆ ನಿಂತು ಅಡ್ವಾನ್ಸ್ ಕೇಳ್ಳೋ ಹಾಗಿಲ್ಲ. ಕಬ್ಬು ಇಳಿಸಿ ಟವಲ್ ಒದರುವ ಹೊತ್ತಿಗೆ ಹಣ ಸಿಗುತ್ತಿದೆ. ಕಳೆದ ವರ್ಷದಿಂದ ನಿಜವಾಗಲೂ ರೈತರ ಕೈಹಿಡಿಯುತ್ತಿರುವುದು ಇದೇ ಬೆಲ್ಲ. ಮಂಡ್ಯ ಸುತ್ತಮುತ್ತಲೇ ಸುಮಾರು 2 ಸಾವಿರಕ್ಕೂ ಹೆಚ್ಚು ಆಲೆಮನೆಗಳಿವೆ. ಶೇ.90ರಷ್ಟು ಆಲೆ ಮನೆಗಳು ಕಬ್ಬು ಅರೆಯವ ಕಾಯಕ ಮಾಡುತ್ತಿವೆ. ಬಕೆಟ್ ಬೆಲ್ಲ, ಕುರಿಕಾಲು ಅಚ್ಚು, ಅಚ್ಚು, ಬಾಕ್ಸ್ ಬೆಲ್ಲ, ಉಂಡೆ ಬೆಲ್ಲಾ ಹೀಗೆ ಹಲವು ವಿಧಗಳಿವೆ. ಇದರಲ್ಲಿ ಬಕೆಟ್ ಬೆಲ್ಲಕ್ಕಷ್ಟೇ ಸ್ವಲ್ಪ ಬೆಲೆ ಕಡಿಮೆ. ಉಳಿದವಕ್ಕೆ ಹೆಚ್ಚು.
Related Articles
ರಾಜ್ಯದಲ್ಲಿ ಅಂದಾಜು 56 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿವರ್ಷಕ್ಕೆ ಇದಕ್ಕೆ ಕನಿಷ್ಠ 3ಸಾವಿರ ಟನ್ ಕಬ್ಬು ಬೇಕೇಬೇಕು. ನೀ ಕೊಡೆ ನಾ ಬಿಡೆ ಅನ್ನೋ ಹಠ ಮುಂದುವರೆದರೆ, ರೈತರು ಬೆಲ್ಲದ ಕಡೆ ಮುಖ ಮಾಡಿದರೆ ಗತಿ ಏನು? ಆಗ ಸಕ್ಕರೆ ಬೆಲೆ ಏನಾಗಬಹುದು? ಸುಮ್ಮನೆ ಲೆಕ್ಕ ಮಾಡೋಣ.
Advertisement
ಒಂದು ಟನ್‌ಕಬ್ಬಿನಿಂದ ಒಂದು ಕ್ವಿಂಟಾಲ್ ಬೆಲ್ಲ ಮಾಡಬಹುದು. ಇದರ ಒಟ್ಟಾರೆ ಖರ್ಚು 800 ರಿಂದ 1000. ಅದೇ ಒಂದು ಟನ್ ಕಬ್ಬಿನಿಂದ 110ಟನ್ ಕೆ.ಜಿ ಸಕ್ಕರೆ ತಯಾರಿಸಬಹುದು. ಒಂದು ಕೆ.ಜಿಗೆ 31ರೂ. (ಟನ್‌ಗೆ 3,100)ಬಂದರೂ ರೈತರಿಗೇನು ಏನು ಬಂತು ಭಾಗ್ಯ? ರಾಜ್ಯದಲ್ಲಿ ಒಟ್ಟಾರೆ 80ಸಾವಿರ ಆಲೆಮನೆಗಳಿವೆ. ವರ್ಷಕ್ಕೆ 70ಲಕ್ಷ ಟನ್ ಬೆಲ್ಲ ತಯಾರು ಮಾಡುತ್ತಿವೆ. ಅದೇ ಒಂದು ಕೆ.ಜಿ ಬೆಲ್ಲದ ಬೆಲೆ 44ರೂ. ಆದರೆ ರೈತರಿಗೆ ಟನ್ ಕಬ್ಬಿಗೆ ಆಲೆಮನೆಯವರು 2,800 ತನಕ ಕೊಡುತ್ತಾರೆ. ಕಳೆದ ವರ್ಷದಿಂದ ಆಲೆಮನೆಯ ಕಬ್ಬಿನ ಬೆಲೆ ಕನಿಷ್ಠ ಎರಡು ಸಾವಿರಕ್ಕಿಂತ ಕಡಿಮೆಯಾಗಿಲ್ಲ ಅನ್ನೋ ಮಾತಿದೆ. ಗುಣಮಟ್ಟದ ಬೆಲ್ಲ ನೀಡಿದರೆ ಬೆಲೆ ಏರಿಕೆ ಮಾಡಬಹುದು. ಇದರಿಂದ ರೈತರಿಗೆ ಟನ್‌ಗೆ 1000ರೂ.ಗೂ ಹೆಚ್ಚಿನ ಲಾಭವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಆಲೆಮನೆಯನ್ನು ನಡೆಸುವುದು ರೈತರೇ. ಹೀಗಾಗಿ, ಆಲೆಮನೆಗಳಲ್ಲಿ ಕಾರ್ಖಾನೆಗಳಲ್ಲಿರುವಂತೆ ದಬ್ಟಾಳಿಕೆ ಇರುವುದಿಲ್ಲ. ಒಂದು ಟನ್ ಕಬ್ಬು ಬೆಳೆಯಲು ಎರಡು ಸಾವಿರಕ್ಕೂ ಹೆಚ್ಚು ಖರ್ಚುತಗಲುತ್ತದೆ. . ಸಕ್ಕರೆ ಕೆ.ಜಿಗೆ 27ರೂ. ಇದ್ದರೂ ಇದು 50ರೂ. ದಾಟಿದರೂ ರೈತರಿಗೇನು ಲಾಭವಿಲ್ಲ. ಕಾರ್ಖಾನೆಗಳಿಗೆ ಉಪಉತ್ಪನ್ನಗಳಿಂದ ಟನ್‌ಗೆ 3,800ರೂ, ಆದಾಯವಿದ್ದರೂ ಚೌಕಾಸಿ ಮಾಡುತ್ತಾರೆ. ರೈತರಿಗೆ ನ್ಯಾಯವಾಗಿ ಕೊಡಬೇಕಾದ ಹಣ ಕೊಡದೆ ಸತಾಯಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳೂ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿಲ್ಲ ಅನ್ನೋ ರೈತರ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
– ಕೆ.ಜಿ