Advertisement

ಸಕ್ಕರೆ ಕಾರ್ಖಾನೆ ಪುನಶ್ಚೇತನ: ಶೀಘ್ರ ಉನ್ನತ ಮಟ್ಟದ ಸಭೆ

02:12 PM Dec 02, 2018 | Harsha Rao |

ಉಡುಪಿ: ಬ್ರಹ್ಮಾವರದಲ್ಲಿರುವ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ಏರ್ಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.

Advertisement

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಂಡು ಮತ್ತೆ ವ್ಯವಹಾರ ನಡೆಸಬೇಕೆಂಬುದು ನಮ್ಮ ಆಶಯ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ, ರೈತರು ಮುಂದೆ ಬಂದರೆ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಸಾಕಷ್ಟು ಮಾಹಿತಿ ದೊರಕಿದ್ದು, ಶೀಘ್ರವೇ ಈ ಬಗ್ಗೆ ಸಕ್ಕರೆ ಖಾತೆ ಸಚಿವರು ಹಾಗೂ ಸಕ್ಕರೆ ಇಲಾಖೆಯ ಆಯುಕ್ತರೊಂದಿಗೆ ನಾನು ಸಮಾಲೋಚಿಸಲಿದ್ದೇನೆ. ಕಾರ್ಖಾನೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ ರೈತರ ಹಿತಾಸಕ್ತಿಯೂ ಇರುವುದರಿಂದ ಉಭಯ ಜಿಲ್ಲೆಗಳ ಶಾಸಕರು, ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದ್ದು, ಸುಮಾರು 30 ಕೋಟಿ ರೂ. ಅಗತ್ಯವಿದೆ ಎಂದರು. 

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಯ ಮೂಲ ಉದ್ದೇಶವೇ ಕಬ್ಬು ಬೆಳೆಗೆ ನೀರೊದಗಿಸುವುದಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದರೆ ರೈತರೂ ಮುಂದೆ ಬರಲಿದ್ದಾರೆ. ವರ್ಷದಲ್ಲಿ ಕನಿಷ್ಠ 6 ತಿಂಗಳು ಕಬ್ಬು ದೊರೆಯುವಂತಾಗಬೇಕು ಎಂದು ಹೇಳಿದರು.

Advertisement

ಶಾಸಕರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌ ಅವರು ಕಾರ್ಖಾನೆಯ ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಕುಮಾರ್‌, ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ 
ಉಡುಪಿ
: ಕಲ್ಲುಕೋರೆ, ಮರಳುಗಾರಿಕೆ ಸೇರಿದಂತೆ ವಿವಿಧ ಖನಿಜ ಉತ್ಪನ್ನಗಳನ್ನು ತೆಗೆಯುವ ಪ್ರದೇಶಗಳಲ್ಲಿ ಉಂಟಾಗಿರುವ ಪ್ರಾಕೃತಿಕ ಅಸಮತೋಲನವನ್ನು ಸರಿಗೊಳಿಸಲು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯನ್ನು ಬಳಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದ್ದಾರೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಗಣಿಗಾರಿಕೆ ಪರವಾನಿಗೆ ಪಡೆದ ಲೈಸನ್ಸ್‌ದಾರರು ಸರಕಾರಕ್ಕೆ ಕಟ್ಟುವ ರಾಜಧನದಲ್ಲಿ ಶೇ. 10ರಷ್ಟು ಮೊತ್ತವನ್ನು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಲ್ಲಿ ಇಡಲಾಗುತ್ತಿದೆ. ಈ ನಿಧಿಯಿಂದ ಆ ಕಲ್ಲುಕೋರೆ ಇರುವ ಪ್ರದೇಶದಲ್ಲಿ ಮೂಲಸೌಕರ್ಯ, ಆರೋಗ್ಯ, ಕುಡಿಯುವ ನೀರು, ವಿದ್ಯುತ್‌, ಶಾಲಾ ಅಂಗನವಾಡಿಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದರು.

ಈ ನಿಧಿಯಡಿ ನಡೆಸಲಾಗುವ ಕಾಮ ಗಾರಿಗಳಿಗೆ ಆಯಾ ಕ್ಷೇತ್ರದ ಶಾಸಕರಿಂದ ಪ್ರಸ್ತಾವನೆ ಪಡೆದು ಕಾಮಗಾರಿ ಕೈಗೆತ್ತಿ
ಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯ ಸರಕಾರವು ಪ್ರತೀ ಜಿಲ್ಲೆಯಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಜಿಲ್ಲೆಯ ಶಾಸಕರು ಸೇರಿದಂತೆ ವಿವಿಧ ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎಂದು ಜಯಮಾಲಾ ವಿವರಿಸಿದರು.

ಶಾಲೆಗಳ ದುರಸ್ತಿ
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, ಉಡುಪಿ ಜಿಲ್ಲೆ ಯಲ್ಲಿ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಸುಮಾರು 1.36 ಕೋಟಿ ರೂ. ಮೊತ್ತ ಇದೆ. ಆಯಾ ಗಣಿಬಾಧಿತ ಗ್ರಾಮಗಳಲ್ಲಿ ಮೂಲಸೌಕರ್ಯ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳನ್ನು ಇದರಲ್ಲಿ ಕೈಗೆತ್ತಿ ಕೊಳ್ಳಬಹುದಾಗಿದೆ. ಶಾಲೆ,  ಅಂಗನವಾಡಿ ಗಳ ದುರಸ್ತಿಗೂ ಅವಕಾಶವಿದೆ. ಈಗಾ ಗಲೇ ಜಿಲ್ಲೆಯ 25 ಶಾಲೆಗಳನ್ನು ಹಾಗೂ 11 ಅಂಗನವಾಡಿಗಳನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದು ಹೇಳಿದರು.

 ಸಭೆಯಲ್ಲಿ ಶಾಸಕರಾದ ಲಾಲಾಜಿ ಮೆಂಡನ್‌, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪ್‌ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next