ಬೆಂಗಳೂರು: ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ನ. 15ರಿಂದ ಕಬ್ಬು ಅರೆಯಲು ಅನುಮತಿಸಿದ್ದು, ಸಕ್ಕರೆ ಮತ್ತು ಎಥೆನಾಲ್ ಮಾರಾಟಕ್ಕೂ ಕನಿಷ್ಠ ಬೆಲೆ ನಿಗದಿಪಡಿಸುವ ಕುರಿತ ಚರ್ಚೆಗಳೂ ಸರ್ಕಾರದ ಮಟ್ಟದಲ್ಲಿ ನಡೆದಿವೆ.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ವಿಕಾಸಸೌಧದಲ್ಲಿ ನಡೆದ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ (ಸಿಸ್ಮಾ) ಸಭೆಯಲ್ಲಿ ಈ ಕುರಿತು ಸಮಾಲೋಚಿಸಲಾಗಿದ್ದು, ಸಿಸ್ಮಾ ಮಂಡಿಸಿರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆ ಬಳಿಕ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಮಹಾರಾಷ್ಟ್ರದಲ್ಲಿಯೂ ನ.15ರಿಂದ ಕಬ್ಬು ಅರೆಯಲು ಕ್ರಮವಹಿಸಲು ಮನವಿ ಮಾಡಲಾಗುವುದು ಎಂದರು. ಆಯಾ ವರ್ಷದ ಸಕ್ಕರೆ ಇಳುವರಿ ಆಧರಿಸಿ ಕಬ್ಬಿಗೆ ನ್ಯಾಯಯುತ ಬೆಲೆ (ಎಫ್ಆರ್‌ಪಿ) ನಿಗದಿಪಡಿಸಬೇಕು. ಪ್ರತಿ ವರ್ಷ ಕಬ್ಬಿನ ಎಫ್ಆರ್‌ಪಿ ಹೆಚ್ಚಳ ಆಗುವಂತೆ ಸಕ್ಕರೆ ಮತ್ತು ಎಥೆನಾಲ್ ಮಾರಾಟಕ್ಕೂ ಕನಿಷ್ಠ ಬೆಲೆ ನಿಗದಿಪಡಿಸಬೇಕು.
ಸಕ್ಕರೆ ದಾಸ್ತಾನಿನ ಶೇ.20ರಷ್ಟು ಸೆಣಬಿನ ಚೀಲ ಬಳಕೆ ಕಡ್ಡಾಯಗೊಳಿಸಿರುವುದನ್ನು ತೆರವುಗೊಳಿಸಬೇಕು. ಸೆಣಬಿನ ಚೀಲಗಳನ್ನು ಬಳಕೆ ಮಾಡುತ್ತಿರುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗುತ್ತಿದ್ದು, ತೇವಾಂಶದಿಂದ ರಫ್ತು, ದಾಸ್ತಾನು ಮತ್ತಿತರ ಪ್ರಕ್ರಿಯೆಗಳಿಗೆ ಸಮಸ್ಯೆಗಳಾಗುತ್ತಿವೆ. ಹೀಗಾಗಿ ಸೆಣಬಿನ ಚೀಲ ಕಡ್ಡಾಯ ಮಾಡಬಾರದು ಎಂದು ಸಿಸ್ಮಾ ಪದಾಧಿಕಾರಿಗಳು ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಮುರುಗೇಶ ನಿರಾಣಿ, ಎಸ್.ಆರ್. ಪಾಟೀಲ, ಜಗದೀಶ ಗುಡಗುಂಟಿ, ಮಂಜುನಾಥ ಆರ್ ಕಬಾಡಿ, ಪ್ರಜ್ವಲ್ ಪಾಟೀಲ್, ಉದಯಕುಮಾರ ಪುರಾಣಿಕಮಠ, ಸಂತೋಷ್ ಮೆಳ್ಳಿಗೇರಿ, ಕೆ.ಎಂ. ಮಂಜಪ್ಪ, ವಾದಿರಾಜ, ಶಶಿಕಾಂತ್ ನಾಯಕ್, ವಿನಯ್ ದೇಶಪಾಂಡೆ, ರಮೇಶ್ ಪಾಟೀಲ್, ಸರವಣನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.