ಕಲಬುರಗಿ: ಚಿಂಚೋಳಿ ಜನರ ಎರಡು ದಶಕಗಳ ನಿರೀಕ್ಷೆಯಾದ ಸಕ್ಕರೆ ಕಾರ್ಖಾನೆಗೆ ಸೋಮವಾರ ಅಡಿಗಲ್ಲು ನೆರವೇರಿಸಲಾಗುತ್ತಿದೆ. ಈ ಹೊತ್ತಲ್ಲೇ ಈ ಕಾರ್ಖಾನೆ ತಲೆಎತ್ತಲಿರುವ ಜಮೀನಿಗೆ ಸಂಬಂಧಿಸಿದ 210 ಕೋಟಿ ರೂ. ಸಾಲದ ವಿಷಯ ಈಗ ಮುನ್ನೆಲೆಗೆ ಬರುತ್ತಿದೆ.
ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ರೋಗಗ್ರಸ್ತ ಕಾರ್ಖಾನೆಗಳ ಪುನಶ್ಚೇತನ ಯೋಜನೆಯಡಿ ಖರೀದಿಸಿದ ಜಮೀನಿನಲ್ಲಿ “ಸಿದ್ಧಸಿರಿ ಸಕ್ಕರೆ ಕಾರ್ಖಾನೆ, ಸಿದ್ಧಸಿರಿ ಇಥೆನಾಲ್ ಹಾಗೂ ಪವರ್ ಉತ್ಪಾದನಾ ಘಟಕ’ ಆರಂಭವಾಗಲಿದೆ.
ಇನ್ನು ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಸಹಕಾರಿ ಸಂಘದಡಿ ಸ್ಥಾಪಿಸಲು ದಶಕಗಳ ಹಿಂದೆಯೇ ಉದ್ದೇಶಿಸಿ, “ಚಿಂಚೋಳಿ ಶುಗರ್ಸ್ ಮಿಲ್ಸ್ ಲಿ. ಕಂಪನಿ’ ಆರಂಭಿಸಿ ಕಂಪನಿ ಕಾಯ್ದೆಯಡಿ 1995ರಲ್ಲಿ ನೋಂದಣಿ ಮಾಡಲಾಗಿತ್ತು. ಬಳಿಕ ಈ ಕಂಪನಿ ಆಡಳಿತ ಮಂಡಳಿ ಇದನ್ನು ಹೈದ್ರಾಬಾದ್‌ನ ಟಬೋì ಇಂಡಸ್ಟ್ರೀಸ್ ಮತ್ತು ಮೆಷಿನರೀಸ್ ಮಾಲೀಕ ಟಿ. ಸುಬ್ಬರಾಯಡು ಅವರಿಗೆ ಮಾರಾಟ ಮಾಡಿತ್ತು. ರಾಜ್ಯ ಸರ್ಕಾರ ಕೆಐಎಡಿಬಿ ಸಂಸ್ಥೆ ಮುಖಾಂತರ ಕಾರ್ಖಾನೆ ಸ್ಥಾಪನೆಗೆಂದು 97.13 ಎಕರೆ ಜಮೀನು ಮಂಜೂರು ಮಾಡಿತು. ಈ ಭೂಮಿ ಸಾಕಾಗಲ್ಲ ಎಂದು ಕಂಪೆನಿ ಆಡಳಿತ ಮಂಡಳಿ 110 ಎಕರೆ ರೈತರ ಖಾಸಗಿ ಭೂಮಿ ಖರೀದಿಸಿತ್ತು.
ಈ ರೈತರಿಂದ ಖರೀದಿಸಿದ ಹಾಗೂ ಕೆಐಎಡಿಬಿ ನೀಡಿದ ಭೂಮಿ ಮೇಲೆ ಒಟ್ಟು 210 ಕೋಟಿ ರೂ. ಸಾಲ ಪಡೆಯಿತು. ಆದರೆ ಕಾರ್ಖಾನೆ ಸ್ಥಾಪನೆಗೆ ಬದಲಾಗಿ ಇತರೆ ಉದ್ದೇಶಗಳಿಗೆ ಈ ಹಣ ಬಳಕೆ ಮಾಡಲಾಯಿತು ಎಂಬ ಆರೋಪ ಕೇಳಿಬಂದಿತ್ತು. 2016ರಲ್ಲಿ ಆಗಿನ ಸಿಐಡಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಹೇಮಂತ ನಿಂಬಾಳಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ವರದಿ ಸಲ್ಲಿಸಿದ್ದರು. ಇದರ ನಡುವೆ ಕಾರ್ಖಾನೆಗೆ ರೈತರಿಂದ ಕಬ್ಬು ಪೂರೈಸಲಾಗುವುದು ಎಂದು ಹೇಳಿ ರೈತರ ಹೆಸರಿನಲ್ಲೂ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಎತ್ತಲಾಗಿದೆ. ಈ ವಿಷಯ ಸದ್ಯ ನ್ಯಾಯಾಲಯದಲ್ಲಿದೆ ಎನ್ನಲಾಗಿದೆ.
ಒಟ್ಟಾರೆ ಸಾಲ ಎತ್ತುವಳಿ ಹಾಗೂ ವಂಚನೆ ಪ್ರಕರಣವನ್ನು ಸಿಐಡಿ ಗಮನಕ್ಕೆ ತರುವಲ್ಲಿ ಹಾಗೂ ರೈತರಿಗೆ ನ್ಯಾಯ ಕೊಡಿಸಲು ಮಾಜಿ ಸಚಿವ ದಿ| ವೈಜನಾಥ ಪಾಟೀಲ ರೈತರೊಂದಿಗೆ ಹತ್ತಾರು ಹೋರಾಟ ಮಾಡಿದ್ದರು. ಈ ನಡುವೆ ಕಾರ್ಖಾನೆ ಸ್ಥಾಪನೆಯಾಗದ್ದಕ್ಕೆ ಕಾರಣರಾದವರು ಹಾಗೂ ರೈತರ ಜತೆ ಚೆಲ್ಲಾಟವಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿಬಂದಿದೆ.
ಇನ್ನೊಂದೆಡೆ ಎರಡು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿರುವ ತಮಗೆ ಈ ಕಾರ್ಖಾನೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಕಚೇರಿಯಲ್ಲಿ ದಾಖಲಾತಿಗಳಿದ್ದರೆ ಪರಿಶೀಲನೆ ನಡೆಸುವುದಾಗಿ ಚಿಂಚೋಳಿ ತಹಶೀಲ್ದಾರ್ ಅಂಜುಂ ತಬ್ಸುಮ್ ತಿಳಿಸಿದ್ದಾರೆ.
ಚಿಂಚೋಳಿ ಶುಗರ್ಸ್ ಮಿಲ್ಸ್ ಲಿ. ಕಂಪನಿಯನ್ನು ನಿರ್ದೇಶಕರ ಗಮನಕ್ಕೂ ತಾರದೆ ರಾತೋರಾತ್ರಿ ಬೇರೆಯವರಿಗೆ ಹೇಗೆ ಮಾರಾಟ ಮಾಡಲಾಯಿತು ಎಂಬುದೇ ತಿಳಿಯುತ್ತಿಲ್ಲ. ಹೇಗಾದರೂ ಆಗಲಿ ಸಕ್ಕರೆ ಕಾರ್ಖಾನೆ ಶುರುವಾಗಲಿ ಎಂಬುದೇ ತಮ್ಮ ಉದ್ದೇಶವಾಗಿತ್ತು. ಆದರೆ 210 ಕೋಟಿ ರೂ. ಸಾಲದ ಹೊಣೆಗಾರರ ವಿರುದ್ಧ ಹಾಗೂ ತಮಗಾದ ಅನ್ಯಾಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.
-ಡಾ|ವಿಕ್ರಂ ವೈಜನಾಥ ಪಾಟೀಲ, ಎಂಎಸ್‌ಐಎಲ್ ಮಾಜಿ ಅಧ್ಯಕ್ಷ