ಯಾದಗಿರಿ: ಕಳೆದ 9 ತಿಂಗಳಿನಿಂದ ಕಬ್ಬು ಬೆಳಗಾರರ ಬಾಕಿ ಪಾವತಿಸದ ಕೋರ್ ಗ್ರೀನ್ ಶುಗರ್ ಕಂಪೆನಿಯ ಹಣ ಪಾವತಿಸುವ ಲಿಖಿತ ಗಡುವು ಮುಗಿದರೂ ಜಿಲ್ಲಾಡಳಿತ ಮೃದು ಧೋರಣೆ ತೋರುತ್ತಿದೆಯೇ ಎನ್ನುವ ಮಾತುಗಳು ಕೇಳಿಬರುತ್ತಿದೆ.
ವಡಗೇರಾ ತಾಲೂಕಿನ ತುಮಕೂರಿನ ಸಕ್ಕರೆ ಕಾರ್ಖಾನೆ ರೈತರಿಂದ ಕಬ್ಬು ಪಡೆದು ಸಕಾಲಕ್ಕೆ ಹಣ ನೀಡದೇ ಇರುವುದರಿಂದ ಕಬ್ಬು ಬೆಳೆದ ರೈತರ ಸಂಕಷ್ಟದ ಕುರಿತು ಉದಯವಾಣಿ ಜೂನ್ 7ರಂದು ಮುಂಗಾರು ಬಿತ್ತನೆಗೆ ಸಕ್ಕರೆ ಬಾಕಿ ಸಂಕಷ್ಟ ಶೀರ್ಷಿಕೆಯಡಿ ವಿಶೇಷ ಸುದ್ದಿ ಪ್ರಕಟಿಸಿತ್ತು. ಇಷ್ಟಾದರೂ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡು ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ರೈತಾಪಿವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ಕಾರ್ಖಾನೆ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ (ಹಸಿರುಸೇನೆ) ತಾಲೂಕು ಅಧ್ಯಕ್ಷ ಮಂಜು ಗೌಡ ನೇತೃತ್ವದಲ್ಲಿ ಯಾದಗಿರಿ ಮತ್ತು ಕಲಬುರಗಿಯ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿ, ತಕ್ಷಣ ಬಾಕಿ ಪಾವತಿಸುವಂತೆ ಆಗ್ರಹಿಸಿದ್ದು ತಕ್ಷಣವೇ ಬಾಕಿ ಪಾವತಿಸಬೇಕು ಇಲ್ಲವಾದಲ್ಲಿ ಕಾರ್ಖಾನೆಗೆ ನುಗ್ಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಂತರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರೊಂದಿಗೆ ಮಾತುಕತೆಗೆ ಆಗಮಿಸಿ ಮತ್ತೆ ಜುಲೈ 20ನೇ ತಾರೀಖಿನ ವರೆಗೆ ಕಾಲಾವಕಾಶ ಕೇಳಿದರು. ಈಗಾಗಲೇ ಕಾಲಾವಕಾಶ ನೀಡಲಾಗಿದೆ ಮತ್ತೆ ಕಾಲಾವಕಾಶ ನೀಡಲಾಗದು ಎಂದು ರೈತರು ಪಟ್ಟು ಹಿಡಿದಾಗ ನಂತರ ಸಂಬಂಧಿಸಿದ ಅಧಿಕಾರಿಗಳು ಮಾತನಾಡಿ ಜುಲೈ 20ರ ವರೆಗೆ ಕಾಲಾವಕಾಶ ನೀಡುವಂತೆ ತಿಳಿಸಿದ ನಂತರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಲಿಖಿತ ರೂಪದ ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಮೃದು ಧೋರಣೆ ಏಕೆ?: ಈ ಹಿಂದೆಯೇ ಕಾರ್ಖಾನೆ ಆಡಳಿತ ಮಂಡಳಿಗೆ ಜಿಲ್ಲಾಡಳಿತ ಮೇ 12ರಂದು ನೋಟಿಸ್ ನೀಡಿ ಎಲ್ಲಾ ರೈತರ ಬಾಕಿ ಹಣವನ್ನು ಪಾವತಿಸುವಂತೆ ಸೂಚಿಸಿದೆ. ಇದಕ್ಕೆ ಲಿಖಿತ ಉತ್ತರ ನೀಡಿರುವ ಕಾರ್ಖಾನೆ ಜೂನ್ ಅಂತ್ಯದವರೆಗೆ ಪಾವತಿಸುವ ಭರವಸೆ ನೀಡಿತ್ತು ಎಂದು ಹಿರಿಯ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ. ಆದರೇ ಇದೀಗ ಜುಲೈ ಆರಂಭವಾಗಿದ್ದರೂ ಹಣ ಪಾವತಿ ಮಾಡದೇ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
2355 ರೈತರಿಂದ 2.36 ಲಕ್ಷ ಮೆಟ್ರಿಕ್ ಟನ್ ಕಬ್ಬು ಪಡೆದಿದ್ದು, ಜೂನ್ ಮೊದಲ ವಾರದ ಮಾಹಿತಿ ಪ್ರಕಾರ 23.19 ಕೋಟಿ ಹಣ ಪಾವತಿಸುವುದು ಬಾಕಿಯಿತ್ತು. ಆದರೇ ಕಾರ್ಖಾನೆಯವರು ಹಂತ ಹಂತವಾಗಿ ರೈತರಿಗೆ ಹಣ ಪಾವತಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರ್ಖಾನೆ ಜುಲೈ 3 ರಂದು ರೈತರಿಗೆ ನೀಡಿರುವ ಭರವಸೆ ಪತ್ರದಲ್ಲಿ 31 ರೈತರು ಹಣ ಕೇಳುವುದಕ್ಕೆ ಬಂದಿದ್ದರು ಅವರಿಗೆ ಜುಲೈ 20 ರವರೆಗೆ ಹಣ ಪಾವತಿಸಲು ಒಪ್ಪಿದ್ದೇವೆ ಎಂದು ಬರೆದುಕೊಟ್ಟು ಚಾಲಾಕಿತನ ತೋರಿದ್ದಾರೆ. ಇನ್ನೂ ಬಾಕಿ ಉಳಿಸಿಕೊಂಡಿರುವ ಎಲ್ಲಾ ರೈತರಿಗೆ ತ್ವರಿತವಾಗಿ ಪಾವತಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕಿದೆ.