ವರದಿ: ಕೇಶವ ಆದಿ
ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ನವೆಂಬರ್‌ದಿಂದ ಆರಂಭ ಮಾಡಬೇಕು ಎಂಬ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ನಿರ್ಧಾರ ಕಬ್ಬು ಬೆಳೆಗಾರರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಮೈಸೂರು ಭಾಗದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿ ಮೂರು ತಿಂಗಳಾಗಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ತಕ್ಷಣವೇ ದಸರಾದಿಂದಲೇ ಕಬ್ಬು ನುರಿಸುವ ಕಾರ್ಯ ಆರಂಭ ಮಾಡಬೇಕು ಎಂದು ರೈತರು ಹೋರಾಟ ನಡೆಸಿದ್ದಾರೆ. ಹೀಗಿರುವಾಗ ನ.1ರಿಂದ ಹೊಸ ಹಂಗಾಮು ಆರಂಭಿಸಬೇಕು ಎಂದು ನಿರ್ಧರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ. ಉತ್ತರ ಕರ್ನಾಟಕದ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ನ.1ರಿಂದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭ ಮಾಡುವ ನಿರ್ಣಯದ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಮುಂದಾಗಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಮತ್ತು ಸಕ್ಕರೆ ಸಚಿವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಮತ್ತೆ ರೈತರ ಶೋಷಣೆ: ನ.1ರಿಂದ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು ಎಂಬುದು ರೈತರ ಶೋಷಣೆಯ ಒಂದು ಭಾಗ. ತಡವಾಗಿ ಕಬ್ಬು ನುರಿಸುವ ಕಾರ್ಯ ಆರಂಭ ಮಾಡಿದರೆ ಆಗ ಸಕ್ಕರೆ ಕಾರ್ಖಾನೆಗಳ ಮೇಲೆ ಹೊರೆ ಕಡಿಮೆಯಾಗುತ್ತದೆ. ಕಬ್ಬಿನ ತೂಕದಲ್ಲಿ ಕಡಿಮೆಯಾಗುತ್ತದೆ. ಕಟಾವು ಮತ್ತು ಸಾರಿಗೆ ವೆಚ್ಚ ರೈತರ ಮೇಲೆ ಬೀಳುತ್ತದೆ. ಕಬ್ಬಿನ ಹಣ ಸಹ ವಿಳಂಬವಾಗಿ ಪಾವತಿಯಾಗುತ್ತದೆ ಎಂಬುದು ಕಬ್ಬು ಬೆಳೆಗಾರರ ಆತಂಕ. ರಾಜ್ಯದ ರೈತರ ಬದುಕು ಮೊದಲೇ ಶೋಚನೀಯವಾಗಿದೆ. ನಷ್ಟದ ಮೇಲೆ ನಷ್ಟ ಎದುರಾಗಿದೆ. ಸಾಲದ ಹೊರೆ ಹೆಚ್ಚಾಗಿದೆ. ಕೈಯಲ್ಲಿ ಬಿಡಿಗಾಸು ಇಲ್ಲದ ಸ್ಥಿತಿ ಇದೆ. ಹೀಗಿರುವಾಗ ಕಬ್ಬು ನುರಿಸುವ ಕಾರ್ಯವನ್ನು ಒಂದು ತಿಂಗಳ ಕಾಲ ಮುಂದೂಡಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಕಾರಣ ಸರ್ಕಾರ ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಬಲಿಯಾಗದೆ ತಕ್ಷಣದಿಂದಲೇ ಕಬ್ಬು ನುರಿಸಲು ಆದೇಶ ಮಾಡಬೇಕು ಎಂಬುದು ಕಬ್ಬು ಬೆಳೆಗಾರರ ಒತ್ತಾಯ.
ಎಲ್ಲೆಲ್ಲಿ ಎಷ್ಟು ಕಾರ್ಖಾನೆಗಳು?: ರಾಜ್ಯದಲ್ಲಿ ಈಗ 67 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಶೇ.90ರಷ್ಟು ಸಕ್ಕರೆ ಕಾರ್ಖಾನೆಗಳು ಉತ್ತರ ಕರ್ನಾಟಕದಲ್ಲಿವೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 26 ಸಕ್ಕರೆ ಕಾರ್ಖಾನೆಗಳಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ 11, ವಿಜಯಪುರದಲ್ಲಿ ಆರು, ಬೀದರದಲ್ಲಿ ಮೂರು, ಕಲಬುರಗಿಯಲ್ಲಿ ಐದು, ಹಾವೇರಿಯಲ್ಲಿ ಒಂದು, ಗದಗ ಜಿಲ್ಲೆಯಲ್ಲಿ ಎರಡು, ದಾವಣಗೆರೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿದ್ದರೆ ಮಂಡ್ಯದಲ್ಲಿ ಐದು ಮತ್ತು ಮೈಸೂರಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿವೆ.