Advertisement

ಜಲಕ್ಷಾಮಕ್ಕೆ ಮುನ್ನವೇ ಎಚ್ಚೆತ್ತ ಅಧಿಕಾರಿಗಳು

02:14 PM Apr 14, 2022 | Team Udayavani |

ಔರಾದ: ಪಟ್ಟಣದ ಜನತೆಗೆ ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸಲು ಪಪಂ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಪಟ್ಟಣದ ನಿವಾಸಿಗಳು ಕುಡಿಯುವ ನೀರಿಗಾಗಿ ರಸ್ತೆಯಲ್ಲಿ ನಿಂತು ಹೋರಾಟ, ಪ್ರತಿಭಟನೆ ಮಾಡಿದ ನಂತರವೇ ಜಾಗೃತರಾಗುತ್ತಿದ್ದ ಅಧಿಕಾರಿಗಳು, ಈ ಭಾರಿ ಸಮಸ್ಯೆ ಬರುವ ಮುನ್ನವೇ ಕೆಲಸ ಮಾಡುತ್ತಿರುವುದು ಸಂತಸದ ವಿಷಯವಾಗಿದೆ.

ಇಪ್ಪತ್ತು ವಾರ್ಡ್‌ ಗಳಿಂದ ಕೂಡಿದ ಔರಾದ ಪಟ್ಟಣದಲ್ಲಿ ಇಪ್ಪತೈದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಅದರಂತೆ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ತಾಲೂಕಿನ ತೇಗಂಪೂರ ಹಾಗೂ ಹಲ್ಲಳ್ಳಿ ಗ್ರಾಮದಿಂದ ನೀರಿನ ಪೈಪ್‌ಲೈನ್‌ ಹಾಕಿದರೂ ಕೂಡಾ ಪ್ರತಿವರ್ಷ ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆ ಇಲ್ಲದಿರುವುದರಿಂದ ಬೇಸಿಗೆಯಲ್ಲಿ ಇಲ್ಲಿನ ನಿವಾಸಿಗಳು ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ಆದರೆ, ಈ ವರ್ಷ ಜಲಕ್ಷಾಮ ಆಗುವುದಿಲ್ಲ ಎಂಬುದು ಅಧಿಕಾರಿಗಳ ಹಾಗೂ ಸದಸ್ಯರ ಮಾತು.

ಮುಂಜಾಗ್ರತಾ ಕ್ರಮ: ಪಟ್ಟಣದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಪಪಂ ಸರ್ವ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ತಾಲೂಕಿನ ತೇಗಂಪೂರ ಕೆರೆಯಲ್ಲಿ 40 ಎಚ್‌ಪಿ ಮೋಟರ್‌ ಅಳವಡಿಸಿ ಪಟ್ಟಣಕ್ಕೆ ನಾಲ್ಕು ದಿನಗಳಿಂದ ನೀರು ಸರಬರಾಜು ಮಾಡುತ್ತಿದ್ದಾರೆ. ಅದರಂತೆ ನೆರೆಯ ಮಹಾರಾಷ್ಟ್ರದಲ್ಲಿನ ಸಿಂದಿ ಕುಮುಟಾ ಎನ್ನುವ ಗ್ರಾಮದಲ್ಲಿನ ಡ್ಯಾಮ್‌ಗೆ ಅಧಿಕಾರಿಗಳು, ಸದಸ್ಯರು ತೆರಳಿ ಡ್ಯಾಮ್‌ನ ಗೇಟ್‌ ಗಳನ್ನು ಓಪನ್‌ ಮಾಡಿಸಿದ್ದರಿಂದ ಹಲ್ಲಳ್ಳಿ ಗ್ರಾಮಕ್ಕೆ ನೀರು ಬಂದಿದೆ. ಅಲ್ಲಿಂದ ಪಟ್ಟಣಕ್ಕೆ ನಿರಂತರ ನೀರು ಪೂರೈಸಲಾಗುತ್ತಿದೆ. ಅದಲ್ಲದೆ ಪಟ್ಟಣದಲ್ಲಿ ಇನ್ನೂ ಆರು ವಾರ್ಡ್‌ಗಳಲ್ಲಿ ಪ್ರತ್ಯೇಕ ಕೊಳವೆ ಬಾವಿ ಕೊರೆಸಲಾಗಿದ್ದು, ಈ ಪೈಕಿ ಐದು ಬೋರ್‌ವೆಲ್‌ ಗಳಲ್ಲಿ ನೀರು ಬಿದ್ದಿದೆ. ಐದರ ಪೈಕಿ ನಾಲ್ಕು ಕೊಳವೆ ಬಾವಿಯಲ್ಲಿ ಮೋಟಾರ್‌ ಅಳವಡಿಸಿ ಓಣಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂಳಿದ ಒಂದು ಕೊಳವೆ ಬಾವಿಗೂ ಮೋಟರ್‌ ಅಳವಡಿಸುವ ಕಾಯಕದಲ್ಲಿದ್ದಾರೆ ಅಧಿಕಾರಿಗಳು.

ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಶೇ.99ರಷ್ಟು ನೀರಿನ ಸಮಸ್ಯೆ ಬರುವುದಿಲ್ಲ. ಪಟ್ಟಣ ಪಂಚಾಯತ್‍ನಿಂದ ಎಲ್ಲ ತಯಾರಿ ಮಾಡಿಕೊಂಡು ಜನತೆಗೆ ಬೇಸಿಗೆ ಪೂರ್ತಿ ನೀರು ಪೂರೈಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜನರು ಕೂಡಾ ನೀರನ್ನು ಮೀತವಾಗಿ ಬಳಸಬೇಕು. -ಶಿವಕುಮಾರ ಘಾಟೆ, ಪಪಂ ಮುಖ್ಯಾಧಿಕಾರಿ, ಔರಾದ

Advertisement

ಈ ವರ್ಷ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳು ಸೇರಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಬರಲ್ಲ ಎನ್ನುವ ನಂಬಿಕೆ ಇದೆ. -ಅಂಬಿಕಾ ಪಂವಾರ, ಪಪಂ ಅಧ್ಯಕ್ಷ

-ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next