Advertisement

ವಿವಿ ಸಾಗರ ಹಿನ್ನೀರು ತಂದ ಸಂಕಟ; ಹೊಸದುರ್ಗ ತಾಲೂಕಿಗೆ ಸಂಕಷ್ಟ

04:18 PM Sep 12, 2022 | Team Udayavani |

ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯ ತುಂಬಿ ಕೋಡಿ ಬೀಳುವುದು ಇಡೀ ಚಿತ್ರದುರ್ಗದ ಜನರ ಕನವರಿಕೆಯಾಗಿತ್ತು. ಇಂಥದ್ದೊಂದು ಕ್ಷಣಕ್ಕಾಗಿ ಎಲ್ಲರೂ ಹಂಬಲಿಸಿದ್ದರು. ಪವಾಡ ಎಂಬಂತೆ ನಿರೀಕ್ಷೆ ಮೀರಿ ಎಲ್ಲವೂ ನಡೆದು ಹೋಗಿದೆ. 130 ಅಡಿಗೆ ನೀರು ತಲುಪುತ್ತಿದ್ದಂತೆ ತಾಯಿ ವೇದಾವತಿ ಕೋಡಿಯ ಮೂಲಕ ಹೊರಗೆ ಕಾಲಿಟ್ಟಿದ್ದೂ ಆಯಿತು. ಆನಂತರ ಈ ಮಟ್ಟ 135 ಅಡಿ ತಲುಪಿದೆ. ಡ್ಯಾಂನ ಎತ್ತರ 142 ಅಡಿವರೆಗೆ ಇದ್ದರೂ, ಜಲಾಶಯ ನಿರ್ವಹಣಾ ತಂಡ ನೀರಿನ ಮಟ್ಟವನ್ನು 135 ಅಡಿವರೆಗೆ ಮಾತ್ರ ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

Advertisement

ದಿನವೂ 14 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಕೋಡಿ ಹಾಗೂ ತೂಬಿನ ಮೂಲಕ ಹೊರಗೆ ಬಿಡಲಾಗುತ್ತಿದೆ. ಜಲಾಶಯ ಭರ್ತಿಯಾಗಿ ಹೊಸದುರ್ಗ ತಾಲೂಕಿನ ಹಲವು ಗ್ರಾಮಗಳು, ಜಮೀನು, ತೋಟಗಳು ಮುಳುಗಡೆಯಾಗಿ ರೈತರು ಸಂಕಟ ಅನುಭವಿಸುತ್ತಿದ್ದಾರೆ.

ಕೋಡಿಯ ಮಟ್ಟ ತಗ್ಗಿಸಬೇಕೇ?: ವಾಣಿವಿಲಾಸ ಜಲಾಶಯ ಕೋಡಿ ಬಿದ್ದ ನಂತರ ಜಲಾಶಯದ ಅಕ್ಕ-ಪಕ್ಕದ ಹಾಗೂ ಹಿನ್ನೀರು ಪ್ರದೇಶದ ರೈತರ ಬವಣೆ ಹೇಳತೀರದಾಗಿದೆ. ಪೂಜಾರಹಟ್ಟಿ ಗ್ರಾಮವೇ ಮುಳುಗಡೆ ಆಗಿದೆ. ಅರೇಹಳ್ಳಿ, ಅತ್ತಿಮಗ್ಗೆ, ಬಂಟನಗವಿ, ನಾಗತಿಹಳ್ಳಿ, ಅಯ್ಯನಹಳ್ಳಿ, ಬೇವಿನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನಿಂದ ಸಮಸ್ಯೆಯಾಗಿದೆ. ನೂರಾರು ರೈತರ ಜಮೀನುಗಳು ಮುಳುಗಡೆಯಾಗಿವೆ. ಜನರನ್ನು ಕಾಳಜಿ ಕೇಂದ್ರದಲ್ಲಿಡಲಾಗಿದೆ.
ಸಣ್ಣ ಪುಟ್ಟ ಹಳ್ಳಿಗಳ ರಸ್ತೆ, ಸೇತುವೆ, ಹೊಲ ಗದ್ದೆಗಳ ಜಾಡುಗಳು ಕಣ್ಮೆರೆಯಾಗಿವೆ.

ಈ ಹಂತದಲ್ಲಿ ಹೊಸದೊಂದು ಚರ್ಚೆ ನಡೆಯುತ್ತಿದ್ದು, ವಿವಿ ಸಾಗರದ ಕೋಡಿಯ ಮಟ್ಟ ಸದ್ಯ 130 ಅಡಿಗೆ ಇದ್ದು, ಇದನ್ನು 125 ಅಡಿಗೆ ಇಳಿಸಿದರೆ ಹಿನ್ನೀರು ಭಾಗದ ರೈತರಿಗೆ ಸಂಕಷ್ಟ ತಪ್ಪಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ನೀರಿನ ಮಟ್ಟ 125 ಅಡಿಗೆ ಬಂದ ತಕ್ಷಣ ಕೋಡಿ ಬಿದ್ದರೆ ಹಿಂಭಾಗದ ರೈತರು ಉಳಿಯುತ್ತಾರೆ. ಯಥೇತ್ಛವಾಗಿ ಮಳೆಯಾಗದಿದ್ದರೆ 125 ಅಡಿಗಿಂತ ಹೆಚ್ಚು ಬಂದ ನೀರನ್ನು ಹರಿಸುವುದರಿಂದ ಜಲಾಶಯದ ಮುಂಭಾಗದ ಹಿರಿಯೂರು, ಚಳ್ಳಕೆರೆ ಭಾಗದಲ್ಲೂ ಅಂತರ್ಜಲ ಹೆಚ್ಚಾಗಿ ಇಲ್ಲಿನ ರೈತರು ಬೆಳೆ ಬೆಳೆದುಕೊಳ್ಳಬಹುದು. ಇಳಿಸುವುದರಿಂದ ಎರಡು ಲಾಭಗಳಿವೆ ಎನ್ನುವುದು ಒಂದು
ಮೂಲದ ವಾದವಾಗಿದೆ.

ಭೂಸ್ವಾಧೀನ, ಪರಿಹಾರ ಕಾರ್ಯಸಾಧುವೇ?: ಇದೇ ವೇಳೆ ಮತ್ತೂಂದು ಆಯಾಮದ ಚರ್ಚೆಯೂ ನಡೆದಿದ್ದು, ಹಿನ್ನೀರು ಭಾಗದಲ್ಲಿರುವ ರೈತರ ಮುಳುಗಡೆಯಾಗುವ ಭೂಮಿಗೆ ಪರಿಹಾರ ನೀಡಿ ಭೂಸ್ವಾ ಧೀನ ಮಾಡಿಕೊಂಡರೆ ಹೇಗೆ ಎಂಬ ಚಿಂತನೆಯೂ ನಡೆದಿದೆ. ಜಲಾಶಯದ ನೀರಿನ ಮಟ್ಟ 130 ಅಡಿವರೆಗೆ ಬಂದರೆ ಇನ್ನೂ 5 ಅಡಿ ಹೆಚ್ಚು ನೀರು ಸಂಗ್ರಹಿಸಬಹುದು. ಅದನ್ನು 125 ಅಡಿಗೆ ಇಳಿಸಿದರೆ ಜಲಾಶಯ ಮಟ್ಟ ಕಡಿಮೆಯಾಗುತ್ತದೆ. ಇಂತಹ ಮಳೆಗಾಲ ಎಲ್ಲಾ ಕಾಲಕ್ಕೂ ಹೀಗೆಯೇ ಇರಲಾರದು ಎನ್ನುವ ವಾದವೂ ಇದೆ. ಆದರೆ ಹೇಗಿದ್ದರೂ ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ 2 ಟಿಎಂಸಿ ನೀರು ಹಂಚಿಕೆಯಾಗಿದೆ.

Advertisement

ಪ್ರತಿ ವರ್ಷ 2 ಟಿಎಂಸಿ ನೀರು ಹರಿದರೆ ಅದರ ಜೊತೆಗೆ ಮಳೆ ನೀರು ಸೇರಿದರೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು. ಹಾಗಾಗಿ ಜಲಾಶಯದ ಹಿಂಭಾಗದ ಹೊಸದುರ್ಗ ತಾಲೂಕಿನ ರೈತರ ಹಿತದೃಷ್ಟಿಯನ್ನೂ ಕಾಯಬೇಕಿದೆ ಎನ್ನುವುದು ಅಲ್ಲಿನ ರೈತರ ಮನವಿ.

ಹೊಸದುರ್ಗ ತಾಲೂಕಿನ ರೈತರ ಜಮೀನುಗಳಲ್ಲಿ ನೀರು ನಿಂತು ಸಾಕಷ್ಟು ತೊಂದರೆಯಾಗಿದೆ. ಇದು ನನಗೂ ನೋವು ತಂದಿದೆ. ಈ ರೈತರಿಗೆ ಸರಿಯಾದ ಪರಿಹಾರ ಸಿಗಬೇಕು. ಆದರೆ ಜಲಾಶಯದ ಕೋಡಿ ಮಟ್ಟವನ್ನು 125 ಅಡಿಗೆ ಇಳಿಸುವುದು ಅವೈಜ್ಞಾನಿಕ ಕ್ರಮವಾಗುತ್ತದೆ. ಈ ಬಗ್ಗೆ ನಮಗೆ ಸರಿಯಾದ ತಾಂತ್ರಿಕ ಮಾಹಿತಿ ಇಲ್ಲ. ಎಷ್ಟೋ ವರ್ಷಗಳ ನಂತರ ನೀರು ಬಂದಿದ್ದು, ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಪೂರ್ಣಿಮಾ ಶ್ರೀನಿವಾಸ್‌,
ಹಿರಿಯೂರು ಶಾಸಕರು

ಜಲಾಶಯಕ್ಕಾಗಿ ಹಿಂದೆ ಭೂಸ್ವಾಧೀನ ಆಗಿರುವ ಭೂಮಿ ಬಿಟ್ಟು ಇತರೆ ರೈತರ ಜಮೀನು, ಗ್ರಾಮಗಳು ಮುಳುಗಡೆ ಆಗಿವೆ. ಅವರಿಗೆ ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ. ಇದರೊಟ್ಟಿಗೆ 125 ಅಡಿಗೆ ನೀರು ಬಿಡಲು ಅನುಕೂಲವಾಗುವಂತೆ ಒಂದು ಗೇಟ್‌ ಮಾಡಿ, ಅತಿಯಾದ ಮಳೆಯಾಗಿ ನೆರೆಯಂತೆ ಬರುವ ನೀರನ್ನು ಹೊರ ಬಿಟ್ಟು ಆನಂತರ ಬರುವ ನೀರನ್ನು 130 ಅಡಿವರೆಗೆ ನಿಲ್ಲಿಸಿದರೆ ಅಷ್ಟಾಗಿ ತೊಂದರೆ ಆಗುವುದಿಲ್ಲ. ಆದರೆ ಈಗ 135 ಅಡಿವರೆಗೆ ನೀರು
ನಿಂತಿದೆ. ಹರಿದು ಬರುತ್ತಿರುವ ನೀರಿನ ಪ್ರಮಾಣ ಸೇರಿದರೆ 140 ಅಡಿಯಷ್ಟಾಗಿದೆ.
ಗೂಳಿಹಟ್ಟಿ ಡಿ. ಶೇಖರ್‌, ಹೊಸದುರ್ಗ
ಶಾಸಕರು

*ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next