Advertisement

ಹೀಗೂ ಉಂಟು ಬತ್ತಿದ ಬಾವಿಯಲ್ಲಿ ನೀರು ಬಂತು

08:13 PM Mar 22, 2017 | Karthik A |

ಮಹಾನಗರ: ನೀರಿಗಾಗಿ ಊರೂರೇ ಗುಳೆ ಹೋಗುವ ಹೊತ್ತಿನಲ್ಲಿ ಹುರುಪು ತುಂಬುವ ಸಾಧನೆಯಿದು.

Advertisement

ಪ್ರಸಂಗ ಒಂದು
ಮಂಗಳೂರು ತಾಲೂಕಿನ ಮಲ್ಲೂರಿನ ಕುಟ್ಟಿಕುಳ ಗ್ರಾಮದಲ್ಲಿ 20 ಕುಟುಂಬಗಳು ವಾಸಿಸಿದ್ದವು. ಒಂದು ಬಾವಿಯಿತ್ತಾದರೂ ಕುಡಿಯಲು ಮಾತ್ರ ನೀರಿಲ್ಲ. ಮಳೆಗಾಲ ಕಳೆಯುತ್ತಿದ್ದಂತೆ ನೀರಿಗಾಗಿ ಪರದಾಡಬೇಕಿತ್ತು. ಆದರೆ, ಈ ಸ್ಥಳಕ್ಕೆ ಭೇಟಿ ನೀಡಿದ ಹೆನ್ರಿ ವಾಲ್ಟರ್‌  ಅವರ ತಂಡ ಸ್ಥಳದ ಸಮೀಕ್ಷೆ ನಡೆಸಿ ಬೇಸಗೆಯಲ್ಲಿ ಈ ಪ್ರದೇಶದಲ್ಲಿ ಒಂದು ಇಂಗು ಗುಂಡಿ ತೆರೆದರು. ಬಳಿಕ ಬಾವಿಯೊಳಗಿನ ಕೆಸರು ತೆಗೆಸಿ ಅದಕ್ಕೆ ರಿಂಗ್‌ ಹಾಕಿಸಿದರು. ಮಳೆ ನೀರು ಇಂಗು ಗುಂಡಿಯಲ್ಲಿ ಶೇಖರಣೆಗೊಂಡ ಪರಿಣಾಮ ಅಂತರ್ಜಲ ಮಟ್ಟ ವೃದ್ಧಿಯಾಯಿತು. ಒಂದು ಮಳೆಗಾಲ ತಂದುಕೊಟ್ಟ ನೀರಿನಿಂದ ಇಂದಿಗೂ ಈ ಬಾವಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ಎಲ್ಲ ಕುಟುಂಬಗಳಿಗೂ ಅಗತ್ಯ ಪ್ರಮಾಣದಷ್ಟು ನೀರಿದೆ.

ಪ್ರಸಂಗ ಎರಡು
ಆಲಂಗಾರಿನಲ್ಲಿ ಮೌಂಟ್‌ ರೋಸರಿ ಸಂಸ್ಥೆಯ ಸುಮಾರು 25 ಎಕರೆ ಜಾಗದ ಗುಡ್ಡೆಯಲ್ಲಿ ನೆಕ್ಲೇಸ್‌ ಟೆರೇಸ್‌ ವ್ಯವಸ್ಥೆಯ ಮೂಲಕ ಗಿಡ ನಾಟಿ ಹಾಗೂ ಹುಲ್ಲು ಹಾಸುವ ಮೂಲಕ ಇಂಗು ಗುಂಡಿಗಳನ್ನು ತೆರೆಯಲಾಗಿತ್ತು. ಇದರಿಂದ ಈ ಗುಡ್ಡೆಯ ಕೆಳಭಾಗದಲ್ಲಿದ್ದ ನೀರಿಲ್ಲದಿದ್ದ ಸರಕಾರಿ ಬೋರ್‌ವೆಲ್‌ ತುಂಬಿತು. ಮೌಂಟ್‌ ರೋಸರಿ ಆಸ್ಪತ್ರೆಯ ಕಾಂಪೌಂಡ್‌ನ‌ಲ್ಲಿ ಕೊರೆದಿದ್ದ ಬೋರ್‌ವೆಲ್‌ನಲ್ಲಿ ನೀರಿನ ಅಭಾವವಿತ್ತು. ಈ ಇಂಗುಗುಂಡಿಯ ಪರಿಣಾಮ ಆಗಸ್ಟ್‌ ತಿಂಗಳಲ್ಲಿ ಬೋರ್‌ವೆಲ್‌ನ ನೀರು ಉಕ್ಕಿ ಹರಿಯಲು ಪ್ರಾರಂಭವಾಯಿತು. ಈ ಪ್ರದೇಶಗಳಲ್ಲಿ ಮಾತ್ರವಲ್ಲದೇ, ಮಲ್ಲೂರು, ಮೂಳೂರು, ಕುಪ್ಪೆಪದವು, ಮಂಗಳೂರು ಸೈಂಟ್‌ ಆ್ಯಗ್ನೆಸ್‌ ಕಾಲೇಜು ಕಂಪೌಂಡ್‌ ಹಿಂಬದಿಯಲ್ಲೂ  ವಾಲ್ಟರ್‌ ಅವರ ನೇತೃತ್ವದಲ್ಲಿ ಇಂಗು ಗುಂಡಿಗಳನ್ನು ತೆರೆಯಲಾಗಿದ್ದು, ನೀರಿಗೆ ತೊಂದರೆಯಾಗಿಲ್ಲ.

ಪ್ರಸಂಗ ಮೂರು
ಕೇವಲ ಇಂಗು ಗುಂಡಿಗಳ ನಿರ್ಮಾಣ ಹಾಗೂ ಬಾವಿಗೆ ಜಲ ಮರು ಪೂರಣಕ್ಕೆ ತನ್ನ ಕೊಡುಗೆ ನೀಡಿಲ್ಲ. ವಿವಿಧ ಪ್ರದೇಶಗಳ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ವೆಂಟೆಡ್‌ ಡ್ಯಾಂಗಳ ಅಗತ್ಯ ಹಾಗೂ ಲಾಭಗಳ ಕುರಿತು ಮಾಹಿತಿ ನೀಡಿ ತೋಡುಗಳಂತಹ ಪ್ರದೇಶದಲ್ಲಿ ಡ್ಯಾಂ ನಿರ್ಮಾಣಕ್ಕೂ ವಾಲ್ಟರ್‌ ಪೂರಕ ಸಹಾಯ ಒದಗಿಸಿದ್ದಾರೆ. ಸಾಮಾನ್ಯವಾಗಿ ದೊಡ್ಡ ಜಲಾಶಯ ಪ್ರದೇಶಗಳಲ್ಲಿ ವೆಂಟೆಡ್‌ ಡ್ಯಾಂಗಳನ್ನು ನಿರ್ಮಿಸಿರುವುದನ್ನು ನಾವು ನೋಡಿರಬಹುದು. ಆದರೆ, ಹಳೆ ಪದ್ಧತಿಯಂತೆ ತೋಡುಗಳಲ್ಲೇ ನೀರು ನಿಲ್ಲಿಸುವ ಯೋಜನೆ ಹಮ್ಮಿಕೊಂಡಿದ್ದು, ಇದಕ್ಕೆ ಸ್ಥಳೀಯರ ಹಾಗೂ ಇತರ ಏಜೆನ್ಸಿಗಳಿಂದ ಆರ್ಥಿಕ ಸಹಾಯ ಪಡೆದು ಡ್ಯಾಂ ನಿರ್ಮಿಸಲಾಗಿದೆ. ಈಗಾಗಲೇ ಕಂದಾವರ, ಅಂಬೆಲೊಟ್ಟು, ಮಜಲ್‌ಕೋಡಿ, ಬರೆತಕುಳಂಜಿ ಹಾಗೂ ಕಂಬಳಕೋಡಿಯಲ್ಲಿ ಇಂತಹ ವೆಂಟೆಡ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಹಲವು ಸಮಾಜಮುಖೀ ಹಾಗೂ ಪರಿಸರ ಸ್ನೇಹಿ ಕೆಲಸಗಳನ್ನು ಕೈಗೊಳ್ಳುವ ಹೆನ್ರಿ ವಾಲ್ಟರ್‌ ದಿಶಾ ಟ್ರಸ್ಟ್‌ನ ಸಂಯೋಜಕರೂ ಆಗಿದ್ದಾರೆ. ಅಲ್ಲದೇ, ತಮ್ಮ ಮನೆಯಲ್ಲಿ ಟೆರೇಸ್‌ ನೀರನ್ನು ತೆಂಗಿನ ಮರದ ಬುಡಕ್ಕೆ ಬಿಡುತ್ತಿದ್ದು, ತನ್ನ 25 ಸೆಂಟ್ಸ್‌ ಜಾಗದಲ್ಲಿ ಹುಲ್ಲು ಹಾಗೂ ಒಣಗಿದ ಎಲೆಗಳನ್ನು ಹರಡಿ ನೀರು ನಿಲ್ಲುವಂತೆ ವ್ಯವಸ್ಥೆ ಮಾಡಿದ್ದಾರೆ. 

30%
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಫೆಬ್ರವರಿ ಅಂತ್ಯಕ್ಕೆ ಹಿಂಗಾರಿನಲ್ಲಿ 344 ಮಿ.ಮೀ ಬದಲು ಬಂದಿರುವಂಥದ್ದು 103.14 ಮಿ.ಮೀ. ಅಂದರೆ ವಾಡಿಕೆ ಮಳೆಯ ಶೇ. 30 ರಷ್ಟು ಬಂದಿದೆ.

Advertisement

15%
ಬಂಟ್ವಾಳ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 501 ಮಿ.ಮೀ. ಮಳೆ ಬಿದ್ದಿತ್ತು. ಇದು ಕಳೆದ ವರ್ಷ 588 ಮಿ.ಮೀ ಆಗಿತ್ತು. ಒಟ್ಟು ಸರಾಸರಿ ಮಳೆ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಬರ ಪೀಡಿತವೆಂದು ಘೋಷಿಸಲಾಗಿದೆ.

ಅರ್ಥ ಹನಿ : ಪ್ರತಿ ಹನಿ ಉಳಿತಾಯ ಗಳಿಕೆಗಿಂತ ಅಮೂಲ್ಯ


ಅಂತರ್ಜಲ ಮರುಪೂರಣ ಇಂಗು ಗುಂಡಿಗಳ ನಿರ್ಮಾಣದಿಂದ ಅಂತರ್ಜಲ ಮರುಪೂರಣ ಸಾಧ್ಯ. ಗುಡ್ಡ ಪ್ರದೇಶಗಳಲ್ಲಿ ನೀರು ಇಂಗಿಸುವಾಗ ಗುಡ್ಡದ ಕೆಳಭಾಗದಲ್ಲಿ ತರಗೆಲೆಗಳನ್ನು ತೆಗೆಯದಂತೆ ನೋಡಿಕೊಳ್ಳಬೇಕು. ತೋಟಗಳಲ್ಲೂ ನೆಲಕ್ಕೆ ಬಿದ್ದಿರುವ ತೆಂಗಿನಗರಿ, ಸೋಗೆಗಳನ್ನು ತೆಗೆಯಬಾರದು. ಇದರಿಂದ ಮಳೆ ನೀರು ಭೂಮಿಯ ಮೇಲೆ ನಿಂತು ಅಲ್ಲೇ ಇಂಗುತ್ತದೆ. ಆದಷ್ಟು ಬಾವಿಗಳನ್ನು ದುರಸ್ತಿ ಮಾಡಿಸಿ ಸರಿಯಾದ ರೀತಿಯಲ್ಲಿ ಮಳೆ ನೀರು ಶೇಖರಣೆಯಾಗುವಂತೆ ನೋಡಿಕೊಳ್ಳಬೇಕು. ಹೆಚ್ಚು ಪ್ರಮಾಣದಲ್ಲಿ ನೀರು ಭೂಮಿಯೊಳಗೆ ಇಳಿಯುತ್ತದೆ.
– ಹೆನ್ರಿ ವಾಲ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next