Advertisement

ಕೋಲ ‘ಕಂಬುಲ’ನಾಗ ತಂಬಿಲ, ಅಂಕ ಆಯೊನದ ಬೂಡು

04:05 PM Feb 12, 2017 | Karthik A |

ಕರಾವಳಿ ಜಿಲ್ಲೆ ಸಾಂಸ್ಕೃತಿಕ ಲೋಕದ ಅವಿಚ್ಛಿನ್ನ ಲೋಕ. ಇಲ್ಲಿನ ಒಂದೊಂದು ಆಚರಣೆಗಳು, ಆಚಾರ-ವಿಚಾರಗಳು ಕರಾವಳಿಯಾದ್ಯಂತ ಗೌರವದ ಸ್ಥಾನ ಪಡೆಯುವುದರೊಂದಿಗೆ, ಪರ ಊರಿನಲ್ಲೂ ಮಾನ್ಯತೆ ಪಡೆದಿವೆ. ಕರಾವಳಿಯಲ್ಲಿ ನಡೆಯುವ ವಿವಿಧ ದೈವಗಳ ಕೋಲ, ಕರಾವಳಿಯ ಸಾಂಸ್ಕೃತಿಕ ಪ್ರಜ್ಞೆಯಾದ ಕಂಬುಲ, ನಂಬಿಕೆಯ ನೆಲೆಯಲ್ಲಿ ಪೂಜ್ಯನೀಯ ಸ್ಥಾನ ಪಡೆದ ನಾಗ ತಂಬಿಲ, ವಿವಿಧ ಅಂಕ ಆಯನೊಗಳು ಕರಾವಳಿ ನೆಲವನ್ನು ಪ್ರಾತಿನಿಧಿಸುವ ಸಂಗತಿಗಳು.

Advertisement

ಈ ಎಲ್ಲ ಅಂಶಗಳ ಆಧಾರದಲ್ಲಿ ತುಳು ಚಿತ್ರಗಳು ಬೇರೆ ಬೇರೆ ರೀತಿಯಲ್ಲಿ ಬೆಳಕು ಚೆಲ್ಲಿವೆ. ತುಳುವಿನಲ್ಲಿ ಬಂದ ಬಹುತೇಕ ಚಿತ್ರಗಳಲ್ಲಿ ಈ ಎಲ್ಲ ಅಂಶಗಳು ಪ್ರತಿಧ್ವನಿಸುತ್ತಿರುತ್ತವೆ. ವಿಶೇಷ ಅಂದರೆ ಇಂತಹ ಒಂದೊಂದೇ ಅಂಶಗಳನ್ನು ಆಧಾರವಾಗಿರಿಸಿಕೊಂಡು ತುಳುವಿನಲ್ಲಿ ಬಹುತೇಕ ಚಿತ್ರಗಳು ಬಂದಿವೆ. 

ಕಂಬಳದ ವೈಭವ 
ಇಷ್ಟೆಲ್ಲ ವಿಷಯಗಳ ಪ್ರಸ್ತಾವಕ್ಕೆ ಕಾರಣ ‘ಕಂಬಳ’. ಕರಾವಳಿ ನೆಲದ ಜಾನಪದೀಯ ಹಾಗೂ ಧಾರ್ಮಿಕ ಆಚರಣೆಯ ನೆಲೆಯಲ್ಲಿ ನಡೆಯುವ ಕಂಬಳದ ವಿರುದ್ಧ ಸ್ವರಗಳು ಎದ್ದಿರುವ ಹಿನ್ನೆಲೆಯಲ್ಲಿ ಕರಾವಳಿ ಸೇರಿದಂತೆ ಹೊರಭಾಗದಿಂದಲೂ ಕಂಬಳ ಪ್ರೋತ್ಸಾಹಿಸುವ ಪ್ರತಿಧ್ವನಿ ದೊಡ್ಡ ಮಟ್ಟದಲ್ಲಿ ಎದ್ದಿದೆ. ಕಂಬಳದ ಶ್ರೀಮಂತಿಕೆಯ ಬಗ್ಗೆ ವಿಸ್ತಾರ ಚರ್ಚೆಗಳು ರಾಜ್ಯಮಟ್ಟದಲ್ಲಿ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಸರಕಾರವೇ ಮುಂದೆ ನಿಂತು ಕಂಬಳ ಉಳಿಸುವ ನೆಲೆಯಲ್ಲಿ ಕೆಲವು ಕಾನೂನಾತ್ಮಕ ಸಡಿಲೀಕರಣ ಮಾಡಿ ಮಸೂದೆ ಮಂಡನೆಗೂ ಮುಂದಾಗಿದೆ. ರಾಜ್ಯ ಮಟ್ಟದಲ್ಲಿ ಈ ರೀತಿಯಾಗಿ ಸುದ್ದಿ ಪಡೆದ ಕಂಬಳ ಕರಾವಳಿಯಲ್ಲಿ ತನ್ನ ವೈಭವದಿಂದ ಮನಸ್ಸು ಗೆದ್ದಿದ್ದರೆ, ತುಳು ಚಿತ್ರಗಳಲ್ಲೂ ಕಂಬಳದ ವೈಭವ ದಾಖಲಾಗಿದೆ.

1973-74ನೇ ವರ್ಷದ ರಾಜ್ಯದ 4ನೇ ಅತ್ಯುತ್ತಮ ಚಲನಚಿತ್ರ ಪುರಸ್ಕಾರ ಪಡೆದ ತುಳುನಾಡಿನ ಐತಿಹಾಸಿಕ ಕಥೆಯ ಪ್ರಥಮ ತುಳು ಚಿತ್ರ ‘ಕೋಟಿ ಚೆನ್ನಯ’ದಲ್ಲಿ ಕಂಬಳದ ದೃಶ್ಯ ಮನಮೋಹಕವಾಗಿ ಮೂಡಿಬಂದಿದೆ. ವಿಶುಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಕಂಬಳದ ದೃಶ್ಯಕ್ಕೆ ಆದ್ಯತೆ ನೀಡಲಾಗಿತ್ತು. ತುಳುವಿನ 40ನೇ ಸಿನೆಮಾ 2010ರಲ್ಲಿ ತೆರೆ ಬಂದ ಕುಂಬ್ರ ರಘುನಾಥ ರೈ ಅವರ ನಿರ್ದೇಶನದ ‘ಕಂಚಿಲ್ದ ಬಾಲೆ’ ಚಿತ್ರದಲ್ಲೂ ಕಂಬಳದ ಉಲ್ಲೇಖವಾಗಿದೆ. ಇನ್ನುಳಿದಂತೆ ತುಳುವಿನಲ್ಲಿ ಬಂದ ಬಹುತೇಕ ಸಿನೆಮಾಗಳ ಹಾಡಿನಲ್ಲಿ ಅಥವಾ ದೃಶ್ಯದಲ್ಲಿ ಅಥವಾ ಸಂಭಾಷಣೆಯಲ್ಲಿ ಕಂಬಳದ ಉಲ್ಲೇಖ ಇದ್ದೇ ಇದೆ. ವಿಶೇಷ ಅಂದರೆ ಕಂಬಳದ ಪರವಾಗಿ ಈಗ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ಸತೀಶ್‌ ಶೆಟ್ಟಿ ಪಟ್ಲ ಅವರು ಹಾಡಿದ ‘ಕಂಬಳ ನಮ್ಮ’ ಎಂಬ ಜಾನಪದ ಶೈಲಿಯ ಹಾಡು ಯೂಟ್ಯೂಬ್‌ ಮೂಲಕ ದೇಶಾದ್ಯಂತ ಭಾರೀ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಯಿತು. ಸರಿಸುಮಾರು 22 ಸಾವಿರ ಮಂದಿ ವೀಕ್ಷಕರು ಇದನ್ನು ನೋಡಿದ್ದಾರೆ.

ಸಾಲಿನಲ್ಲಿದೆ ಸಾಲು-ಸಾಲು ಚಿತ್ರಗಳು
ತುಳುವಿನಲ್ಲಿ ಇನ್ನಷ್ಟು ಚಿತ್ರಗಳು ತೆರೆ ಕಾಣಲು ಸಿದ್ಧತೆ ನಡೆದಿದೆ. ಮುಂದಿನ ತಿಂಗಳಿನಲ್ಲಿ ಹಲವು ಸಿನೆಮಾಗಳು ಒಂದೊಂದರಂತೆ ತೆರೆಗೆ ಬರಲಿವೆ. ಏಸ, ಪತ್ತನಾಜೆ, ಅಂಬರ ಕ್ಯಾಟರರ್, ಅರ್ಜುನ್‌ ವೆಡ್ಸ್‌ ಅಮೃತ, ಮದಿಪು, ನೇಮದ ಬೂಳ್ಯ, ಬಲೇ ಪುದರ್‌ ದೀಕ ಈ ಪ್ರೀತಿಗ್‌, ಪುದರ್‌ಗೊಂಜಿ ಬೊಡೆದಿ, ರಂಗ್‌ ರಂಗ್‌ದ ದಿಬ್ಬಣ ಸೇರಿದಂತೆ ಇನ್ನೂ ಹಲವು ತುಳು ಚಿತ್ರಗಳು ಸಾಲಿನಲ್ಲಿವೆ. ಒಂದೊಂದು ಚಿತ್ರಗಳು ಒಂದೊಂದು ಕಾರಣದಿಂದ ಈಗಾಗಲೇ ಸುದ್ದಿಯಲ್ಲಿರುವುದರಿಂದ ಚಿತ್ರಗಳ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.

Advertisement

ಕಾಪಿಕಾಡ್‌ರಿಂದ ‘ಅರೆ ಮರ್ಲೆರ್‌’ ಪುರಾಣ..!
ವರ್ಷಕ್ಕೊಂದು ತುಳು ನಾಟಕ ನೀಡುತ್ತಾ ಬಂದಿರುವ ‘ತೆಲಿಕೆದ ಬೊಳ್ಳಿ’ ದೇವದಾಸ್‌ ಕಾಪಿಕಾಡ್‌ ಈಗ ವರ್ಷಕ್ಕೊಂದು ಸಿನೆಮಾ ನೀಡಲು ಮುಂದಾಗಿದ್ದಾರೆ. ಇದೇ ತಿಂಗಳಿನಲ್ಲಿ ನೂತನ ತುಳು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಹೆಸರು ‘ಅರೆ ಮರ್ಲೆರ್‌’. ತುಳು ರಂಗಭೂಮಿಯಲ್ಲಿ ಪ್ರದರ್ಶನಗೊಂಡ ಚಾಪರ್ಕ ತಂಡದ ಪ್ರತೀ ನಾಟಕ ಟೈಟಲ್‌ ಮೂಲಕವೇ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಇದೇ ನೆಲೆಯಲ್ಲಿ ಕಾಪಿಕಾಡ್‌ರ ತುಳು ಚಿತ್ರಗಳೂ ಟೈಟಲ್‌ ಮೂಲಕ ಗಮನ ಸೆಳೆದಿದೆ. ಇದೀಗ ಅರೆ ಮರ್ಲೆರ್‌ ಕೂಡ ಟೈಟಲ್‌ ಮೂಲಕ ಸುದ್ದಿ ಮಾಡಿದೆ. ಹೆಚ್ಚು ಕಡಿಮೆ ಫೆ. 16ಕ್ಕೆ ಮುಹೂರ್ತ ನಡೆಯಲಿದೆಯಂತೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next