Advertisement
ಪಡಿತರ ವಿತರಣೆಯಲ್ಲಾಗುತ್ತಿರುವ ಅಕ್ರಮಗಳನ್ನು ತಡೆಯಲು ಸರಕಾರ ಹಲವಾರು ಪ್ರಯೋಗಗಳನ್ನು ನಡೆಸುತ್ತಿದೆ. ಆದರೆ ರಂಗೋಲಿ ಕೆಳಗೆ ತೂರುವ ಚಾಣಾಕ್ಷತೆ ಹೊಂದಿರುವ ಕಳ್ಳರು ವ್ಯವಸ್ಥೆಯಲ್ಲಿರುವ ಯಾವುದಾದರೊಂದು ಲೋಪವನ್ನು ಬಳಸಿಕೊಂಡು ತಮ್ಮ ಉದ್ದೇಶ ಸಾಧಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಈಗ ಬೆಳಕಿಗೆ ಬಂದಿರುವ ಪಡಿತರ ಕೂಪನ್‌ಗಳ ಅಕ್ರಮ. ಪಡಿತರ ಚೀಟಿ ಹೊಂದಿರುವ ವ್ಯಕ್ತಿ ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಮಾಡಲು ಕೆಲ ಸಮಯದ ಹಿಂದೆ ಕೂಪನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ರೇಷನ್ ಪೋರ್ಟೆಬಿಲಿಟಿ ಎಂಬ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡ ಈ ವ್ಯವಸ್ಥೆಯಲ್ಲಿ ಮೊದಲು ಮೂರು ತಿಂಗಳಿಗೊಮ್ಮೆ ಕೂಪನ್ ಪಡೆದುಕೊಂಡರೆ ಸಾಕು ಎಂಬ ನಿಯಮವಿತ್ತು. ಪ್ರಾರಂಭದಲ್ಲಿ ಇದು ಸಾಕಷ್ಟು ಗೊಂದಲಗಳಿಗೆ ಕಾರಣವಾಯಿತು. ದಿನಕ್ಕೊಂದರಂತೆ ಜಾರಿಯಾಗುವ ನಿಯಮಗಳು ಅರ್ಥವಾಗದೆ ಜನರು ಕಂಗಾಲಾದರು. ಜನರಿಗೆ ಎದುರಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆಗಾಗ ನಿಯಮಗಳನ್ನು ಪರಿಷ್ಕರಿಸಿದ ಬಳಿಕ ಅಂತೂ ಇಂತೂ ಕೂಪನ್ ಸೌಲಭ್ಯ ಕ್ರಮಬದ್ಧವಾಯಿತು ಎಂದುಕೊಳ್ಳುವಷ್ಟರಲ್ಲಿ ನಕಲಿ ಕೂಪನ್‌ಗಳನ್ನು ಸೃಷ್ಟಿಸಿ ರೇಷನ್ ಸಾಮಗ್ರಿಗಳನ್ನು ಕೊಳ್ಳೆ ಹೊಡೆದಿರುವ ಬೃಹತ್ ಅಕ್ರಮ ಬೆಳಕಿಗೆ ಬಂದಿದೆ.
Related Articles
Advertisement
ಅನ್ನಭಾಗ್ಯದ ನೈಜ ಫಲಾನುಭವಿಗಳೇ ಪಡಿತರ ಸಾಮಗ್ರಿ ಪಡೆದು ಅದನ್ನು ಹಣಕ್ಕೆ ಮಾರಿಕೊಳ್ಳುತ್ತಿರುವುದು ಇನ್ನೊಂದು ಸಮಸ್ಯೆ. ಪ್ರಾದೇಶಿಕ ಆಹಾರ ಪದ್ಧತಿಯನ್ನು ಪರಿಗಣಿಸದೆ ಎಲ್ಲ ಕಡೆಗೂ ಒಂದೇ ರೀತಿಯ ಪಡಿತರ ಸಾಮಗ್ರಿ ವಿತರಿಸುತ್ತಿರುವುದು ಇದಕ್ಕೆ ಕಾರಣ. ಕರಾವಳಿ ಭಾಗದಲ್ಲಿ ಗೋಧಿ ಬಳಕೆ ಬಹಳ ಕಡಿಮೆ. ಈಗ ಅಕ್ಕಿಯ ಜತೆಗೆ ಸಿಗುವ ಗೋಧಿಯನ್ನು ಜನರು ಗಿರಣಿಗಳಿಗೆ ಮಾರುತ್ತಾರೆ. ಇದು ಗೋಧಿ ಹಿಟ್ಟಾಗಿ ಪೊಟ್ಟಣಗಳಲ್ಲಿ ಮಾರಾಟವಾಗುತ್ತದೆ. ಹೀಗಾಗುವುದರಿಂದ ಸರಕಾರವೇ ಅಕ್ರಮಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಇಂತಹ ಹಲವು ಅಸಮರ್ಪಕತೆಗಳನ್ನು ನಿವಾರಿಸಿಕೊಂಡು ಪಡಿತರ ಪೂರೈಕೆಯನ್ನು ಜನಸ್ನೇಹಿಯಾಗಿಸಬೇಕು. ವಂಚನೆ, ಅಶಿಸ್ತು, ಅಕ್ರಮ ತುಂಬಿ ತುಳುಕುಧಿತ್ತಿರುವ ಪಡಿತರ ವ್ಯವಸ್ಥೆಯನ್ನು ಸುಧಾರಿಸುವುದು ಸವಾಲಿನ ಕೆಲಸ ನಿಜ. ಈ ಸವಾಲನ್ನು ಮೆಟ್ಟಿನಿಲ್ಲುವ ದಿಟ್ಟತನವನ್ನು ಸರಕಾರ ತೋರಿಸಲಿ.