ಚಿಕ್ಕಬಳ್ಳಾಪುರ: ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ನೋಡಿಕೊಂಡು ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಮಂಗಳವಾರ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಹತ್ತಿರ ಹಣ ಪಡೆಯಲು ಕಾಯುತ್ತಿದ್ದರು
ಇದೇ ವೇಳೆ ಮಾಜಿ ಕೃಷಿ ಸಚಿ ಎನ್.ಎಚ್.ಶಿವಶಂಕರರೆಡ್ಡಿ ವಿರುದ್ದ ವಾಗ್ದಾಳಿ ನಡೆಸಿದ ಸುಧಾಕರ್, ಮಾಜಿ ಸಚಿವರು ಗೌರವ ಕೊಟ್ಟು ಗೌರವ ಪಡೆದುಕೊಳ್ಳುವುದನ್ನು ಕಲಿಯಲಿ. ರಾಜಕೀಯಕ್ಕೆ ಬಂದು ನಾನು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ನನ್ನ ವಿರುದ್ದ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಿಧಿ ಪಡೆಯಲು ಶಿವಶಂಕರ ರೆಡ್ಡಿ ನನಗಾಗಿ ಕಾಯುತ್ತಿದ್ದರು. ಸಾಕಷ್ಡು ಬಾರಿ ಹಣ ನೀಡಿದ್ದೇನೆ, ಇಲ್ಲ ಎಂಬುದಾಗಿ ಅವರು ಬೆಕಾದರೆ ಪ್ರಮಾಣ ಮಾಡಲಿ ಎಂದು ಸುಧಾಕರ್ ಅವರು ಸವಾಲು ಹಾಕಿದರು.
ಇವರ ಯೋಗ್ಯತೆ ಎಲ್ಲರಿಗೂ ಗೊತ್ತು. ರಾಜಕಾರಣವನ್ನು ಹಣ ಮಾಡಲಿಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸುಧಾಕರ್ ಅವರು ಶಿವಶಂಕರ ರೆಡ್ಡಿ ವಿರುದ್ಧ ಕಿಡಿಕಾರಿದರು. ಇವರಿಗೆ ಸಾಮಾಜಿಕ ಬದ್ದತೆಯಾಗಲೀ, ಕಾಳಜಿಯಾಗಲೀ ಇಲ್ಲ. ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುವುದನ್ನು ಇಲ್ಲಿಗೇ ನಿಲ್ಲಿಸದಿದ್ದರೆ ಇವರ ಊರು ನಾಗಸಂದ್ರಕ್ಕೆ ಹೋಗಿ ನಾನು ಇವರ ಬಂಡವಾಳವೆಲ್ಲಾ ಜನರೆದುರು ಬಿಚ್ಚಿಡುತ್ತೇನೆ ಎಂದು ಸುಧಾಕರ್ ಅವರು ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ನಡೆಸಲು ಮರು ದಿನಾಂಕ ನಿಗದಿಯಾಗಿರುವ ಬೆನ್ನಲೇ ಈ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರಿದ್ದು ವಿಶೇಷವಾಗಿ ಸುಧಾಕರ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ ಸಮರ ತಾರಕಕ್ಕೇರಿದೆ.