ಶಿಡ್ಲಘಟ್ಟ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯನ್ನು ಜಿಪಂ ಸಿಇಒ ಫೌಝೀಯಾ ತರುನ್ನುಮ್ ಅವರು ವಿಶೇಷ ಕಾಳಜಿ ವಹಿಸಿ ಮಾದರಿಯಾಗಿ ಅಭಿವೃದ್ಧಿಗೊಳಿಸಿದ್ದು, ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಲೋಕಾರ್ಪಣೆಗೊಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಜಲಮೂಲಗಳಾದ ಕೆರೆ-ಕುಂಟೆ, ಕಲ್ಯಾಣಿಗಳು, ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿ ಅಂರ್ತಜಲಮಟ್ಟ ವೃದ್ಧಿಗೊಳಿಸಲು ಜಿಪಂ ಸಿಇಒ ಫೌಝೀಯಾ ತರುನ್ನುಮ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಪರಿವರ್ತಿಸಲು ಪಣ ತೊಟ್ಟು ಜಿಲ್ಲೆಯ 30 ಸರ್ಕಾರಿ ಪ್ರೌಢ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ಕಾರ್ಯಾರಂಭಿಸಿದ ಜಿಲ್ಲೆಯ ಮೊದಲ ಮಾದರಿ ಪ್ರೌಢಶಾಲೆಯನ್ನು ಮುದ್ದೇನಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.
ನರೇಗಾ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಯನ್ನು ಮಾದರಿಯಾಗಿ ಪರಿವರ್ತಿಸಿರುವ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಶಾಲಾ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ವಾಲಿಬಾಲ್, ಖೋಖೋ, ಕಬಡ್ಡಿ ಕೋಟ್‌ಗಳನ್ನು ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನವಭಾರತ ನಿರ್ಮಾಣವಾಗಲಿದೆ ಎಂದರು.
ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.