Advertisement

ಸುಧಾಕರ್‌ ನೇಮಕ ನಿಯಮಬಾಹಿರ: ಹೈಕೋರ್ಟ್‌

11:10 PM Sep 06, 2019 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ.ಕೆ.ಸುಧಾಕರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ನಿಯಮ ಬಾಹಿರ ಹಾಗೂ ಲೋಪಗಳಿಂದ ಕೂಡಿದ್ದು, ಆ ನೇಮಕಾತಿ ರದ್ದಾಗಲೇಬೇಕು ಎಂದು ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ. ಅಲ್ಲದೆ, ಪ್ರಕರಣದಲ್ಲಿ ಸರ್ಕಾರ ನ್ಯಾಯಾಲಯದ ಜೊತೆಗೆ ವ್ಯವಹರಿಸಿದ ರೀತಿಯ ಬಗ್ಗೆಯೂ ಹೈಕೋರ್ಟ್‌ ಅಸಮಧಾನ ವ್ಯಕ್ತಪಡಿಸಿದೆ.

Advertisement

ಸುಪ್ರೀಂಕೋರ್ಟ್‌ನ ನಿರ್ದೇಶನಗಳಿಗೆ ವಿರುದ್ಧವಾಗಿ ಡಾ.ಸುಧಾಕರ್‌ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ದೂರಿ ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌.ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ.ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.

ಈ ವೇಳೆ, ಅಡ್ವೋಕೇಟ್‌ ಜನರಲ್‌ ಅವರು ನೇಮಕಾತಿಗೆ ಸಂಬಂಧಿಸಿದ ಕಡತವನ್ನು ಸಲ್ಲಿಸಿದರು. ಇದನ್ನು ಗಮನಿಸಿದ ನ್ಯಾಯಪೀಠ, ಮಂಡಳಿಯ ಅಧ್ಯಕ್ಷರ ನೇಮಕಾತಿಯು ಜಲ (ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ-1974ರ ಸೆಕ್ಷನ್‌ 4ಗೆ ವಿರುದ್ಧವಾಗಿದೆ. ಅಲ್ಲದೆ, ನೇಮಕಾತಿಗೆ ಸಂಬಂಧಿ ಸಿದಂತೆ 2019ರ ಜುಲೈ 30 ಹಾಗೂ ಆ.30ರ ಹೈಕೋರ್ಟ್‌ ಆದೇಶಗಳ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ಬಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.

ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದ ಬಳಿಕವಷ್ಟೇ ಕೆಲ ವೊಂದು ವಿಚಾರಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ನೇಮಕಾತಿಗೆ ಘಟನೋತ್ತರ ಅನುಮೋದನೆ ನೀಡಿರು ವುದು ಮತ್ತು ರಾಜ್ಯಪಾಲರ ಹೆಸರಲ್ಲಿ ಆದೇಶ ಹೊರಡಿಸಿರುವುದು ಅಚ್ಚರಿಯ ಸಂಗತಿ ಎಂದು ನ್ಯಾಯಪೀಠ ಹೇಳಿತು. ಆಗ, ಅಡ್ವೋಕೆಟ್‌ ಜನರಲ್‌ ಅವರು, ನೇಮಕ ಪ್ರಕ್ರಿಯೆ ಮರು ಪರಿಶೀಲಿಸಲು ಕಾಲಾವಕಾಶ ಬೇಕು ಎಂದು ಕೋರಿದರು.

ನಿಯಮಬಾಹಿರ ಹಾಗೂ ಲೋಪಗಳಿಂದ ಕೂಡಿದ ಪ್ರಕ್ರಿಯೆಯನ್ನು ಮರು ಪರಿಶೀಲಿಸುವುದು ಏಕೆ? ಆ ಪ್ರಕ್ರಿಯೆ ರದ್ದಾಗಲೇಬೇಕು. ಬೇಕಿದ್ದರೆ, ಹೊಸ ನೇಮಕಾತಿ ಪ್ರಕ್ರಿಯೆ ಬಗ್ಗೆ ಪರಿಶೀಲಿಸಿ. ಅದು ನಿಯಮಬದ್ಧ ಹಾಗೂ ಪಾರದರ್ಶಕವಾಗಿರಲಿ ಎಂದು ನ್ಯಾಯಪೀಠ ಹೇಳಿತು.

Advertisement

ಡಾ.ಸುಧಾಕರ್‌ ಪರ ವಕೀಲರು ವಾದ ಮಂಡಿಸಿ, ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಮತ್ತು ಕಾನೂನು ಪ್ರಕಾರ ಮಂಡಳಿಯ ಅಧ್ಯಕ್ಷರಾಗಲು ತಮ್ಮ ಕಕ್ಷಿದಾರರಿಗೆ ಎಲ್ಲ ರೀತಿಯ ಅರ್ಹತೆ ಹಾಗೂ ಅನುಭವ ಇದೆ. ಇದು ನೇಮಕಾತಿ ಅಲ್ಲ, ನಾಮ ನಿರ್ದೇಶನ ಎಂದು ಸಮರ್ಥಿಸಿಕೊಂಡರು. ಅಂತಿಮವಾಗಿ ನ್ಯಾಯಾಲಯ ಪರಿಗಣಿಸಿರುವ ಅಂಶಗಳ ಬಗ್ಗೆ ಸೆ.20ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.

ಸಂಸದರಿಗೇ ವಿಳಾಸವಿಲ್ಲ ಎಂದರೆ ಹೇಗೆ?
ಬೆಂಗಳೂರು: “ಒಬ್ಬ ಸಂಸದನಿಗೆ ವಿಳಾಸ ಇಲ್ಲ ಎಂದರೆ ಹೇಗೆ? ಸಂಸದರ ಸ್ಥಿತಿ ಹೀಗಿದ್ದರೆ ಸಾಮಾನ್ಯ ಜನರ ಪಾಡೇನು?’ ಹೀಗೆಂದು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಳಾಸಕ್ಕೆ ಜಾರಿಗೊಳಿಸಿದ ಕೋರ್ಟ್‌ ಸಮನ್ಸ್‌ ಈವರೆಗೆ ಅವರ ಕೈ ಸೇರದ ಬಗ್ಗೆ ಹೈಕೋರ್ಟ್‌ ಹೇಳಿದ ಮಾತು.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವುದರಿಂದ ಪ್ರಜ್ವಲ್‌ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಎ.ಮಂಜು ಹಾಗೂ ವಕೀಲ ಜಿ.ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಾತು ಹೇಳಿತು.

ಅಲ್ಲದೆ, ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲು ಅರ್ಜಿದಾರರಿಗೆ ನ್ಯಾಯಪೀಠ ಅನುಮತಿ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಕೋರ್ಟ್‌ ಸಿಬ್ಬಂದಿ ಮೂಲಕ ಸಮನ್ಸ್‌ ತಲುಪಿ ಸುವಂತೆ ಹಾಸನ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಆದರೆ, ಈ ಹಿಂದಿನ ವಿಚಾರಣೆ ವೇಳೆ, ಸಂಸದರು ನಾಮಪತ್ರದಲ್ಲಿ ನಮೂದಿಸಿ ರುವ ವಿಳಾಸಕ್ಕೆ ಕೋರ್ಟ್‌ ಸಿಬ್ಬಂದಿ ಸಮನ್ಸ್‌ ತೆಗೆದುಕೊಂಡು ಹೋಗಿದ್ದರು. ಆದರೆ, ಆ ವಿಳಾಸದಲ್ಲಿ ಯಾರೂ ಇರಲಿಲ್ಲ. ಹಾಗಾಗಿ, ಸಮನ್ಸ್‌ ಜಾರಿಯಾಗಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ಅದಕ್ಕೆ, ಸಂಸದರಿಗೆ ಸಮನ್ಸ್‌ ತಲುಪಿಲ್ಲ. ಹಾಗಾಗಿ, ಸಮನ್ಸ್‌ ಜಾರಿಯಾಗಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲು ಅನುಮತಿ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಈ ಕುರಿತು ಸೆ.6ರಂದು ವಿಚಾರಣೆ ನಡೆಸುವುದಾಗಿ ಹೈಕೋರ್ಟ್‌ ಹೇಳಿತ್ತು. ಅದರಂತೆ, ವಿಚಾರಣೆ ನಡೆಸಿದ ನ್ಯಾಯಪೀಠ, ಸಂಸದರ ವಿಳಾಸಕ್ಕೆ ಸಮನ್ಸ್‌ ಜಾರಿಯಾಗಿಲ್ಲ ಎಂದಾದರೆ ಹೇಗೆ? ಒಬ್ಬ ಸಂಸದರಿಗೆ ವಿಳಾಸ ಇಲ್ಲವೆಂದರೆ, ಬೇರೆಯವರ ಪಾಡೇನು? ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next