Advertisement

ಬಾಲಕನ ವ್ಯಥೆಗೆ ಮುಕ್ತಿ ನೀಡಿದ ಸುಧಾಮೂರ್ತಿ ಕಥೆ!

12:39 AM Dec 26, 2021 | Team Udayavani |

ತಿರುವನಂತಪುರ: ಇನ್ಫೋಸಿಸ್‌ ಪ್ರತಿ ಷ್ಠಾನದ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿ ಅವರ ಕಥೆಯೊಂದು ಕೇರಳದ ಬಾಲಕನೊಬ್ಬನ ಬದುಕಿನಲ್ಲಿ ಬೆಳಕನ್ನು ಮೂಡಿಸಿದೆ. ಹಲವು ವರ್ಷ ಗಳಿಂದ ಯಾರಲ್ಲೂ ಹೇಳಲಾ ಗದೇ ಬಚ್ಚಿಟ್ಟಿದ್ದ ನೋವು ಹಾಗೂ ಪಟ್ಟಿದ್ದ ದೌರ್ಜನ್ಯದಿಂದ ಆ ಬಾಲಕ ಈಗ ಮುಕ್ತನಾಗಿದ್ದಾನೆ.

Advertisement

ಹೌದು. ಉತ್ತರ ಕೇರಳದ ಶಾಲೆಯ ದ್ವಿತೀಯ ಪಿಯು ಇಂಗ್ಲಿಷ್‌ ಪಠ್ಯದಲ್ಲಿ ಸುಧಾ ಮೂರ್ತಿ ಅವರ ಕಥೆಯೊಂದಿದೆ. ಅದರ ಹೆಸರು “ಹೊರೆಗಲ್ಲು’. ಈ ಕಥೆಯೇ ಈಗ 17 ವರ್ಷದ ಬಾಲಕನ ವ್ಯಥೆಯನ್ನು ತಗ್ಗಿಸಿದೆ.

ಏನಿದು ಕಥೆ? :

ಪ್ರತೀ ದಿನ ಅವರ ಊರಿನ ಮೂಲಕ ಹಾದು ಹೋಗುವ ಪ್ರಯಾಣಿಕರು ರಸ್ತೆಬದಿಯಲ್ಲಿದ್ದ ಕಲ್ಲುಬೆಂಚಿನ (ಹೊರೆಗಲ್ಲು) ಮೇಲೆ ವಿಶ್ರಮಿಸಿ ಮುಂದೆ ಸಾಗುತ್ತಿದ್ದರು. ಅದೇ ಕಲ್ಲುಬೆಂಚಿನಲ್ಲಿ ಕುಳಿತಿರುತ್ತಿದ್ದ ಸುಧಾಮೂರ್ತಿಯವರ ಅಜ್ಜ ಅಲ್ಲಿಗೆ ಬರುವ ಪ್ರಯಾಣಿಕರೊಂದಿಗೆ ಸ್ವಲ್ಪ ಹೊತ್ತು ಹರಟುತ್ತಾ ಕಷ್ಟಸುಖಗಳನ್ನು ಆಲಿಸುತ್ತಿದ್ದರು. ಒಬ್ಬ ವ್ಯಕ್ತಿ ನೋವಿನಲ್ಲಿದ್ದಾಗ ಅದನ್ನು ಆಲಿಸುವ ಕಿವಿಯೊಂದು ಸಿಕ್ಕರೆ ಸಾಕು ಆತನ ಅರ್ಧದಷ್ಟು ಹೊರೆ ಕಡಿಮೆಯಾಗುತ್ತದೆ ಎನ್ನುವುದು ಈ ಕಥೆಯ ಸಾರಾಂಶ.

ವಿದ್ಯಾರ್ಥಿಗೆ ಧೈರ್ಯ ಬಂತು :

Advertisement

ಕೇರಳದ ಸರಕಾರಿ ಶಾಲೆಯ ಶಿಕ್ಷಕಿ ತರಗತಿ ಯಲ್ಲಿ ಈ ಕಥೆ ಹೇಳುತ್ತಿರುವಾಗ ತಮ್ಮದೇ ವಿದ್ಯಾರ್ಥಿಯೊಬ್ಬ ದೊಡ್ಡ ಮಾನಸಿಕ ಹೊರೆ ಹೊತ್ತುಕೊಂಡು ಕುಳಿತಿರುವುದು ಅವರ ಅರಿವಿಗೆ ಬಂದಿರಲಿಲ್ಲ. ಆದರೆ ಮಾರನೇ ದಿನ ಶಿಕ್ಷಕಿ ತನ್ನ ಕೊಠಡಿಯಲ್ಲಿದ್ದಾಗ ಅಲ್ಲಿಗೆ ಬಂದ 17 ವರ್ಷದ ಆ ವಿದ್ಯಾರ್ಥಿ ಒಂದೇ ಸಮನೆ ಅಳತೊಡಗಿದ. ಅವನಿಗೇನಾಯ್ತು ಎಂಬುದು ಗೊತ್ತಾಗದೇ ಶಿಕ್ಷಕಿ ಗೊಂದಲಕ್ಕೀಡಾದರು. ಸಮಾಧಾನಿಸಿ  ವಿಚಾರಿಸಿದಾಗ ಆತ ತನ್ನ ಮೇಲೆ ನೆರೆಮನೆಯ ವ್ಯಕ್ತಿಯೊಬ್ಬ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ ಎಂಬ ಸತ್ಯವನ್ನು ಬಿಚ್ಚಿಟ್ಟನು. ನಾನು ಈ ಸಂಕಷ್ಟ ದಿಂದ ಪಾರಾಗ ಬಯಸುತ್ತೇನೆ. ಸುಧಾ ಮೂರ್ತಿಯವರ ಕಥೆ ಕೇಳಿದ ಬಳಿಕ ನಾನೂ ನನ್ನ ಮನಸ್ಸಿನ ಹೊರೆ ಇಳಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಕಣ್ಣೀರಿಡುತ್ತಲೇ ಹೇಳಿದನು.

ತತ್‌ಕ್ಷಣ ಎಚ್ಚೆತ್ತ ಶಾಲಾಡಳಿತವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಿ ಶಾಲೆಗೆ ಕೌನ್ಸೆಲರ್‌ವೊಬ್ಬರನ್ನು ಕರೆಸಿಕೊಂಡು ಬಾಲಕನಿಗೆ ಕೌನ್ಸೆಲಿಂಗ್‌ ನೀಡ ಲಾರಂಭಿಸಿತು. ಸಮಾಲೋಚನೆ ವೇಳೆ ಬಾಲಕ ಅನುಭವಿಸಿದ್ದೆಲ್ಲವನ್ನೂ ವಿವರಿಸಿದ್ದಲ್ಲದೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಹೆಸರನ್ನೂ ತಿಳಿಸಿದನು. ಈ ಕುರಿತು “ದಿ ನ್ಯೂ ಇಂಡಿಯನ್‌  ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಎಫ್ಐಆರ್‌ ದಾಖಲು:

ಪ್ರಕರಣದ ಮಾಹಿತಿ ನೀಡಿರುವ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದ ಅಧಿಕಾರಿ, “ಪ್ರಕರಣದ ಗಂಭೀರತೆಯನ್ನು ಬಾಲಕನ ಹೆತ್ತವರಿಗೂ ವಿವರಿಸಿದೆವು. ಅನಂತರ ಪೊಲೀಸರಿಗೆ ದೂರು ನೀಡಿ, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್‌ ದಾಖಲಿಸಲಾಗಿದೆ’ ಎಂದಿದ್ದಾರೆ.

ಮಕ್ಕಳಲ್ಲಿ ತಮ್ಮ ಅನುಭವಗಳನ್ನು ಹೇಳಿ ಕೊಳ್ಳುವಂಥ ನಡವಳಿಕೆಯನ್ನು ಬೆಳೆಸಬೇಕು. ಅವರು ಸಮಸ್ಯೆ ಹೇಳಿಕೊಂಡಾಗ ಗಮನ ವಿಟ್ಟು ಆಲಿಸುವಂಥ ತರಬೇತಿಯನ್ನೂ ಶಿಕ್ಷಕ ರಿಗೆ ನೀಡಬೇಕು. ಜೀವನಕೌಶಲಗಳು ಪಠ್ಯ ಕ್ರಮದ ಭಾಗವಾಗಬೇಕಾದ್ದು ಇಂದಿನ ಅಗತ್ಯ.  -ಪಿ. ಜಯಪ್ರಕಾಶ್‌,  ಮಕ್ಕಳ ಮನೋರೋಗ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next