ಉಪೇಂದ್ರ ಅಭಿನಯದ “ಐ ಲವ್ ಯು’ ಚಿತ್ರ ಜೂನ್ 14 ರಂದು ತೆರೆಕಾಣಲಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್ ಹಿಟ್ ಆಗಿದ್ದು, ಅದರಂತೆ ಸಿನಿಮಾವನ್ನು ಕೂಡಾ ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈಗ “ಐ ಲವ್ ಯು’ ಚಿತ್ರಕ್ಕೆ ಸುದೀಪ್ ಸಾಥ್ ನೀಡುತ್ತಿದ್ದಾರೆ. ಅದು ಹೇಗೆ ಎಂದು ನೀವು ಕೇಳಬಹುದು.
“ಐ ಲವ್ ಯು’ ಚಿತ್ರದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮೇ 27 ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಸುದೀಪ್ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಚಿತ್ರತಂಡ ಎರಡನೇ ಟ್ರೇಲರ್ ಬಿಡುಗಡೆಯಾಗುತ್ತಿದೆ.
ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್ ಯು’ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿದ್ದು, ಜೂನ್ 14 ರಂದು ಎರಡೂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ದಿಲ್‌ರಾಜು ಎನ್ನುವವರು ಚಿತ್ರದ ವಿತರಣೆಯ ಹಕ್ಕನ್ನು ಪಡೆದಿದ್ದು, ಅಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.
ದೊಡ್ಡ ಗ್ಯಾಪ್‌ನ ನಂತರ ಬಿಡುಗಡೆಯಾಗುತ್ತಿರುವ ಉಪೇಂದ್ರ ಸಿನಿಮಾ ಇದಾಗಿರುವುದರಿಂದ ಸಿನಿಮಾದ ಬಗ್ಗೆ ನಿರೀಕ್ಷೆ ಹಾಗೂ ಬೇಡಿಕೆ ಹೆಚ್ಚಿದೆ. ಜೊತೆಗೆ ಪಕ್ಕಾ ಉಪೇಂದ್ರ ಶೈಲಿಯ ಸಿನಿಮಾ ಎಂದು ಈಗಾಗಲೇ ಬಿಂಬಿತವಾಗಿರುವುದರಿಂದ ಉಪ್ಪಿ ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿರುವ ಉಪೇಂದ್ರ ಅವರ ಡೈಲಾಗ್‌ಗಳು,
ಅವರು ಕಾಣಿಸಿಕೊಂಡಿರುವ ರೀತಿ ಎಲ್ಲವೂ “ಐ ಲವ್ ಯು’ ಕ್ರೇಜ್ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಇನ್ನುಸುಮಾರು 1000ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ ಇನ್ನು ಉಪೇಂದ್ರ ಈಗಾಗಲೇ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದು, ಟಾಲಿವುಡ್‌ನಲ್ಲಿ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಹೀಗಾಗಿ ಕನ್ನಡದಂತೆ, ತೆಲುಗಿನಲ್ಲೂ ಕೂಡ “ಐ ಲವ್ ಯು’ ಚಿತ್ರಕ್ಕೆ ಬಿಗ್ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಕೆಲ ವರ್ಷಗಳ ಹಿಂದೆ “ಬ್ರಹ್ಮ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು.
ಮಾಸ್ ಆಡಿಯನ್ಸ್ ಗಮನ ಸೆಳೆದಿದ್ದ “ಬ್ರಹ್ಮ’ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸೌಂಡ್ ಮಾಡಿತ್ತು. ಈಗ ಎರಡನೇ ಬಾರಿಗೆ ಉಪೇಂದ್ರ – ಆರ್. ಚಂದ್ರು ಜೋಡಿ “ಐ ಲವ್ ಯು’ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿರುವುದು ಚಿತ್ರರಂಗ ಮತ್ತು ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.