ಬೆಂಗಳೂರು: ಬಹುಭಾಷಾ ಖ್ಯಾತ ನಟ ಸುದೀಪ್ ದಂಪತಿ ನಡುವಣ ವಿಚ್ಛೇದನ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ. ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿಯನ್ನು ನಗರದ ಕೌಟುಂಬಿಕ ನ್ಯಾಯಾಲಯ
ದಿಂದ ವಾಪಸ್ ಪಡೆದುಕೊಂಡಿದ್ದಾರೆ.
ಈ ಮೂಲಕ ದಾಂಪತ್ಯ ಜೀವನದಲ್ಲಿ ಉಂಟಾಗುವ ಸಣ್ಣ -ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಮತ್ತೆ ಸಹಬಾಳ್ವೆ ನಡೆಸುವ ಮಹತ್ತರ ತೀರ್ಮಾನಕ್ಕೆ ಬಂದಿದ್ದಾರೆ.
ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ, ನಮ್ಮೊಳಗಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿದಿದ್ದು ಒಟ್ಟಿಗೆ ಸಹಬಾಳ್ವೆ ನಡೆಸಲು ತೀರ್ಮಾನಿಸಿದ್ದೇವೆ. ಹೀಗಾಗಿ ಈ ಅರ್ಜಿ ವಿಚಾರಣೆ ಮುಂದುವರಿಸಲು ಆಸಕ್ತಿಯಿಲ್ಲ. ಹೀಗಾಗಿ ಅರ್ಜಿ ವಾಪಸ್ ಪಡೆದುಕೊಳ್ಳುತ್ತಿದ್ದೇವೆ ಎಂಬ ಜ್ಞಾಪನಾ ಪತ್ರ (ಮೆಮೋ)ವನ್ನು ಇಬ್ಬರ ವಕೀಲರೂ ಗುರುವಾರ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದರು.
ಈ ಜ್ಞಾಪನಾ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯ ದಂಪತಿಯ ವಿಚ್ಛೇದನಾ ಅರ್ಜಿಯನ್ನು ಇತ್ಯರ್ಥಗೊಳಿಸಿತು.”ಸುದೀಪ್ ದಂಪತಿ ಸಲ್ಲಿಸಿದ್ದ ಮೆಮೊವನ್ನು ನ್ಯಾಯಾಲಯ ಪುರಸ್ಕರಿಸಿದೆ. ದಂಪತಿ ಮತ್ತೆ ಒಂದಾಗುತ್ತಿರುವುದು ಸಂತಸ ನೀಡಿದೆ” ಎಂದು ಸುದೀಪ್ ಪರ ವಕೀಲರಾದ ಭಾಸ್ಕರ್ ಬಾಬು ಉದಯವಾಣಿ ಜೊತೆ ಅಭಿಪ್ರಾಯ ಹಂಚಿಕೊಂಡರು.
ಪ್ರಕರಣ ಏನು?: 2001ರಲ್ಲಿ ವಿವಾಹ ಬಂಧನಕ್ಕೊಳಗಾದ ನಟ ಸುದೀಪ್ ಹಾಗೂ ಪ್ರಿಯಾಗೆ,2004ರಲ್ಲಿ ಮಗಳು ಸಾನ್ವಿ ಜನಿಸಿದ್ದರು. ಅಲ್ಲದೆ 14 ವರ್ಷ ಜೀವನ ನಡೆಸಿದ್ದ ಸುದೀಪ್ ದಂಪತಿ, 2015ರಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಗಳು, ವೈಯಕ್ತಿಕ ಹೊಂದಾಣಿಕೆ ಹಿನ್ನೆಲೆಯಲ್ಲಿ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಕೆಲ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೊನೆಗೆ ವಿಚ್ಛೇದನ ಕೋರಿ, ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಎರಡೂ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಿದ್ದ ನ್ಯಾಯಾಲಯದ ಹಲವು ಬಾರಿ ವಿಚಾರಣೆ ನಡೆಸಿತ್ತು. ಆದರೆ, ಸುದೀಪ್ ಹಾಗೂ ಪ್ರಿಯಾ ವಿಚಾರಣೆಗೆ ಪದೇ ಪದೆ ಗೈರು ಹಾಜರಾಗುತ್ತಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ವಿಚಾರಣೆಗೆ ಸರಿಯಾಗಿ ಹಾಜರಾಗಿ ಇಲ್ಲದಿದ್ದರೆ ಅರ್ಜಿ ವಾಪಾಸ್ ಪಡೆದುಕೊಳ್ಳಿ ಎಂದು ಖಡಕ್ ಸೂಚನೆ ಕೂಡ ನೀಡಿತ್ತು.ಮತ್ತೂಂದು ಮೂಲಗಳ ಪ್ರಕಾರ, ಡೈವೋ ರ್ಸ್‌ಗೆ ಅರ್ಜಿ ಸಲ್ಲಿಸಿದ ಕೆಲ ತಿಂಗಳುಗಳ ಬಳಿಕ ಮಗಳು ಸಾನ್ವಿ ಸಲುವಾಗಿ ಸುದೀಪ್ ಹಾಗೂ ಪ್ರಿಯಾ ಮತ್ತೆ ಒಂದಾಗಲು ನಿರ್ಧರಿಸಿದ್ದರು. ಹೀಗಾಗಿ, ವಿಚಾರಣೆಗೆ ಗೈರು ಹಾಜರಾಗುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಅದೇ ರೀತಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ನ್ಯಾಯಾಲಯಕ್ಕೆ ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ವಿಚಾರಣೆ ಮುಂದುವರಿಯುತ್ತಲೇ ಇರುತ್ತದೆ. ಖುದ್ದು ಅರ್ಜಿದಾರರು ಪರಸ್ಪರ ಸಮ್ಮತಿ ಮೇರೆಗೆ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿ ಅರ್ಜಿ ವಾಪಸ್ ಪಡೆದುಕೊಂಡರೆ ಅರ್ಜಿ ಇತ್ಯರ್ಥವಾಗಲಿದೆ.