ಬೆಂಗಳೂರು: ಅಪ್ಪಟ ಸಾಂಪ್ರದಾಯಿಕ ಶೈಲಿಯ ಉಡುಪುಗಳಿಗೆ ಹೆಸರಾಗಿರುವ ರಾಮರಾಜ್ ಕಾಟನ್ ಸಂಸ್ಥೆ ನಗರದಲ್ಲಿ ಮತ್ತೂಂದು ಹೊಸ ಮಳಿಗೆ ಆರಂಭಿಸಿದೆ. ಬಸವೇಶ್ವರ ನಗರದ ಮೋದಿ ಕಣ್ಣಿನ ಆಸ್ಪತ್ರೆ ಎದುರು ರಾಮರಾಜ್‌ನ ನೂತನ ಷೋರೂಂ ತೆರೆದಿದ್ದು, ಭಾನುವಾರ ಬೆಳಗ್ಗೆ ರಾಮರಾಜ್ ಕಾಟನ್ ಸಂಸ್ಥೆಯ ಬ್ರ್ಯಾಂಡ್ ರಾಯಭಾರಿ, ನಟ ಕಿಚ್ಚ ಸುದೀಪ್ ಹೊಸ ಮಳಿಗೆಗೆ ಚಾಲನೆ ನೀಡಿದರು. ನಗರದಲ್ಲಿ ಇದು ಸಂಸ್ಥೆಯ 6ನೇ ಶಾಖೆ ಆಗಿದೆ.
ರಾಮರಾಜ್ ಕಾಟನ್ ಸಂಸ್ಥೆಯು ದೇಶದ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಉತ್ಕೃಷ್ಟವಾದ ಹತ್ತಿ ನೂಲನ್ನು ಬಳಸಿಕೊಂಡು ಅಪ್ಪಟ ಸಾಂಪ್ರದಾಯಕ ಶೈಲಿಯಲ್ಲಿ ತಯಾರಿಸಿದ ಬಟ್ಟೆಗಳಿಗೆ ರಾಮರಾಜ್ ಸಂಸ್ಥೆ ವೇದಿಕೆ ಆಗಿದೆ. ನೂತನವಾಗಿ ಉದ್ಘಾಟನೆಗೊಂಡ ಶಾಖೆಯಲ್ಲೂ ಈ ಪರಂಪರೆ ಮುಂದುವರಿಯಲಿದೆ. ವರ್ಷಾಂತ್ಯಕ್ಕೆ ನಗರದಲ್ಲಿ ಹತ್ತು ಷೋ ರೂಂಗಳನ್ನು ತೆರೆಯುವ ಗುರಿ ಇದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಕೆ.ಆರ್. ನಾಗರಾಜನ್ ತಿಳಿಸಿದರು.
ಉತ್ತರ ಭಾರತಕ್ಕೂ ಲಗ್ಗೆ?: ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ರಾಮರಾಜ್ ತನ್ನದೇ ಆದ ಕೊಡುಗೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ದೇಶೀಯ ಶೈಲಿಯು “ಟ್ರೆಂಡ್’ ಆಗಲಿದೆ. ಈ ನಿಟ್ಟಿನಲ್ಲಿ ಯೂತ್ ಕಲೆಕ್ಷನ್, ಮಕ್ಕಳಿಗಾಗಿ ಪಂಚೆ ಶರ್ಟುಗಳು, ಯುವಕರಿಗೆ ವೆಲ್‌ಕ್ರೋಪಾಕೆಟ್ ಪಂಚೆಗಳು, ಲೆನಿನ್ ಪಂಚೆಗಳು, ಸೀರೆಗಳು ದೊರೆಯಲಿವೆ.
ದಕ್ಷಿಣ ಭಾರತದಲ್ಲಿ ಈಗಾಗಲೇ 104 ಶಾಖೆಗಳನ್ನು ಸಂಸ್ಥೆ ಹೊಂದಿದ್ದು, ಈ ಪೈಕಿ ಕರ್ನಾಟಕದಲ್ಲಿ 10 ಇವೆ. ಮುಂದಿನ ಎರಡು-ಮೂರು ವರ್ಷಗಳಲ್ಲಿ ಉತ್ತರ ಭಾರತದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಕೆ.ಆರ್. ನಾಗರಾಜನ್ ಹೇಳಿದರು. ಶುದ್ಧ ಖಾದಿಯಷ್ಟೇ ರಾಮರಾಜ್ ಉಡುಪುಗಳು ಹಿತ ನೀಡುತ್ತವೆ. ಬೇಸಿಗೆಯಲ್ಲಿ ತಂಪು ಮತ್ತು ಚಳಿಗಾಲದಲ್ಲಿ ಬೆಚ್ಚನೆ ಅನುಭವ ನೀಡುವ ವಿಶಿಷ್ಟ ಗುಣಮಟ್ಟವನ್ನು ಈ ರಾಮರಾಜ್ ಉಡುಪುಗಳು ಹೊಂದಿವೆ.
ಅದರಲ್ಲೂ ಇತ್ತೀಚೆಗೆ ಫ್ಯಾಷನ್ ಆಗಿ ಮೂಡಿಬರುತ್ತಿರುವ ಪಂಚೆಗಳಿಗೆ ವಿಶಿಷ್ಟ ಸ್ಥಾನ ತಂದುಕೊಡುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಶ್ರೀಲಂಕ, ಸಿಂಗಪುರ, ಮಲೇಷಿಯ ಮತ್ತಿತರ ದೇಶಗಳಿಗೆ ಉತ್ಪನ್ನಗಳು ರಫ್ತು ಆಗುತ್ತವೆ ಎಂದರು. ಕಿಚ್ಚ ಸುದೀಪ್ ಷೋ ರೂಂ ಉದ್ಘಾಟಿಸಿ, ಬಟ್ಟೆಗಳನ್ನು ವೀಕ್ಷಿಸಿದರು.