ಸುದೀಪ್ ಅಭಿನಯದ “ಕೋಟಿಗೊಬ್ಬ 3′ ಚಿತ್ರ ಮುಗಿಸಿದ್ದಾರೆ. ಅತ್ತ, “ಬಿಗ್‌ಬಾಸ್’ ಸೀಸನ್-7 ರಿಯಾಲಿಟಿ ಶೋ ಕೂಡ ಮುಗಿದಿದೆ. ಸುದೀಪ್ ಈಗ ಮುಂದಿನ ಚಿತ್ರದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಸುದೀಪ್ ಮುಂದಿನ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ, ಸುದೀಪ್ ಈಗ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ.
ಈಗಾಗಲೇ ಸುದ್ದಿಯಾಗಿರುವಂತೆ, ಜಾಕ್ ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಆಗಲಿದೆ. ಅಂದಹಾಗೆ, ಚಿತ್ರದಲ್ಲಿ ನಿರೂಪ್ ಭಂಡಾರಿ ನಟಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ, ಚಿತ್ರದಲ್ಲಿ ಯಾರೆಲ್ಲ ಇರುತಾರೆ, ತಂತ್ರಜ್ಞರು ಯಾರ್ಯಾರು ಎಂಬ ಬಗ್ಗೆ ಅಧಿಕೃತ ಮಾಹಿತಿಯನ್ನು ಸುದೀಪ್ ಅವರಿಂದಲೇ ಕೇಳಬೇಕು ಎಂಬುದು ನಿರ್ದೇಶಕ ಅನೂಪ್ ಭಂಡಾರಿ ಮಾತು. ಈ ಕುರಿತು ಹೇಳಿಕೊಳ್ಳುವ ಅನೂಪ್ ಭಂಡಾರಿ, “ಚಿತ್ರಕ್ಕೆ ಎಲ್ಲಾ ತಯಾರಿ ನಡೆದಿದೆ.
ಇದೇ ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಸದ್ಯಕ್ಕೆ ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಒಂದಷ್ಟು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಉಳಿದದ್ದು ಬೇರೆ ಕಡೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಯಾವ ದಿನದಿಂದ ಚಿತ್ರೀಕರಣ ನಡೆಯಲಿದೆ ಎಂಬುದನ್ನು ಸುದೀಪ್ ಅವರ ಜೊತೆ ಚರ್ಚಿಸಿ ಪಕ್ಕಾ ಮಾಡಿಕೊಳ್ಳಲಾಗುವುದು ಸದ್ಯಕ್ಕೆ ಸ್ಕ್ರಿಪ್ಟ್ ಮುಗಿದಿದೆ. ತಾಂತ್ರಿಕ ವರ್ಗ ಸೇರಿದಂತೆ ಇನ್ನಿತರೆ ಕಲಾವಿದರ ಆಯ್ಕೆ ಬಗ್ಗೆಯೂ ಸುದೀಪ್ ಅವರೇ ಅನೌನ್ಸ್ ಮಾಡಲಿದ್ದಾರೆ.
ಈಗಾಗಲೇ ಚಿತ್ರಕ್ಕೆ “ಫ್ಯಾಂಟಮ್’ ಎಂಬ ಹೆಸರಿಡಲಾಗಿದೆ ಎಂಬ ಸುದ್ದಿ ಬಗ್ಗೆ ಹೇಳುವ ಅನೂಪ್ ಭಂಡಾರಿ, ಆ ಬಗ್ಗೆಯೂ ಸುದೀಪ್ ಅವರೇ ಸ್ಪಷ್ಟಪಡಿಸಲಿದ್ದಾರೆ. ಸದ್ಯಕ್ಕೆ ಚಿತ್ರದ ಮಾಹಿತಿಯನ್ನು ಅವರೇ ಹೇಳಲಿದ್ದಾರೆ. ಇನ್ನು, ನಾಯಕಿ ಸಮಂತಾ ಬರುತ್ತಾರಂತೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಅದರ ಬಗ್ಗೆಯೂ ಇಷ್ಟರಲ್ಲೇ ಮಾಹಿತಿ ಕೊಡುತ್ತೇವೆ. ನಾಯಕಿ ಯಾರಾಗಬೇಕೆಂಬ ಕುರಿತು ಮಾತುಕತೆ ನಡೆಯುತ್ತಿದೆ’ ಎಂದಷ್ಟೇ ಹೇಳುತ್ತಾರೆ ಅನೂಪ್ ಭಂಡಾರಿ.
ಇದೇ ಮೊದಲ ಸಲ ಸುದೀಪ್ ಅವರಿಗೆ ನಿರ್ದೇಶನ ಮಾಡುತ್ತಿರುವ ಅನೂಪ್ ಭಂಡಾರಿ, ಒಳ್ಳೆಯ ಕಥೆ ರೆಡಿಮಾಡಿಕೊಂಡಿದ್ದು, ಹೊಸ ಬಗೆಯ ನಿರೂಪಣೆ ಮೂಲಕ ಸುದೀಪ್ ಅಭಿಮಾನಿಗಳು ಸೇರಿದಂತೆ ಕನ್ನಡದ ಬಹುತೇಕ ಸಿನಿಪ್ರೇಮಿಗಳನ್ನು ರಂಜಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅದೇನೆ ಇರಲಿ, ಸುದೀಪ್‌ಗಾಗಿಯೇ ವಿಶೇಷ ಪಾತ್ರ ಕಟ್ಟಿಕೊಟ್ಟಿರುವ ನಿರ್ದೇಶಕರು, ಆ ಪಾತ್ರ ಹೇಗೆಲ್ಲಾ ಇರಲಿದೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು ಎನ್ನುತ್ತಾರೆ.