Advertisement

ಮಕ್ಕಳಿಂದ ಜಯಿಸಿದ ಸುದರ್ಶನ ವಿಜಯ

05:58 PM Sep 26, 2019 | Team Udayavani |

ಸಾತ್ವಿಕ ತೇಜ ಕಲಾಕೇಂದ್ರ ಒಡಿಯೂರಿನ ಬಾಲ ಕಲಾವಿದರು ಮಧೂರು ದೇವಳದಲ್ಲಿ ಪ್ರದರ್ಶಿಸಿದ ಸುದರ್ಶನ ವಿಜಯ ಪ್ರಸಂಗ ಬಾಲ್ಯದಲ್ಲೇ ಕಲೆಯ ಅಭಿರುಚಿಯನ್ನು ಬೆಳೆಸಿದರೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು.

Advertisement

ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಈ ಪ್ರಸಂಗವು, ಬಾಲ ಕಲಾವಿದರ ಪಾಲಕರಲ್ಲಿ ಹುಮ್ಮಸ್ಸು ಹುಟ್ಟಿಸಿತು. ಒಡ್ಡೋಲಗಕ್ಕೆ ದೇವೇಂದ್ರನ ವೇಷ, ಪ್ರವೇಶದೊಂದಿಗೆ ಕಿಡಿಹಾರಿಸಿದ್ದು ಕಾರ್ತಿಕ್‌ ಎನ್ನುವ ಬಾಲಕ. ಇವರೊಂದಿಗೆ ಅಗ್ನಿಯಾಗಿ ಕು| ಮೋಕ್ಷಾ, ವರುಣನಾಗಿ ಪ್ರಮಥ, ಕುಬೇರನಾಗಿ ಯಶ್ವಿ‌ನ್‌ ಉತ್ತಮ ಜತೆಗಾರಿಕೆ ನೀಡಿದರು.

ಶಿವಕಿರಣ್‌ ಶತ್ರುಪ್ರಸೂದನನಾಗಿ ಮತ್ತೂಬ್ಬ ಕಾರ್ತಿಕ್‌, ಗುಜ್ಜರಾಸುರನಾಗಿ ವಯಸ್ಸಿಗೆ ಮೀರಿದ ಬಣ್ಣ ವೇಷದ ಹೊಣೆಗಾರಿಕೆಯನ್ನು ಹೊತ್ತು ಪ್ರದರ್ಶನ ನೀಡಿದರು. ಬಣ್ಣದ ವೇಷದಲ್ಲಿ ಅನಗತ್ಯವಾದ ವೇಗಕ್ಕೆ ಕಡಿವಾಣ ಹಾಕಬೇಕಾದುದನ್ನು ಭವಿಷ್ಯದಲ್ಲಿ ಗಮನಿಸಬೇಕಾಗುವುದು ಅವಶ್ಯ. ಶಿವನಾಗಿ ರಾಮಕೃಷ್ಣ ಚಿಕ್ಕ,ಚೊಕ್ಕವಾಗಿ ಪ್ರಕಟಗೊಂಡರು. ಮಂದಸ್ಮಿತನಾಗಿ ಅತ್ಯಂತ ಸುಂದರವಾಗಿ ಕಂಡು ಬಂದ ವಿಷ್ಣು,ಲಕ್ಷ್ಮೀ ನೆನಪಿನ ಪಟಲದಲ್ಲಿ ಉಳಿಯುವಂತಹುದು. ಕು| ದಿಶಾರ ವದನ ವಿಷ್ಣುವಿನ ವೇಷಕ್ಕೆ ಹೇಳಿಮಾಡಿಸಿದಂತಿತ್ತು. ಅಂದದ ಬೊಗಸೆ ಕಂದು ಕಣ್ಣಿನ ಕು| ಪ್ರೇಕ್ಷಾ ಲಕ್ಷ್ಮೀಯಾಗಿ, ವಿಷ್ಣುವಿನ ಸೌಂದರ್ಯಕ್ಕೆ ಸರಿಸಾಟಿಯಾದುದು ಮಾತ್ರವಲ್ಲದೇ ಉತ್ತಮ ಮಾತುಗಾರಿಕೆ, ನಾಟ್ಯದಲ್ಲೂ ಸರಿಸಮಾನವಾಗಿ ಅಭಿವ್ಯಕ್ತಿಗೊಂಡಳು. “ಏನ ಬಣ್ಣಿಪೆನು ಪತಿಯೇ’ ಪದ್ಯಕ್ಕೆ ಸುಂದರವಾಗಿ ನಾಟ್ಯಾಭಿನಯ ಮಾಡಿದ್ದು ರಂಜಿಸಿತು.ಪ್ರಥಮ ಸುದರ್ಶನನಾಗಿ ರಂಗಕ್ಕೆ ಬಂದ ಬಾಲಕ ಗೌರವ್‌ ಉತ್ತಮ ಹಾವಭಾವದೊಂದಿಗೆ ರಂಜಿಸಿದ. ದ್ವಿತೀಯ ಸುದರ್ಶನನಾಗಿ ಮಿಂಚಿದ ಕು| ಗೌತಮಿ “ಆಲದೆಲೆಯೊಳ್‌ ಮಲಗಿ, ಮತ್ಸನ ರೆಕ್ಕೆಯೊಳ್‌ ಕೂರ್ಮನ ಚಿಪ್ಪಿನೊಳ್‌’ ಪದ್ಯಗಳಿಗೆ ಶಕ್ತಿಮೀರಿ ಪ್ರದರ್ಶನ ನೀಡುವಲ್ಲಿ ಸಫಲವಾದಳು.

ಬಹಳ ಸಮಯೋಚಿತವಾಗಿ ಭಾಗವತಿಕೆ ಮಾಡಿದವರು ಉಂಡೆಮನೆ ಕೃಷ್ಣ ಭಟ್ಟರು. ಶುದ್ಧ ಶಾಸ್ತ್ರೀಯ ಶೈಲಿಯನ್ನು ಬಾಲಕಲಾವಿದರಲ್ಲೂ ಪ್ರಯೋಗಿಸಿ, ಕಲಾತ್ಮಕವಾಗಿ ಮುನ್ನಡೆಸಿದ್ದು ಪ್ರಶಂಸೆಗೆ ಕಾರಣವಾಯಿತು. ಚೆಂಡೆಯಲ್ಲಿ ವರ್ಶಿತ್‌ ಕಿಜೆಕ್ಕಾರ್‌, ಮದ್ದಳೆಯಲ್ಲಿ ರಾಮದಾಸ್‌ ದೇವಸ್ಯ, ಚಕ್ರತಾಳದಲ್ಲಿ ಸುಬ್ರಹ್ಮಣ್ಯ ಶೆಟ್ಟಿ ಮಕ್ಕಳ ತಾಳಮೇಳಕ್ಕೆ ತಾಳ್ಮೆಯಿಂದ ಸಹಕರಿಸಿದರು.ಬಳಲುವ ಬಾಲ ಕಲಾವಿದರಿಗೆ ಸಾಂತ್ವನ ಹೇಳುತ್ತಾ, ಹುಮ್ಮಸ್ಸು ಬರಿಸಿ ಪ್ರಸಂಗದ ನಡೆಯನ್ನು ಕಾಪಾಡಿದ್ದು ,ಗುರುಗಳಾದ ಉಷಾ ಸುಬ್ರಹ್ಮಣ್ಯ ಶೆಟ್ಟಿಯವರು.

ಡಿ. ದೇವರಾಜ ರಾವ್‌, ವಾಣಿನಗರ

Advertisement
Advertisement

Udayavani is now on Telegram. Click here to join our channel and stay updated with the latest news.

Next