Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ

03:08 PM Nov 24, 2021 | Suhan S |

ವಿಜಯಪುರ: ಕಾರ್ಪೋರೇಟ್‌ ಪರವಾಗಿ ವಿದ್ಯುತ್‌ ತಿದ್ದುಪಡಿ ಕಾಯ್ದೆ ರದ್ದು ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐ ಕಮ್ಯೂನಿಷ್ಟ್ ಪಕ್ಷದ ವಿಜಯಪುರ ಜಿಲ್ಲಾ ಘಟಕದಿಂದ ಜಿಲ್ಲಾ ಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಬಂಡವಾಳಶಾಹಿ ಸೇವೆ ಮಾಡುವ ಸರ್ಕಾರಕ್ಕೆ ಧಿಕ್ಕಾರ, ವಿದ್ಯುತ್‌ ಖಾಸಗೀಕರಣಕ್ಕೆ ಧಿಕ್ಕಾರ, ವಿದ್ಯುತ್‌ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಿರಿ ಎಂಬಿತ್ಯಾದಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಕಾರ್ಯದರ್ಶಿ ಬಿ.ಭಗವಾನರೆಡ್ಡಿ, ಹೊಸ ಕೈಗಾರಿಕೆ ಮತ್ತು ಆರ್ಥಿಕ ನೀತಿ ಅಳವಡಿಸಿಕೊಂಡ ನಂತರ, ಅಂದರೆ 1990ರ ದಶಕದಲ್ಲಿ ಬಿಕ್ಕಟ್ಟಿನಿಂದ ಬಸವಳಿದಿದ್ದ ಬಂಡವಾಳಶಾಹಿ ವರ್ಗ ವಿದ್ಯುತ್‌ ವಲಯದಲ್ಲಿ ಬಂಡವಾಳ ಹೂಡಲು ಮುಂದಾಯಿತು. ಏಕೆಂದರೆ ಅಷ್ಟು ಹೊತ್ತಿಗಾಗಲೇ ಸಾರ್ವಜನಿಕರ ಹಣ ಬಳಸಿಕೊಂಡು ದೇಶವ್ಯಾಪಿ ಗ್ರಿಡ್‌ ಜಾಲ ನಿರ್ಮಿಸುವ ಕೆಲಸ ಬಹುತೇಕ ಪೂರ್ಣಗೊಂಡಿತ್ತು ಎಂದು ಹರಿಹಾಯ್ದರು.

ಅದರ ಪರಿಣಾಮವಾಗಿ ಪ್ರಸ್ತುತ ಸಂದರ್ಭ ಭಾರತದಲ್ಲಿ ಶೇ. 47 ವಿದ್ಯುತ್‌ ಉತ್ಪಾದನೆ ಖಾಸಗಿಯವರ ಕಪಿಮುಷ್ಟಿಯಲ್ಲಿದೆ. ಆಮದು ಮಾಡಿಕೊಂಡ ಕಲ್ಲಿದ್ದಲಿಗೆ ನೈಜ ದರಕ್ಕಿಂತ ಹೆಚ್ಚಿನ ದರ ಕೊಟ್ಟಿರುವಂತೆ ತೋರಿಸುವುದು. ಪೂರೈಕೆ ಕಂಪನಿಗಳು ತಮ್ಮ ಬಳಿ ಮಾತ್ರವೇ ವಿದ್ಯುತ್‌ ಖರೀದಿಸುವಂತೆ ಒತ್ತಡ ಹಾಕುವುದು. ಇಂತಹ ಹಲವಾರು ಕುತಂತ್ರಗಳ ಫಲವಾಗಿಯೇ ಇಂದು ವಿದ್ಯುತ್‌ ದರ ಎಗ್ಗಿಲ್ಲದೇ ಏರುತ್ತಿದೆ. ಈ ಖಾಸಗೀಕರಣದಿಂದ ಸಾಮಾನ್ಯ ಬಳಕೆದಾರನಿಗೆ ಪ್ರಯೋಜನ ಇದೆಯೇ? ಇಲ್ಲ. ರೈತರಿಗೆ ಏನಾದರೂ ಪ್ರಯೋಜನ ಇದೆಯೇ ಎಂದು ಪ್ರಶ್ನಿಸಿದರು. ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ವಿದ್ಯುತ್‌ (ತಿದ್ದುಪಡಿ) ಮಸೂದೆ- 2021ರಂತೆ ವಿದ್ಯುತ್‌ ಉತ್ಪಾದನೆ ಮೇಲೆ ಖಾಸಗಿಯವರು ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಇಡೀ ದೇಶದ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ನಿಟ್ಟಿನಲ್ಲಿ, ಸುಧಾರಣೆಯ ನೆಪವೊಡ್ಡಿ ಹೊಸ ವಿದ್ಯುತ್‌ ಮಸೂದೆ ರೂಪಿಸಿದ್ದಾರೆ ಎಂದು ಆರೋಪಿಸಿದರು. ಬಾಳು ಜೇವೂರ, ಎಚ್‌.ಟಿ. ಮಲ್ಲಿಕಾರ್ಜುನ, ಭರತಕುಮಾರ, ಸುರೇಖಾ ಕಡಪಟ್ಟಿ, ಗೀತಾ ಎಚ್‌., ದೀಪಾ ವಡ್ಡರ, ಶಿವರಂಜನಿ, ಪೀರಾ ಜಮಾದಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next