ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ನಂತರ ಲೋಕಸಭಾ ಚುನಾವಣೆಗೆ ಒಟ್ಟಾಗಿ ಹೋಗಿದ್ದರೂ ಅನಿರೀಕ್ಷಿತ ಫಲಿತಾಂಶ ಬಂದಿದೆ. ಕಾಂಗ್ರೆಸ್ ಒಂದು ಸೀಟು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇಷ್ಟು ಕಡಿಮೆ ಬರುತ್ತದೆ ಎಂದುಕೊಂಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಸೋತ ಕೂಡಲೇ ಪಕ್ಷ ಮುಳುಗಿ ಹೋಗುವುದಿಲ್ಲ. ನಮಗೆ ಇಷ್ಟು ಕಡಿಮೆ ಸಂಖ್ಯೆ ಬರುತ್ತದೆ ಎಂದು ಕನಸು ಮನಸಲ್ಲೂ ಎಣಿಸಿರಲಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಲೋಕಸಭೆ ಚುನಾವಣೆ ಗೆಲ್ಲಲು ಒಟ್ಟಿಗೆ ಹೋಗುವುದೆಂದು ನಿರ್ಧರಿಸಿ, ಚುನಾವಣೆ ಎದುರಿಸಿದ್ದೆವು. ಪಕ್ಷವು ನನ್ನ ಮೇಲೆ ವಿಶ್ವಾಸವಿಟ್ಟು ವಿಶೇಷ ಜವಾಬ್ದಾರಿ ನೀಡಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ.
ಈ ಫಲಿತಾಂಶದಲ್ಲಿ ನಮ್ಮ ಪಕ್ಷಕ್ಕೆ ಒಂದು ಸ್ಥಾನ, ಮೈತ್ರಿ ಪಕ್ಷಕ್ಕೆ ಒಂದು ಸ್ಥಾನ ಬಂದಿದೆ. ಹೆಚ್ಚು ಸ್ಥಾನ ಗೆಲ್ಲಬೇಕೆಂದು ಎಲ್ಲರೂ ಒಟ್ಟಾಗಿ ಪ್ರಯತ್ನಿಸಿದ್ದೆವು. ಆದರೆ, ನಾನು ವೈಯಕ್ತಿಕವಾಗಿ ಈ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.
ದೇಶದ ಜನ ತೀರ್ಮಾನವನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಸೋಲನ್ನು ಎದುರಿಸಬೇಕಾಗುತ್ತದೆ. ಸೋಲಿನಿಂದ ಕಲಿಯುವುದಿದೆ, ಕಲಿಯುತ್ತೇವೆ. ಜನರ ತೀರ್ಪುನ್ನು ಯಾರೂ ಪ್ರಶ್ನೆ ಮಾಡಬಾರದು, ಸ್ವೀಕರಿಸಬೇಕು. ದೇಶ, ರಾಜ್ಯದ ಜನ ಬಿಜೆಪಿಗೆ ಬೆಂಬಲ ಕೊಟ್ಟು, ಎರಡನೇ ಬಾರಿಗೆ ಸರ್ಕಾರ ನಡೆಸಲು ಜವಾಬ್ದಾರಿ ನೀಡಿದ್ದಾರೆ.
ಫಲಿತಾಂಶ ಗೌರವಿಸುವ ಜತೆಗೆ ಬಿಜೆಪಿಗೆ, ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುವೆ. ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಸದಾ ಇರುತ್ತದೆ. ಇದಕ್ಕೆ ವ್ಯತಿರಿಕ್ತ ಆಲೋಚನೆ ಇಲ್ಲ. ನಮ್ಮ ಪಕ್ಷದ ಸಿದ್ಧಾಂತ ಇತಿಹಾಸ ಇಟ್ಟು ಜನರ ಮುಂದೆ ಹೋಗುತ್ತೇವೆ ಎಂದರು.
ಕೇಂದ್ರಕ್ಕೆ ವರದಿ: ರಾಜ್ಯದ ಚುನಾವಣೆ ಫಲಿತಾಂಶಕ್ಕೆ ಬೇಕಾದಷ್ಟು ಕಾರಣ ಇದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷರಿಗೆ ಮುಟ್ಟಿಸುತ್ತೇನೆ. ಅವರು ಕೈಗೊಳ್ಳುವ ಮುಂದಿನ ಯಾವುದೇ ತೀರ್ಮಾನಕ್ಕೆ ನಾನು ಬದ್ಧ. ಫಲಿತಾಂಶದ ಬಗ್ಗೆ ವರದಿ ನೀಡಿದ್ದೇನೆ. ಪಕ್ಷದ ಅಧ್ಯಕ್ಷರು ಕೈಗೊಳ್ಳುವ ತೀರ್ಮಾನಕ್ಕೆ ತಾನು ಬದ್ಧನಾಗಿರುತ್ತೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.