ಕಲಬುರಗಿ: ನಗರದಲ್ಲಿ ರವಿವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸುಸೂತ್ರವಾಗಿ ಜರುಗಿತು. ಒಟ್ಟು 47 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆ ಸೇರಿ 16,581 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಟಿಇಟಿ ಪರೀಕ್ಷೆಗೆ ರಾಜ್ಯದಲ್ಲೇ ಅತಿ ಹೆಚ್ಚು (19,161) ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.
ಪರೀಕ್ಷಾ ಕೇಂದ್ರಗಳು ಸಹ ರಾಜ್ಯದಲ್ಲೇ ಅಧಿಕ ತೆರೆಯಲಾಗಿತ್ತು. ನಗರದ ನೂತನ ಮಹಾವಿದ್ಯಾಲಯ, ಡಾ| ಬಿ.ಆರ್. ಅಂಬೇಡ್ಕರ್ ಮಹಾವಿದ್ಯಾಲಯ, ಸೇಂಟ್ ಮೇರಿ ಸ್ಕೂಲ್, ನೊಬಲ್ ಸ್ಕೂಲ್ ಸೇರಿ 47 ಕಡೆ ಪರೀಕ್ಷೆಗಳು ನಡೆದವು. 1ರಿಂದ 5ನೇ ತರಗತಿಯ ಪ್ರಾಥಮಿಕ ಶಿಕ್ಷಕರ ಹುದ್ದೆಯ ಪತ್ರಿಕೆ-1ಕ್ಕೆ 5,303 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿದ್ದರು. ಇದರಲ್ಲಿ 4,264 ಜನ ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. 1,039 ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಡಿ.ಇಡ್ ಪೂರೈಸಿದವರು ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆದರು.
6ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಿಕ್ಷಕರ ಹುದ್ದೆಯ ಪತ್ರಿಕೆ-2ಕ್ಕೆ 13,858 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಒಟ್ಟು 12,317 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದರು. 1,541 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬಿಎ ಮತ್ತು ಬಿ.ಇಡ್ ಪೂರೈಸಿದ ಅಭ್ಯರ್ಥಿಗಳು ಹಿರಿಯ ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಹರಾಗಿದ್ದರು ಎಂದು ಪರೀಕ್ಷೆಯ ನೋಡಲ್ ಅಧಿಕಾರಿ ಸಾದತ್ ತಿಳಿಸಿದರು.
ಪತ್ರಿಕೆ-1ರ ಪರೀಕ್ಷೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ 16 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿತು. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರತಿ ಪರೀಕ್ಷಾ ಕೊಠಡಿಯನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸಲಾಯಿತು. ಪರೀಕ್ಷಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಪರೀಕ್ಷಾ ಕೊಠಡಿ ಒಳಗೆ ಪ್ರವೇಶಿಸುವ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಮಾಡಲಾಯಿತು. ಪತ್ರಿಕೆ-2ರ ಪರೀಕ್ಷೆ ಮಧ್ಯಾಹ್ನ 2ರಿಂದ ಸಂಜೆ 4.30ರ ವರೆಗೆ 47 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿತು. ಆಗಲೂ ಕೂಡ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕವೇ ಪರೀಕ್ಷೆ ನಡೆಸಲಾಯಿತು. ಬೆಳಿಗ್ಗೆ ನಡೆದಿದ್ದ 16 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ ಮತ್ತೂಮ್ಮೆ ಸ್ಯಾನಿಟೈಸ್ ಮಾಡಲಾಯಿತು. ಸುರಕ್ಷತೆ ನಿಟ್ಟಿನಲ್ಲಿ ಕುಡಿಯುವ ನೀರನ್ನು ಸ್ವತಃ ಅಭ್ಯರ್ಥಿಗಳೇ ತರುವಂತೆ ತಿಳಿಸಲಾಗಿತ್ತು ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.