ಬೆಂಗಳೂರು: ಅವಘಡವೊಂದರಲ್ಲಿ ಭಾಗಶಃ ಕುರುಡುತನದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ನಗರದ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ವೈದ್ಯರು “ಕಾಂಜುಕ್ಟಿವಲ್ ಲಿಂಬಲ್ ಸೆಲ್’ ಶಸ್ತ್ರಚಿಕಿತ್ಸೆ ಮೂಲಕ ದೃಷ್ಟಿ
ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ಹಿರಿಯ ಸಲಹೆಗಾರ ಡಾ.ರಘು, ತಮಿಳುನಾಡಿನ ಡೆಂಕಣಿ ಕೋಟೆಯ ಶಕ್ತಿವೇಲ್ ಎಂಬ ಏಳು ವರ್ಷದ ಹಿಂದೆ ಆಕಸ್ಮಿಕವಾಗಿ ಸುಣ್ಣದ ಪುಡಿ ಕಣ್ಣಿಗೆ ಬಿದ್ದು ಹಾನಿಯಾಗಿ ದೃಷ್ಟಿ ಮಂಜಾಗಿತ್ತು. ಆಸ್ಪತ್ರೆಗೆ ಬಂದ ಶಕ್ತಿವೇಲುವಿನ ಕಣ್ಣು ಪರಿಶೀಲಿಸಿದಾಗ “ಸಿಂಬ್ಲೆಫರೊನ್’ ಸೃಷ್ಟಿಯಾಗಿರುವುದು ಕಂಡುಬಂತು.
ಬಳಿಕ ಮೂಲ ಜೀವಕೋಶ ಕಸಿ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು ಎಂದು ಹೇಳಿದರು. ಶಕ್ತಿವೇಲುವಿನ ತಂದೆಯಿಂದ ಆಕಾರ ಜೀವಕೋಶಗಳನ್ನು ಪಡೆದು “ಕಾಂಜುಕ್ಟಿವಲ್ ಲಿಂಬಲ್ ಸ್ಟೆಮ್ ಸೆಲ್’ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಮೇಲ್ಪದರವನ್ನು ಡಿಸೆಕ್ಷನ್ ವಿಧಾನದಲ್ಲಿ ತೆಗೆಯಲಾಯಿತು. ಪದರ ಬೇರ್ಪಡಿಸುವ ಹಂತದಲ್ಲಿ ರಕ್ತಸ್ರಾವಾಗದಂತೆ ಎಚ್ಚರ ವಹಿಸಿದ್ದರಿಂದ ಹೆಚ್ಚು ರಕ್ತಸ್ರಾವವಾಗಲು ಅವಕಾಶ ನೀಡಲಿಲ್ಲ. ಬಾಲಕನ ಸಂತಸ ಕಂಡಾಗ ಮನಸ್ಸಿಗೆ ಆನಂದವಾಗುತ್ತದೆ ಎಂದು ತಿಳಿಸಿದರು. ಬಾಲಕನ ತಂದೆ ಗೋವಿಂದಪ್ಪ, ಮಗನ ದೃಷ್ಟಿ ಮರಳಿಸಿದ ವೈದ್ಯರ ಸೇವೆ ಸದಾ ಸ್ಮರಿಸುತ್ತೇವೆ ಎಂದು ಹೇಳಿದರು.