ದಾವಣಗೆರೆ: ಜನವರಿ 17 ರಿಂದ 20 ರವರೆಗೆ ನಡೆಯುವ ಸಾರ್ವತ್ರಿಕ ಪಲ್ಸ್ ಪೋಲಿಯೋಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಮೂಲಕ ಯಾವ ಅರ್ಹ ಮಗುವೂ ಲಸಿಕೆ ವಂಚಿತವಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕುರಿತ ಸಭೆಯಲ್ಲಿ ಮಾತನಾಡಿದ ಅವರು,ಈಗಾಗಲೇ ಹಲವಾರು ಲಸಿಕಾ ಕಾರ್ಯಕ್ರಮ ಯಶಸ್ವಿಗೊಂಡಿದೆ. ಈ ಬಾರಿಯೂ ಸಹ ವೈದ್ಯರು, ಸಿಬ್ಬಂದಿಗಳು, ಆಶಾ, ಅಂಗನವಾಡಿಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಬೆಸ್ಕಾಂ ವತಿಯಿಂದ ಲಸಿಕಾಕಾರ್ಯಕ್ರಮದ ಪೂರ್ವದಲ್ಲಿ ಮೂರು ದಿನಗಳಮುಂಚಿತವಾಗಿ ಹಾಗೂ ಲಸಿಕೆ ನೀಡುವದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ನೀಡಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಎಂಒಡಾ| ಶ್ರೀಧರ್ ಮಾತನಾಡಿ, ದೇಶದಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಈಗಾಗಲೇಪೋಲಿಯೋವನ್ನು ನಿರ್ಮೂಲನೆ ಮಾಡಿದ್ದೇವೆ.ಕರ್ನಾಟಕ ರಾಜ್ಯದಲ್ಲಿಯೂ 2007 ರಿಂದಯಾವುದೇ ಪ್ರಕರಣ ವರದಿಯಾಗಿಲ್ಲ.ಆದರೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಲ್ಲಿ ಕ್ರಮವಾಗಿ 72 ಮತ್ತು 56 ಪ್ರಕರಣಗಳಿವೆ.ನೆರೆ ರಾಷ್ಟ್ರಗಳಾಗಿರುವುದರಿಂದ ಎಚ್ಚರದಿಂದ ಇರಬೇಕಿದೆ ಹಾಗೂ ಆಫ್ರಿಕಾ ದೇಶದಲ್ಲಿ ಟೈಪ್-2 ಪೋಲಿಯೋ ಪತ್ತೆಯಾಗಿದೆ. ಹಾಗಾಗಿ ನಾವುಇನ್ನಷ್ಟು ದಿನ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ತಿಳಿಸಿದರು.
ಆರ್‌ಸಿಎಚ್ ಅಧಿಕಾರಿ ಡಾ| ಎಸ್. ಮೀನಾಕ್ಷಿಮಾತನಾಡಿ, ಜಿಲ್ಲೆಯಲ್ಲಿ ಜ. 17 ರಂದು ಬೂತ್ ಗಳಲ್ಲಿ 0 ದಿಂದ 5 ವರ್ಷದ ಮಕ್ಕಳಲ್ಲಿ ಲಸಿಕೆ ಹಾಕಲಾಗುವುದು. 18 ರಿಂದ 20 ರವರೆಗೆಮನೆ ಮನೆಗೆ ಭೇಟಿ ಮಾಡಿ ಬೂತ್‌ನಲ್ಲಿ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲಾಗುವುದು.ಒಟ್ಟಾರೆ 0 ಯಿಂದ 5 ವರ್ಷದ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ 0 ಯಿಂದ 5 ವರ್ಷದ ಮಕ್ಕಳ ಸಂಖ್ಯೆ 1,00,784, ನಗರ ಪ್ರದೇಶದಲ್ಲಿ 66,487 ಸೇರಿದಂತೆ ಒಟ್ಟು 1,67,771 ಮಕ್ಕಳಿಗೆ ಹನಿ ಹಾಕುವ ಗುರಿ ಹೊಂದಲಾಗಿದೆ. ಇದರಲ್ಲಿ52 ಹೈರಿಸ್ಕ್ ಪ್ರದೇಶಗಳಿದ್ದು ಅದರಲ್ಲಿ 6,256 ಮಕ್ಕಳನ್ನು ಗುರುತಿಸಲಾಗಿದೆ. ಇದಕ್ಕಾಗಿ 1129ಸ್ಥಿರ ಬೂತ್‌ಗಳು, 50 ಟ್ರಾನ್ಸಿಸ್ಟ್ ಬೂತ್‌ಗಳು, 41 ಮೊಬೈಲ್ ಬೂತ್ ಹಾಗೂ 1855 ಲಸಿಕಾಕಾರ್ಯಕರ್ತರು, 221 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಹಾಗೂ ಕೋವಿಡ್ 19 ನಿಮಿತ್ತ ಪ್ರತಿ ಬೂತ್‌ಗಳಲ್ಲಿ ಗರಿಷ್ಠ 200 ಮಕ್ಕಳಿಗೆ ಲಸಿಕೆಹಾಕುವಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್, ಜಿ. ನಜ್ಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್, ಡಾ| ರಾಘವನ್ ಮತ್ತಿತರರು ಭಾಗವಹಿಸಿದ್ದರು.