Advertisement

ಯಶಸ್ವಿ ಕಾರ್ಯಾಚರಣೆ; ಮೂವರು ಕಳ್ಳರ ಬಂಧನ

02:28 PM Mar 19, 2022 | Team Udayavani |

ಮೊಳಕಾಲ್ಮೂರು: ಸಾರ್ವಜನಿಕರ ಅಜಾಗರೂಕತೆ ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ ಸರಣಿಗಳ್ಳರನ್ನು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಪಟ್ಟಣದ ಕಟುಕರ ಬೀದಿಯ ಅಬ್ದುಲ್‌ ರೆಹಮಾನ್‌, ಭಾಗ್ಯಜ್ಯೋತಿ ನಗರದ ವಾಸಿಂ ಅಕ್ರಂ, ಮೊಬಾರಕ್‌ ಮೊಹಲ್ಲಾದ ಅಲ್ಲಾ ಬಕಾಷ್‌ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ಆರೋಪಿ ಕಲಗೋಡ್‌ ಮೊಹಲ್ಲಾದ ಉಮರ್‌ ಫಾರುಕ್‌ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಜಾಲಬೀಸಲಾಗಿದೆ.

Advertisement

ಪಟ್ಟಣದಲ್ಲಿ ಬಹುದಿನಗಳಿಂದಲೂ ವಿವಿಧ ಬಡಾವಣೆಗಳಲ್ಲಿನ ಮನೆಗಳು ಹಾಗೂ ಸರ್ಕಾರಿ ಇಲಾಖಾ ಕಚೇರಿಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದವು. ಕಳ್ಳರು ತುಂಬಾ ಚಾಣಾಕ್ಷತನದಿಂದ ಯಾವುದೇ ಸುಳಿವು ಸಿಗದಂತೆ ಕಳ್ಳತನ ಮಾಡುವಲ್ಲಿ ನಿಪುಣರಾಗಿದ್ದರು. ಪಟ್ಟಣದ ಸರ್ಕಾರಿ ಕಚೇರಿಗಳು, ಶಾಲೆಗಳ ಕಂಪ್ಯೂಟರ್‌ಗಳ ಪರಿಕರಗಳು ಹಾಗೂ ಯಾರೂ ಇಲ್ಲದ ಮನೆಗಳೇ ಇವರ ಟಾರ್ಗೆಟ್‌ ಆಗಿದ್ದವು. ಬಹುದಿನಗಳ ಹಿಂದೆ ಪಟ್ಟಣದ ಹಾನಗಲ್‌ ರಸ್ತೆಯಲ್ಲಿ ರಾತ್ರಿ ವೇಳೆ ನಿಲುಗಡೆಯಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿನ 20 ಲೀಟರ್‌ ನಷ್ಟು ಡೀಸೆಲ್‌ ಅನ್ನು ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮೊಳಕಾಲ್ಮೂರು ಪೊಲೀಸ್‌ ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್‌ ಅವರ ಮಾರ್ಗದರ್ಶನದ ಮೇರೆಗೆ ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ಎಂ.ಕೆ.ಬಸವರಾಜ್‌ ಹಾಗೂ ಸಿಬ್ಬಂದಿ ಕಳ್ಳರ ಸೆರೆಗೆ ಜಾಲ ಬೀಸಿದ್ದರು. ಪಟ್ಟಣದ ಈ ಸರಣಿಗಳ್ಳರನ್ನು ಪತ್ತೆ ಹಚ್ಚಲು ತಂತ್ರಜ್ಞಾನದಿಂದ ನಿರಂತರದ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ. ಎಎಸ್‌ಐಗಳಾದ ತಿಮ್ಮಣ್ಣ, ಜಯಪ್ಪ, ಹಾಗೂ ಸಿಬ್ಬಂದಿ ಶ್ರೀಧರ, ಬಾಷಾ, ಶಿವಕುಮಾರ್‌ ನಾಯಕ, ನರೇಶ್‌ ಕುಮಾರ್‌, ಪುರಂದರ, ರಮೇಶ್‌, ವೀರಣ್ಣ, ಭೀಮಣ್ಣ, ಮಂಜುನಾಥ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೊಳಕಾಲ್ಮೂರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next