Advertisement

ನಿರಂತರ ಶಿಕ್ಷಣದಿಂದ ಯಶಸ್ಸು ಸಾಧ್ಯ

04:41 PM Jun 19, 2018 | Team Udayavani |

ಬಾಗಲಕೋಟೆ: ಮನುಷ್ಯ ಹುಟ್ಟಿನಾಗಿನಿಂದ ಕೊನೆಯವರೆಗೂ ಸೃಷ್ಟಿಯಲ್ಲಿ ಕಲಿಯಬೇಕಾಗಿದ್ದು ಸಾಕಷ್ಟಿದೆ. ವಿದ್ಯಾರ್ಥಿಗಳು ಶಿಕ್ಷಣವೆಂದರೆ ಇಷ್ಟೇ ಎಂಬ ಮನೋಭಾವ ಮತ್ತು ಅತಿಯಾದ ಆತ್ಮ ವಿಶ್ವಾಸ ಬಿಟ್ಟು ನಿರಂತರ ಶಿಕ್ಷಣ ಪಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಸುರಳಕರ ಹೇಳಿದರು.

Advertisement

ಸೋಮವಾರ ನವನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉತ್ತಮ ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಹಿಂದೆ ಪಾಲಕರ, ಶಿಕ್ಷಕರ, ಬಂಧುಗಳ ಹಾಗೂ ಸಮಾಜದ ಜನರ ಪರಿಶ್ರಮ ಅಡಗಿದ್ದು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮಗಾಗಿ ಶ್ರಮಿಸಿದವರ ಬಗ್ಗೆ ಅಪಾರ ಗೌರವ ಹೊಂದಬೇಕು ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳ ಹಿಂದೆ ಪಾಲಕರಿಗಿಂತ ಶಿಕ್ಷಕರ ಶ್ರಮ ಹೆಚ್ಚಾಗಿದ್ದು, ಇಂದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಾರ್ಯಕ್ಕೆ ಕಾರಣಿಕರ್ತರಾದ ಎಲ್ಲ ಶಿಕ್ಷಕರಿಗೆ ವೈಯಕ್ತಿಕಗಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಯಾವುದೇ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ದರ್ಜೆಯೊಂದಿಗೆ ಉತ್ತೀರ್ಣರಾದಾಗ ಅಲ್ಲಿಯ ಶಿಕ್ಷಕ ಹಾಗೂ ಶಾಲೆಯ ಮೇಲೆ ಸಾರ್ವಜನಿಕರೆಲ್ಲರ ಗಮನ ಸೆಳೆದು ತಮ್ಮ ಮಕ್ಕಳನ್ನು ಅದೇ ಶಾಲೆಗೆ ಸೇರಿಸಲು ಮುಂದಾಗುತ್ತಾರೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಎಲ್ಲ ವಿಷಯಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತದೆ. ಆದರೆ ಈ ಹಂತ ದಾಟಿದ ಮೇಲೆ ಮುಂದಿನ ಶಿಕ್ಷಣಕ್ಕೆ ಆಯ್ಕೆ ವಿಷಯದಲ್ಲಿ ಗೊಂದಲ ಹುಟ್ಟುವುದು ಸಹಜ. ಆದರೆ ಆ ಆಯ್ಕೆ ವಿಷಯದಲ್ಲಿ ಪಾಲಕರು ಒತ್ತಡ ಹೇರಬಾರದು. ಅವರಲ್ಲಿ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ತಿಳಿದು ಅದರಲ್ಲಿ ಮುಂದುವರಿಯಲು ಬಿಡಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ದಿಶಾ ಮತ್ತು ಮನ್ವಂತರಗಳು ಉತ್ತಮ ಕಾರ್ಯಕ್ರಮಗಳಾಗಿವೆ ಎಂದು ನುಡಿದರು. ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿದರು. ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಸುಜಾತಾ ಸಿಂಗಾಡೆ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಉತ್ತಮ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್‌. ಕಾಮಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಡಿವೈಪಿಸಿಯ ಯೋಜನಾ ಸಮನ್ವಯಾಧಿಕಾರಿ ಎನ್‌.ವೈ. ಕುಂದರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಗೊರವರ, ಶಿಕ್ಷಣ ಇಲಾಖೆ ಪೋಲೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು. 

2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪವಿತ್ರಾ ಅರೆನಾಡ, ಅಮೃತ ಮುರಗುಂಡಿ, ರವೀನಾ ಪಾಟೀಲ, ಸಹನಾ ಹಳಿಂಗಲಿ, ತಂಜುಮ್‌ ಅತ್ತಾರ, ಸೀಮರಾನ್‌ ನಾಯ್ಕವಾಡ, ಪ್ರಿಯಾಂಕ ಶಾಸ್ತ್ರೀ ಸೇರಿದಂತೆ ಇತರೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸೋಮವಾರ ನವನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಉತ್ತಮ ಶಿಕ್ಷಕರಿಗೆ ಅಭಿನಂದನಾ ಸಮಾರಂಭದ ವೇಳೆ ಅಂಬೇಡ್ಕರ್‌ ಭವನದಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಾಗ ಕೆಲ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ನಂತರ ಶಿಕ್ಷಕರೆಲ್ಲರೂ ಸೇರಿ ನೀರು ಹಾಕಿ ಬೆಂಕಿ ನಂದಿಸಿ, ಭಾರೀ ಅನಾಹುತ ತಪ್ಪಿಸಿದ್ದಾರೆ. ನಂತರ ಪ್ರತಿಭಾ ಪುರಸ್ಕಾರ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next