ಯಶಸ್ಸು ಎನ್ನುವುದು ಸೋಮಾರಿಯ ಸ್ವತ್ತಲ್ಲ. ಶ್ರದ್ಧೆ, ನಿರಂತರ ಪ್ರಯತ್ನದಿಂದಷ್ಟೇ ಸಾಧನೆಯ ಶಿಖರ ಏರಬಹುದು. ಕೇವಲ ಮಾತಿನಲ್ಲಿ ಹೇಳುತ್ತಾ, ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಕುಳಿತರೆ ಯಶಸ್ಸು ಮರೀಚಿಕೆಯಾಗಬಹುದೇ ಹೊರತು ಅದರಲ್ಲಿ ನಮ್ಮ ಗುರುತು ಮೂಡಲು ಸಾಧ್ಯವಿಲ್ಲ. ಅವಕಾಶಗಳಿಗಾಗಿ ಕಾದು ಕೂರದೆ ನಾವೇ ಸೃಷ್ಟಿಸಿಕೊಂಡು ಮುನ್ನುಗ್ಗಬೇಕು.
ಒಬ್ಬ ವ್ಯಕ್ತಿ ತಾನು ಜೀವನದಲ್ಲಿ ಏನಾದರೂ ಮಾಡಬೇಕು. ಏನಾದರೂ ಸಾಧಿಸಬೇಕು. ತನ್ನನ್ನು ಜನ ಗುರುತಿಸಬೇಕು ಎಂದು ಸದಾ ತನ್ನ ಮನದ ಆಸೆಯನ್ನು ಹೇಳುತ್ತಾ ಬರುತ್ತಾನೆ. ಆಫೀಸಿನ ಕ್ಯಾಂಟೀನ್‌ನಲ್ಲಿ ಸಿಕ್ಕ ತನ್ನ ಗೆಳೆಯರೊಡನೆ, ಬಿಡುವಿದ್ದಾಗ ಸಿಕ್ಕ ತನ್ನ ಆತ್ಮೀಯರೊಡನೆ, ಕೊನೆಗೆ ಆಗಾಗ ಬಂದು ಹೋಗುವ ತನ್ನ ಸಂಬಂಧಿಕರ ಕಿವಿಗೂ ತಾನು ಏನಾದರು ಮಾಡಬೇಕು, ಎಲ್ಲರ ಎದುರು ಗೆದ್ದು ನಿಲ್ಲಬೇಕು ಎನ್ನುವ ಕನಸಿನ ಮಾತನ್ನು ಹಂಚಿಕೊಳ್ಳುತ್ತಾ ಇರುತ್ತಾನೆ.
ಇವನ ಅದೇ ಮಾತಿನ ಧಾಟಿಯಿಂದ ಗೆಳೆಯರು ಹಾಗೂ ಅಲ್ಲಲ್ಲಿ ಸಿಗುವ ಆತ್ಮೀಯರು ಇವನಿಂದ, ಕಣ್ತಪ್ಪಿಸಿ ನಡೆಯಲು ಆರಂಭಿಸುತ್ತಾರೆ. ಇತ್ತ ಪ್ರತಿ ದಿನ, ಗಳಿಗೆ ಸವೆಯುತ್ತಾ ಹೋದ ಹಾಗೆ ಕನಸು ಕಾಣುತ್ತಾ, ಕಲ್ಪಿಸಿಕೊಳ್ಳುತ್ತಾ ಈ ವ್ಯಕ್ತಿ ತನ್ನಿಂದ ಯಾಕೆ ಸ್ನೇಹಿತರು ದೂರ ಸರಿಯುತ್ತಿದ್ದಾರೆ? ಎನ್ನುವ ಯೋಚನೆ ಮಾಡದೇ ತಾನು ಇವರಿಗಿಂತ ಮುಂದೆ, ಇವರೆಲ್ಲರ ಮುಂದೆ ಮುನ್ನಡೆದು ತೋರಿಸುತ್ತೇನೆ, ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎನ್ನುವ ಕಲ್ಪನೆಯನ್ನು ಮತ್ತಷ್ಟು ಶೃಂಗರಿಸಿಕೊಂಡು ಯೋಚಿಸಲು ಆರಂಭಿಸುತ್ತಾನೆ.
ಹೀಗೆಯೇ ದಿನಗಳು ಕಳೆಯುತ್ತವೆ. ತಿಂಗಳು ಓಡುತ್ತವೆ, ಕಾಲ ಸವೆದು ವರ್ಷಗಳು ಉರುಳುತ್ತವೆ. ಆದರೆ ಈ ವ್ಯಕ್ತಿ ಮಾತ್ರ ತಾನು ಇವತ್ತಲ್ಲ ನಾಳೆ ಸಾಧಿಸುತ್ತೇನೆ ಎನ್ನುವ ತನ್ನದೇ ಲೋಕದಲ್ಲಿ ಮಿಂಚು ಹರಿಸದ ನಕ್ಷತ್ರವನ್ನು ಬೆಳಗಿಸಲು ಹೆಣಗಾಡುತ್ತಾನೆ. ಆತನ ಹಿಂದೆ ಇದ್ದ ಜೂನಿಯರ್ಸ್, ಜತೆಗಿದ್ದ ಜಾಬ್ ಮೇಟ್ಸ್ ಎಲ್ಲರಿಗೂ ಜೀವನದಲ್ಲಿ ಅಂದುಕೊಂಡ ಯಶಸ್ಸು ಲಭಿಸುತ್ತದೆ. ಆದರೆ ಈತ ಮಾತ್ರ ಒಂದೇ ಸಮುದ್ರದಲ್ಲಿ ಇದ್ದು ಈಜಿಕೊಂಡು ಮುಂದೆ ಹೋಗದೇ, ಮುಳುಗದೇ, ಸಾಗುವ ನೀರಿನಲ್ಲಿ ನಿಂತ ನಿರುಪಯುಕ್ತ ತ್ಯಾಜ್ಯದ ಹಾಗೆ ಇರುತ್ತಾನೆ.
ಇದೊಂದು ಕಥೆ. ಅಲ್ಲ ಇದು ನನ್ನ ಕಥೆ. ಅಲ್ಲ ಕ್ಷಮಿಸಿ ಪರಿಸ್ಥಿತಿಗೆ ಅನುಗುಣವಾಗಿ ಇದು ನಮ್ಮ-ನಿಮ್ಮ ಕಥೆಯೂ ಆಗಬಹುದು. ಆ ಗಳಿಗೆ ಬರಬಹುದು. ಇಲ್ಲಿ ಬರುವ ಈ ವ್ಯಕ್ತಿ ಬಹುಶಃ ಹಿಂದೆ ನಾನು ಆಗಿದ್ದೆ. ಅಥವಾ ಮುಂದೆ ನೀವೂ ಆಗಬಹುದು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ತೆಗೆದುಕೊಂಡ ಸ್ನೇಹಿತನ ಏಳಿಗೆಯನ್ನು ಕಂಡು ಒಳಗೊಳಗೆ ಸ್ವಾರ್ಥದ ಬೆಂಕಿಯನ್ನು ಹಚ್ಚಿಕೊಂಡ ಆ ಗಳಿಗೆ. ಆಫೀಸ್‌ನಲ್ಲಿ ಜೂನಿಯರ್ ಒಬ್ಬರು ಬಾಸ್‌ನಿಂದ ಶಹಬ್ಟಾಸ್‌ಗಿರಿ ಪಡೆದುಕೊಂಡ ಆ ಕ್ಷಣ ಹುಟ್ಟಿಕೊಂಡ ಸ್ವಾರ್ಥದ ಕಿಡಿಯಲ್ಲಿ ನಾನು-ನೀವೂ ಏನಾದರೂ ಮಾಡಬೇಕು, ಸಾಧಿಸಬೇಕು, ಅವನಿಗಿಂತ ಅಥವಾ ಅವಳಿಗಿಂತ ಮುಂದೆ ಹೋಗಿ ಯಶಸ್ಸಿನ ಆ ಕ್ಷಣವನ್ನು ಅನುಭವಿಸಿ ನಾಲ್ಕು ಜನರ ಎದುರಿಗೆ ಗುರುತಿಸಿಕೊಳ್ಳಬೇಕು ಎನ್ನುವುದರ ಹಿಂದೆ ಇನ್ನೊಬ್ಬರ ಏಳಿಗೆಯನ್ನು ಸಹಿಸದ ಸ್ವಾರ್ಥವೇ ಅಡಗಿರುತ್ತದೆ.
“ಸರ್’ ಆಗುವ ಮೊದಲು ಸೇವಕನಾಗು
ನಾವೆಲ್ಲ ಹಾಗೆಯೇ. ದಾರಿ ಸರಿಯಾಗಿ ಗೊತ್ತಿಲ್ಲದೇ ಇದ್ರೂ ಪರವಾಗಿಲ್ಲ. ಅಲ್ಲಿ ಸುಗಮವಾಗಿ ಪಯಣ ಮಾಡಬೇಕು ಎನ್ನುವ ಮನಸ್ಥಿತಿಯುಳ್ಳವರು. ದಾರಿ ಖಾಲಿಯಾಗಿ ಇದೆ ಎಂದರೆ ಅಲ್ಲಿ ಯಾರೂ ನಡೆದಿಲ್ಲ ಎನ್ನುವ ಅರ್ಥವಲ್ಲ, ನಡೆದು ಹೋದ ಹೆಜ್ಜೆಗಳು ಮಾಸಿಹೋಗಿವೆ ಅಷ್ಟೇ. ಜೀವನದಲ್ಲಿ ಏನೇ ದೊಡ್ಡದನ್ನು ಮಾಡಲು ಹೋಗಬೇಕಾದರೆ ಮೊದಲು ನಾವು ಸಣ್ಣದನ್ನು ಯೋಚಿಸಬೇಕು. ಸಾಧನೆ ಮಾಡಲು ಹೋದವ ಮೊದಲು ಸಾಮಾನ್ಯವಾಗಿ ಇದ್ದರೆ ಮಾತ್ರ ಆತ ಸಾಧಕನಾಗಬಲ್ಲ. ವಾಕ್ಯ ಬರೆಯುವ ಮುನ್ನ ಅಕ್ಷರಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಎದ್ದು ನಡೆಯಬೇಕು ಅಂದರೆ ಮೊದಲು ತೆವಳಿಕೊಂಡು ಹೋಗುವುದನ್ನು ಕಲಿಯಬೇಕು. ಸಾಧಕನಾಗಬೇಕಾದರೆ ಮೊದಲು ಸಂಕಷ್ಟಗಳನ್ನು ಎದುರಿಸಬೇಕು.
-ಸುಹಾನ್ ಶೇಕ್