ಬನಹಟ್ಟಿ: ಬಿಜೆಪಿ ಗೆಲ್ಲುವಲ್ಲಿ ತೇರದಾಳ ಮತಕ್ಷೇತ್ರದ ಕಾರ್ಯಕರ್ತರ ಪಡೆ ಪ್ರಮುಖ ಪಾತ್ರ ವಹಿಸಿದೆ. ಗೆಲುವಿನ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಶನಿವಾರ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ತೇರದಾಳ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು 21 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸುವಲ್ಲಿ ತೇರದಾಳ ಮತಕ್ಷೇತ್ರದ ಕಾರ್ಯಕರ್ತರ ಜೊತೆ ಹೊರಗಿನಿಂದ ಬಂದ ಮುಖಂಡರು ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಂತೆ ಕಾರ್ಯಕರ್ತರೆಲ್ಲರೂ ಶಾಸಕರಿದ್ದಂತೆ, ವಿಪಕ್ಷವಾದ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಪಡೆಯಿಲ್ಲದೆ ಬಿಕೋ ಎನ್ನುತ್ತಿದೆ. ಕಾರ್ಯಕರ್ತರ ಪಡೆಯಿದ್ದರೆ ಕೇವಲ ಬಿಜೆಪಿಯಲ್ಲಿ ಮಾತ್ರ. ನಮ್ಮ ಕಾರ್ಯಕರ್ತರ ನಕಲು ಮಾಡಲು ಸಾಧ್ಯವಿಲ್ಲ ಎಂದರು.
ಅಪವಿತ್ರ ಮೈತ್ರಿಯಿಂದ ಕೂಡಿರುವ ರಾಜ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ. ಸರ್ಕಾರ ರಚನೆಗೆ 15 ದಿನಗಳ ಕಾಲ ಅ ಧಿಕಾರದ ಆಸೆಗೆ ಗುದ್ದಾಟ ನಡೆಸುತ್ತ ಕಾಂಗ್ರೆಸ್-ಜೆಡಿಎಸ್ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಕೇವಲ 6 ತಿಂಗಳೊಳಗಾಗಿ ಸರಕಾರ ಪತನವಾಗಲಿದೆ ಎಂದರು. ಚುನಾವಣೆ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ಮರಳು ಸುಲಭವಾಗಿ ದೊರಕಲು ಮರಳು ಸರಳೀಕರಣ ಮಾಡಿಯೇ ತೀರುತ್ತೇನೆ. ಸರ್ಕಾರ ನಮ್ಮದಿಲ್ಲ ಕಾರಣ ಸ್ವಲ್ಪ ವಿಳಂಬವಾಗುವುದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕ ಬಡವರಿಗೆ ಹಾಗೂ ಬಿಜೆಪಿ ಕಾರ್ಯಕರ್ತರೆಂಬ ಉದ್ದೇಶದಿಂದ ಆಶ್ರಯ ಫಲಾನುಭವಿಗಳಿಗೆ ದ್ರೋಹವೆಸಗಿದ್ದಾರೆ. ಅವರ್ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ಮತ್ತೂಮ್ಮೆ ಅರ್ಜಿ ಸಲ್ಲಿಸಿದರೆ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.
ಶಿವಾನಂದ ಬಡಿಗೇರ ಮಾತನಾಡಿ, ತೇರದಾಳ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ನಿರೀಕ್ಷೆಯಂತೆಯಾಗಿದೆ. ಇಷ್ಟೊಂದು ಅಂತರದ ಗೆಲುವಿಗೆ ಪ್ರಮುಖರ ಸಂಪರ್ಕ ಕಾರ್ಯ ಹಾಗೂ ಪ್ರತಿಯೊಬ್ಬರಿಗೆ ವಹಿಸಿದ್ದ ಜವಾಬ್ದಾರಿ 15 ಮತದಾರರ ಪಟ್ಟಿ ಕಾರ್ಯ ಯಶಸ್ವಿ ಕಾಣುವಲ್ಲಿ ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭ ಬಿಜೆಪಿ ಗೆಲುವಿಗೆ ಶ್ರಮಿಸಿದ ಹಲವಾರು ಮುಖಂಡರನ್ನು, ಆಯಾ ಪಟ್ಟಣ, ಗ್ರಾಮಗಳ ಮುಖ್ಯಸ್ಥರನ್ನು ಜನತೆ ಪರವಾಗಿ ಸನ್ಮಾನಿಸಲಾಯಿತು. ಮೋಹನ ಜಾಧವ, ಭೀಮಶಿಮಗದುಮ್, ಸುರೇಶ ಚಿಂಡಕ, ಮಹಾದೇವಪ್ಪ ಹಟ್ಟಿ ಮಾತನಾಡಿದರು.
ಜಿಪಂ ಸದಸ್ಯರಾದ ಪರಶುರಾಮ ಬಸವ್ವಗೋಳ, ಪುಂಡಲೀಕ ಪಾಲಭಾವಿ, ರಾಜು ಅಂಬಲಿ, ಬಸನಗೌಡ ಪಾಟೀಲ, ಮಹಾದೇವಪ್ಪ ಹಟ್ಟಿ, ಡಿ .ಆರ್. ಪಾಟೀಲ, ಪಷ್ಪದಂತ ದಾನಿಗೊಂಡ, ಶ್ರೀಶೈಲ ಪಾಟೀಲ, ಮನೋಹರ ಶಿರೋಳ, ಕಾಮಣ್ಣ ಹೊನಕಾಂಡೆ, ಆನಂದ ಕಂಪು, ಸುರೇಶ ಅಕ್ಕಿವಾಟ, ಸಂಜಯ ತೆಗ್ಗಿ, ದುಂಡಪ್ಪ ಮಾಚಕನೂರ, ಬಾಬಾಗೌಡ ಪಾಟೀಲ, ಸುರೇಶ ರೇಣಕೆ, ರಾಮಣ್ಣ ಹುಲಕುಂದ, ಧರೆಪ್ಪ ಉಳ್ಳಾಗಡ್ಡಿ, ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಕೋಳಿಗುಡ್ಡ, ಬಸವರಾಜ ತೆಗ್ಗಿ, ಸವಿತಾ ಹೊಸೂರ, ನಂದು ಗಾಯಕವಾಡ ಸೇರಿದಂತೆ ಅನೇಕರಿದ್ದರು. ಜಿ.ಎಸ್. ಗೊಂಬಿ ಸ್ವಾಗತಿಸಿದರು. ಶಂಕರ ಹುನ್ನೂರ ನಿರೂಪಿಸಿದರು. ರಾಜು ಬಾಣಕಾರ ವಂದಿಸಿದರು.