ಶಿರಾ: ಆಸ್ಟ್ರೇಲಿಯಾದಲ್ಲಿ ಎಂಬಿಎ, ಎಂಐಟಿ ವ್ಯಾಸಂಗ ಮಾಡಿ ಕೈ ತುಂಬಾ ಸಂಪಾದಿಸುವ ಕೆಲಸ ತೊರೆದು ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ ಯುವ ರೈತ ಆಶೀಶ್ ನಾಗರಾಜ್.
2012ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ನಂತರ ಆಸ್ಟ್ರೇಲಿಯಾದಲ್ಲಿ ಎಂಬಿಎ, ಎಂಐಟಿ ಪದವಿ ಜೊತೆಗೆ ಉದ್ಯೋಗ ಕೊಡ ಪಡೆದು ಕೊಂಡಿದ್ದರು. ವಿದೇಶದಲ್ಲಿ 1.5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಆಶೀಶ್ ತಾಲೂಕಿನ ಗೌಡಗರೆ ಹೋಬಳಿಯ ಕೆ.ರಂಗನಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ 2018ರಲ್ಲಿ 13 ಎಕರೆ ಜಮೀನನ್ನು ಪತ್ನಿ ಚಿನ್ಮಯಿ ಒಡೆತನದಲ್ಲಿ ಖರೀದಿಸಿದರು.
ಒಂದು ಸೀಮೆ ಹಸು ಸಾಕುವ ಮೂಲಕ ಹೈನುಗಾರಿಕೆ ಕ್ಷೇತ್ರದತ್ತ ಹೆಜ್ಜೆ ಇಟ್ಟ ಬಳಿಕ ಮತ್ತೆ ವಿದೇಶಕ್ಕೆ ತೆರಳಲಿಲ್ಲ. ನಮ್ಮ ನೆಲದಲ್ಲೇ ಲಕ್ಷಾಂತರ ರೂ. ಸಂಪಾದಿಸಬೇಕೆಂಬ ಗುರಿ ಹೊಂದಿದ್ದರು. ಆರಂಭದಲ್ಲಿ ತಾಲೂಕಿನ ಹೈನುಗಾರಿಕೆ ಸಾಕುವವರನ್ನು ಸಂಪರ್ಕಿಸಿ ಮಾಹಿತಿ ಪಡೆದು ಉದ್ಯಮ ಆರಂಭಿಸಿದರು.
ಕೈ ಹಿಡಿದ ಗಂಗೆ: ಗೌಡಗೆರೆ ಹೋಬಳಿಯ ಗ್ರಾಮಗಳಲ್ಲಿ ಅಂತರ್ಜಲದ ಕೊರತೆ ವಿಪರೀತವಾಗಿದ್ದು, ಸಾವಿರ ಅಡಿ ಕೊರೆದರೂ ನೀರು ಸಿಗುವುದೇ ಕಷ್ಟ. ಇಂತಹ ಸ್ಥಿತಿಯಲ್ಲಿ ತಾನು ಕಲಿತಿರುವ ತಂತ್ರಜ್ಞಾನ ಬಳಸಿ ಸ್ವತಃ ನೀರು ಇರುವ ಜಾಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಆಶೀಶ್ ಹಾಕಿಸಿದ ಮೂರು ಕೊಳವೆಯಲ್ಲೂ 3 ಇಂಚು ನೀರು ಕಂಡಿದ್ದಾರೆ. ಶಿರಾ ಡಿಸಿಸಿ ಬ್ಯಾಂಕ್‌ನಿಂದ 7 ಲಕ್ಷ ರೂ. ಸಾಲ ಪಡೆದು ಉದ್ಯಮ ಆರಂಭಿಸಿದ್ದು, ಪ್ರಸ್ತುತ 24 ಸೀಮೆ ಹಸು ಹಾಗೂ 6 ಕರುಗಳಿವೆ. ನಿತ್ಯ ಬೆಳಗ್ಗೆ 150 ಲೀ ಹಾಗೂ ಸಂಜೆ 150 ಲೀ ಒಟ್ಟು 300 ಲೀಟರ್ ಹಾಲು ನಿತ್ಯ ಉತ್ಪಾದನೆಯಾಗುತ್ತಿದೆ. ಅಕ್ಷಯ ಕಲ್ಪ ಸಂಸ್ಥೆಯವರು ನೇರವಾಗಿ ಇಲ್ಲಿಯೇ ಹಾಲು ಖರೀದಿಸುತ್ತಾರೆ. ಅಲ್ಲದೇ, ಪ್ರತಿ ಲೀಟರ್‌ಗೆ 38 ರೂ. ಬೆಲೆ ನೀಡುತ್ತಾರೆ.
ನೈಸರ್ಗಿಕ ಕೃಷಿ ಮೂಲಕ ಸಿಗುವಂತ ಮೆಕ್ಕೆ ಜೋಳ, ಕಬ್ಬು, ಸಾವಯವ ರಸಗೊಬ್ಬರದಂತ ಆಹಾರ ಸೀಮೆ ಹಸುಗಳಿಗೆ ನಿತ್ಯ ನೀಡುತ್ತಿರುವ ಕಾರಣ ಹಾಲಿನ ಗುಣ ಮಟ್ಟ ಉತ್ತಮವಾಗಿರುವ ಕಾರಣ ಅಕ್ಷಯ ಕಲ್ಪ ಕಂಪನಿಯವರು ನಗರ ಪ್ರದೇಶಗಳಲ್ಲಿ ಪ್ರತಿ ಲೀಟರ್ ಹಾಲನ್ನು 78 ರೂ.ಗೆ ಮಾರಾಟ ಮಾಡುತ್ತಾರೆ. ಪ್ರತಿ ಹಸುವಿನ ಉಪಚಾರಕ್ಕೆ ತಲಾ 140 ರೂಪಾಯಿ ಖರ್ಚು, ಒಟ್ಟು 24 ಹಸುಗಳು ಹಾಗೂ ಕಾರ್ಮಿಕ, ಪಶು ಆಹಾರ ಸೇರಿ ಒಟ್ಟು 1.50 ಲಕ್ಷ ರೂ.ಖರ್ಚು ಬರಲಿದ್ದು, ಹಾಲಿನ ವಹಿವಾಟಿನಿಂದ ಪ್ರತಿ ತಿಂಗಳು 3 ಲಕ್ಷ ರೂ. ಬರಲಿದ್ದು, ಉಳಿಕೆ 1.50 ಲಕ್ಷ ರೂ. ಶ್ರಮಕ್ಕೆ ಸಿಗುವ ಲಾಭವಾಗಲಿದೆ. ಮಾಹಿತಿಗಾಗಿ ಸಂಪರ್ಕಿಸಿ ಮೊ:7338133639
ಆಸ್ಟ್ರೇಲಿಯಾದಲ್ಲಿ ಎಂಬಿಎ ಓದಿ ಲಕ್ಷ ರೂ. ದುಡಿಮೆ ಮಾಡುತ್ತಿದ್ದೆ. ನಮ್ಮ ನೆಲದಲ್ಲೇ ಉದ್ಯಮ ಆರಂಭಿಸಿ ಹಣ ಸಂಪಾದನೆ ಮಾಡಬೇಕೆಂಬ ಗುರಿ ಇಟ್ಟು ಆರಂಭಿಸಿದೆ. ಪಟ್ಟ ಶ್ರಮಕ್ಕೆ ಯಶಸ್ಸು ಸಿಕ್ಕಿದೆ. ಇನ್ನೂ 100 ಸೀಮೆ ಹಸು ಕಟ್ಟಿ ಮಾದರಿ ಡೇರಿ ಮಾಡಬೇಕೆಂಬ ಹಂಬಲ ಇದೆ. –
ಆಶೀಶ್ ನಾಗರಾಜು, ಪ್ರಗತಿಪರ ಯುವ ರೈತ
-ಎಸ್.ಕೆ.ಕುಮಾರ್