ಹುನಗುಂದ: ಸ್ಪರ್ಧಾತ್ಮಕ ಪರೀಕ್ಷೆಗೆ ಮಾಧ್ಯಮ ಮುಖ್ಯವಲ್ಲ. ನಿರಂತರ ಅಧ್ಯಯನ ಮತ್ತು ಸಾಧನೆಯ ಮಾಡಿದ ವ್ಯಕ್ತಿಗಳ ಪ್ರೇರಣೆ ಮುಖ್ಯ ಎಂದು ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಶ್ವೇತಾ ಬಿಡಿಕರ ಹೇಳಿದರು.
ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಹಾಗೂ ವಿವಿಧ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಪತ್ರಿಕೆಗಳ ಮಹತ್ವ ಬಹಳಷ್ಟಿದೆ. ನಿತ್ಯ ಪತ್ರಿಕೆಗಳನ್ನು ಓದುವುದನ್ನು ಕಲಿಯಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ. ಇಂಗ್ಲಿಷ್ ಕಷ್ಟವಾಗುತ್ತದೆ ಎನ್ನುವ ಮನೋಧೋರಣೆ ಬಿಟ್ಟು ಪ್ರಯತ್ನ ಪಟ್ಟು ಓದಿದರೇ ಎಲ್ಲ ವಿಷಯ ಅರ್ಥವಾಗುತ್ತದೆ ಎಂದರು.
ಪದವಿ ಕೋರ್ಸ್ ಜೀವನದ ಬದಲಾವಣೆ ಮತ್ತು ಭವಿಷ್ಯ ನಿರ್ಮಿಸಿಕೊಳ್ಳಲು ತೀರ್ಮಾನ ತಗೆದುಕೊಳ್ಳುವ ಪ್ರಮುಖ ಘಟ್ಟವಾಗಿದೆ. ಪ್ರಾಧ್ಯಾಪಕರ ಹೇಳುವ ಪಾಠಗಳನ್ನು ಮತ್ತು ಅವರು ನೀಡುವ ಮಾರ್ಗದರ್ಶನವನ್ನು ಸರಿಯಾಗಿ ಕಲಿತುಕೊಂಡು ಉತ್ತಮ ಅಧ್ಯಯನ ಮಾಡಿದರೇ ಉನ್ನತ ಹುದ್ದೆ ಪಡೆದುಕೊಳ್ಳಲು ಸಾಧ್ಯ ಎಂದರು.
ಸಿಪಿಐ ಹೊಸಕೇರಪ್ಪ ಕೊಳ್ಳೂರ ಮಾತನಾಡಿ, ಪದವಿ ನಂತರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಿಂತ ಪ್ರೌಢ ಶಾಲಾ ಹಂತದಿಂದಲೇ ಆರಂಭಿಸುವುದು ಮುಖ್ಯ. ಐಚ್ಛಿಕ ವಿಷಯಗಳ ಜತೆಗೆ ಸಾಮಾನ್ಯ ಜ್ಞಾನವನ್ನು ಅರಿತುಕೊಂಡರೆ ಸುಲಭವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬಹುದು ಎಂದರು.
ಪಾಂಶುಪಾಲ ಡಾ| ಎಸ್.ಎಲ್.ಪಾಟೀಲ ಮಾತನಾಡಿ, ಮನುಷ್ಯನಿಗೆ ಅಸಾಧ್ಯ ಯಾವುದೂ ಇಲ್ಲ. ಸಮಸ್ಯೆಗಳನ್ನು ಅವಕಾಶವಾಗಿ ಸ್ವೀಕರಿಸಿದಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಾಧ್ಯಕ್ಷ ಬಿ.ವೈ. ಆಲೂರ, ಶ್ರೀದೇವಿ ಕಡಿವಾಲ ಇದ್ದರು. ಪ್ರೊ| ಗಾಯತ್ರಿ ದಾದ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ನಿಜೇಶಕುಮಾರ ಸ್ವಾಗತಿಸಿದರು. ಡಾ| ಲಿಂಗಪ್ಪ ಗಗ್ಗರಿ ನಿರೂಪಿಸಿದರು. ಪ್ರೊ| ಖಾಜಾವಾಲಿ ಈಚನಾಳ ವಂದಿಸಿದರು.