Advertisement

ಪರಿವರ್ತನಾ ಯಾತ್ರೆಗೆ ನಿರೀಕ್ಷೆಗೂ ಮೀರಿದ ಯಶಸ್ಸು

10:39 AM Nov 10, 2017 | Team Udayavani |

ಪುತ್ತೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿದ ಯಶಸ್ಸು ಲಭಿಸುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಮಿಕ್ಕಿ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಮುಕ್ತ ರಾಜ್ಯ ನಿರ್ಮಾಣವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅಭಿಪ್ರಾಯಿಸಿದ್ದಾರೆ.

Advertisement

ಗುರುವಾರ ಬೆಳಗ್ಗೆ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪತ್ರಕರ್ತರ ಜತೆ ಅವರು ಮಾತನಾಡಿದರು. ಯಾತ್ರೆಗೆ ತುಮಕೂರು ಹಾಗೂ ಹಾಸನದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವುದು ಯಶಸ್ಸಿನ ಸೂಚಕ ಎಂದರು.

ಹೈಕಮಾಂಡ್‌ಗೆ ಮಾಹಿತಿ
ಪರಿವರ್ತನಾ ಯಾತ್ರೆಯ ವಿರುದ್ಧ ಸೊಗಡು ಶಿವಣ್ಣ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಲ್ಲೇಖೀಸುವ ಅಗತ್ಯವಿಲ್ಲ. ಸಿದ್ದರಾಮಯ್ಯ ಬೇಕಾಬಿಟ್ಟಿ ಮಾತನಾಡದೆ ನಾಲಿಗೆ ಬಿಗಿ ಹಿಡಿಯಲಿ. ಸೊಗಡು ಶಿವಣ್ಣ ಅವರ ಕುರಿತು ಹೈಕಮಾಂಡ್‌ಗೆ ಮಾಹಿತಿ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಪರಮೇಶ್ವರ್‌ ಅವರ ಬೆಂಬಲವೂ ಸಿಗದು
ಜಾತಿಯ ವಿಷಯ ಬೀಜ ಬಿತ್ತುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್‌ ಹಮ್ಮಿಕೊಂಡಿರುವ ಯಾತ್ರೆಗೆ ಸ್ವತಃ ಪರಮೇಶ್ವರ್‌ ಅವರೂ ಬೆಂಬಲ ಕೊಡುವುದು ಅನುಮಾನ. ಉಳಿದ ನಾಯಕರ ಬೆಂಬಲ ಸಿಗದೆ ಕಾಂಗ್ರೆಸ್‌ ಯಾತ್ರೆ ಸ್ಥಗಿತಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಮೂರ್ಖರಿಂದ ಕರಾಳ ದಿನ
ಕೇಂದ್ರ ಸರಕಾರ ನೋಟ್‌ ಬ್ಯಾನ್‌,  ಜಿಎಸ್‌ಟಿಯಂತಹ ದಿಟ್ಟ ಪ್ರಯತ್ನವನ್ನು ಜಾರಿಗೊಳಿಸಿದ ಕಾರಣದಿಂದ ಆರ್ಥಿಕ ಸುಧಾರಣೆ ಕಾಣಿಸಿಕೊಂಡಿದೆ. ಮನಮೋಹನ್‌ ಸಿಂಗ್‌ ಅವರು ಆರ್ಥಿಕ ತಜ್ಞರಾಗಿದ್ದರೂ ಅವರು ಪ್ರಧಾನಿಯಾಗಿದ್ದಾಗ ಇಂತಹ ಸಾಧನೆ ಆಗಲಿಲ್ಲ. ಪ್ರಪಂಚವೇ ಮೋದಿಯವರ ಅಭಿವೃದ್ಧಿಪರ ಯೋಜನೆಗಳನ್ನು ಮೆಚ್ಚುತ್ತಿರುವಾಗ ಮೂರ್ಖರು ಕರಾಳ ದಿನ ಆಚರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಎಲ್ಲ ಅರ್ಹತೆಗಳನ್ನು ಹೊಂದಿರುವ
ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವುದಾಗಿ ಭರವಸೆ ನೀಡಿದ ಬಿ.ಎಸ್‌. ಯಡಿಯೂರಪ್ಪ, ಐತಿಹಾಸಿಕ ಮಹಾಲಿಂಗೇಶ್ವರ ದೇವಾಲಯದ ಎದುರು ಈ ಹೇಳಿಕೆ ನೀಡುತ್ತಿರುವುದರಿಂದ ಜನರ ಅಪೇಕ್ಷೆ ಖಂಡಿತವಾಗಿಯೂ ಈಡೇರಲಿದೆ ಎಂದರು.

ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಯಾಪುರ, ಬಿಜೆಪಿ
ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಡಾ| ಎಂ.ಕೆ. ಪ್ರಸಾದ್‌, ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಗೌರಿ, ಪ್ರಮುಖರಾದ ಕೆ.ಟಿ. ಶೈಲಜಾ, ಅರುಣ್‌ ಕುಮಾರ್‌ ಪುತ್ತಿಲ, ಆರ್‌.ಸಿ. ನಾರಾಯಣ ಉಪಸ್ಥಿತರಿದ್ದರು.

ಪುತ್ತೂರ ಉಳ್ಳಾಯನಲ್ಲಿ ಪ್ರಾರ್ಥನೆ
ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಸ್ವಾಗತಿಸಿದರು. ಪರಿವರ್ತನ ಯಾತ್ರೆಯ ಯಶಸ್ಸಿಗಾಗಿ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅನುಗ್ರಹಿಸುವಂತೆ ಯಡಿಯೂರಪ್ಪ ಅವರು ಶ್ರೀ. ಮಹಾಲಿಂಗೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪರಿವರ್ತನ ಯಾತ್ರೆಯ ಹಿನ್ನೆಲೆಯಲ್ಲಿ ಬುಧವಾರ ಪುತ್ತೂರಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾತ್ರಿ ಪುತ್ತೂರಿನಲ್ಲಿ ತಂಗಿದ್ದರು. ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಬಳಿಕ ಮಂಗಳೂರಿನ ಪಕ್ಷದ ಕೋರ್‌ ಕಮಿಟಿ ಮೀಟಿಂಗ್‌ನಲ್ಲಿ ಭಾಗವಹಿಸಲು ತೆರಳಿದರು.

ಸಂತೋಷ್‌ ಭೇಟಿ
ಬಿ.ಎಸ್‌. ಯಡಿಯೂರಪ್ಪ ಅವರು ದೇವಾಲಯದಿಂದ ನಿರ್ಗಮಿಸಿದ ಬಳಿಕ ಬಿಜೆಪಿ ರಾಷ್ಟ್ರೀಯ ಜತೆ ಕಾರ್ಯದರ್ಶಿ, ಮೂಲತ: ಪುತ್ತೂರಿನವರಾದ ಬಿ.ಎಲ್‌. ಸಂತೋಷ್‌ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಪಕ್ಷದ ಮುಖಂಡರು ಅವರನ್ನು ಸ್ವಾಗತಿಸಿದರು. ಬಳಿಕ ಪಕ್ಕದ ಹೊಟೇಲ್‌ನಲ್ಲಿ ತಿಂಡಿಗಾಗಿ ತೆರಳಿದ ಯಡಿಯೂರಪ್ಪ ಅವರನ್ನು ಸಂತೋಷ್‌ ಭೇಟಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next