Advertisement

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

08:09 PM Nov 05, 2024 | Team Udayavani |

ಮಂಗಳೂರು: ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದು  ಖಂಡನೀಯ, ತಪ್ಪಿತಸ್ಥರ ವಿರುದ್ದ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಪತ್ರ ಬರೆದಿದ್ದಾರೆ.

Advertisement

ಎಡನೀರು ಮಠದ ಶ್ರೀಗಳು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ದುಷ್ಕರ್ಮಿಗಳು ದಾಳಿ ನಡೆಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಸದ ” ಹಿಂದೂ ಸಮಾಜದ ಮಾರ್ಗದರ್ಶಕರು ಹಾಗೂ ಆಧ್ಯಾತ್ಮಿಕ ಗುರುಗಳಾದ ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಘಟನೆಯು ಈ ಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ. ಕಾನೂನಿನ ಭಯವಿಲ್ಲದೆ ನಡು ರಸ್ತೆಯಲ್ಲಿಯೇ ಸ್ವಾಮೀಜಿ ಕಾರು ತಡೆದು ನಿಲ್ಲಿಸಿ ರೌಡಿಸಂ ತೋರಿಸಿ ಸಮಾಜದಲ್ಲಿ ಭೀತಿ ಸೃಷ್ಟಿಸುವ ಇಂತಹ ಪುಂಡರ ತಕ್ಷಣ ಮಟ್ಟಹಾಕಬೇಕು” ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

“ಕಾಸರಗೋಡು ಗಡಿಯ ಹಂಚಿಕೊಳ್ಳುವ ಮಂಗಳೂರಿನ (ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ) ಸಂಸದನಾಗಿ ಮತ್ತು ಸ್ವಾಮೀಜಿಯವರ ಮೇಲೆ ಗೌರವ ಹೊಂದಿರುವ ವ್ಯಕ್ತಿಯಾಗಿ, ಈ ಕೃತ್ಯದಲ್ಲಿ ಶಾಮೀಲಾದವರ ವಿರುದ್ಧ ತಕ್ಷಣ ಕಠಿನ ಕಾನೂನು ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು” ಸಿಎಂ ಪಿಣರಾಯಿ ವಿಜಯನ್‌ಗೆ ಒತ್ತಾಯಿಸಿದ್ದಾರೆ.

ದಾಳಿ ನಡೆಸಿದ ದುಷ್ಕರ್ಮಿಗಳ ಬಗ್ಗೆ ತನಿಖೆಯಾಗಲಿ: 
ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಈ ರೀತಿಯ ಕೃತ್ಯಗಳ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಸ್ವಾಮೀಜಿಯವರಿಗೆ ಸುರಕ್ಷತೆ ಇಲ್ಲ ಅಂದ ಮೇಲೆ, ಸಾಮಾನ್ಯರ ಸ್ಥಿತಿ ಏನಾಗಬಹುದು? ಹೀಗಾಗಿ ಈ ಘಟನೆಯನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿ ದಾಳಿ ನಡೆಸಿದ ದುಷ್ಕರ್ಮಿಗಳು ಮತ್ತು ಅವರ ಹಿಂದಿರುವ ದುಷ್ಟ ಶಕ್ತಿಗಳ ಬಗ್ಗೆಯೂ ತನಿಖೆಯಾಗಬೇಕು. ಈ ಕೃತ್ಯದಿಂದ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯದ ಭಾವನೆಗಳಿಗೆ ಧಕ್ಕೆಯಾಗಿರುವುದು ಮಾತ್ರವಲ್ಲದೇ ಸಮಾಜದ ಶಾಂತಿ-ಸಹಬಾಳ್ವೆ ಕದಡಲು ಯತ್ನಿಸುವ ಸಮಾಜಘಾತುಕರಿಗೂ ಇದು ಪಾಠವಾಗಬೇಕು ಎಂಬ ಕಾರಣದಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆಯಲಾಗಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next