Advertisement

ಸಂಕಷ್ಟಗಳನ್ನೇ ಸವಾಲಾಗಿ ಸ್ವೀಕರಿಸಿದ ರೈತ! ಕೂನಬೇವಿನ ಚಂದ್ರಶೇಖರ ಪಾಟೀಲರ ಸಾಧನೆ ವಿಶಿಷ್ಟ

04:14 PM Sep 13, 2020 | sudhir |

ರಾಣಿಬೆನ್ನೂರು: ಕೃಷಿಕರು ಹೂವು, ಹಣ್ಣು, ತರಕಾರಿ, ಕಾಳುಕಡಿ, ಖಾದ್ಯ ಬೆಳೆ ಸೇರಿದಂತೆ ಯಾವುದೇ ವಾಣಿಜ್ಯ ಬೆಳೆ ಬೆಳೆದರೂ ನಷ್ಟವನ್ನೇ ಅನುಭವಿಸಬೇಕಾದ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿಯನ್ನೇ ಸವಾಲಾಗಿ ಸ್ವೀಕರಿಸಿ ಕೃಷಿಯಲ್ಲಿಯೇ ನೆಮ್ಮದಿ ಹಾಗೂ ಸಂತೃಪ್ತಿಯ ಬದುಕನ್ನು ಕಟ್ಟಿಕೊಳ್ಳುವ ಯತ್ನದಲ್ಲಿರುವ ತಾಲೂಕಿನ ಕೂನಬೇವು ಗ್ರಾಮದ ಚಂದ್ರಶೇಖರ ಪಾಟೀಲರದ್ದು ವಿಶಿಷ್ಟ ಸಾಧನೆಯಾಗಿದೆ.

Advertisement

ಬಿಎ ಪದವೀಧರರಾದ ಚಂದ್ರಶೇಖರ ಪಾಟೀಲರು ಚಿಕ್ಕಂದಿನಲ್ಲಿಯೇ ಅಜ್ಜ, ಅಪ್ಪನ ಜತೆ ಕೃಷಿ ಕೆಲಸ ಮಾಡುತ್ತ, ಕೃಷಿಯ ಬದುಕಿನ ಭಾಗವಾಗಿಯೇ ಬೆಳೆದವರು. ಹಸಿರು ಕ್ರಾಂತಿಯಿಂದ ನಮ್ಮ ಕೃಷಿ ಕ್ಷೇತ್ರದಲ್ಲಾದ ಪಲ್ಲಟಗಳನ್ನು ಹತ್ತಿರದಿಂದ ಕಂಡವರು. ಹಸಿರು ಕ್ರಾಂತಿಯ ಪರಿಣಾಮ ನಮ್ಮ ನೆಲ-ಜಲ- ವಾಯು ಮಾಲಿನ್ಯದಿಂದ ಉಂಟಾದ ಬದುಕನ್ನ ಕಂಡು ದಿಗ್ಭ್ರಾಂತರಾದವರು.

ಕಾಲೇಜಿನ ದಿನಗಳಲ್ಲೇ ತೇಜಸ್ವಿ ಅವರ ಜಪಾನಿನ ಕೃಷಿ ಋಷಿ ಮಸಾನೋಬು ಫುಕುವೋಕಾ ಕುರಿತ ಪುಸ್ತಕ ಓದಿ, ಅದರಿಂದ ಪ್ರಭಾವಿತರಾದವರು. ಪರಿಸರಕ್ಕೆ ಪೂರಕವಾದ ಕೃಷಿಯಿಂದ ಮಾತ್ರ ಈ ಭೂಮಿಯಲ್ಲಿ ಜೀವ ಸಂಕುಲ ಉಳಿದು ಬೆಳೆಯಲು ಸಾಧ್ಯ. ಅಲ್ಲದೇ, ರೈತರ ಬೆನ್ನೆಲುಬಾದ ದನಕರುಗಳು ಕೃಷಿಗೆ ಪೂರಕವಾಗಿವೆ. ಅವುಗಳ ಸಾಕಾಣಿಕೆ ಬಹಳ ಅವಶ್ಯ ಎನ್ನುವುದು ಪಾಟೀಲರ ಖಚಿತ ಅಭಿಪ್ರಾಯ.

ಸ್ವಲ್ಪ ದಿನ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಅವರು, ಊರಿಗೆ ಮರಳಿ ಮತ್ತೆ ಕೃಷಿಯಲ್ಲಿ ಪತ್ನಿಯೊಂದಿಗೆ ತೊಡಗಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿರುವ ಅವರು ಫುಕುವೋ ಸಹಜ ಕೃಷಿಯ ವಿಚಾರಧಾರೆಗೆ ಪೂರಕಾವಾಗಿಯೇ ನಮ್ಮ ಪಾರಂಪರಿಕ ಕೃಷಿ ವಿಧಾನಗಳಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡಿದ್ದಾರೆ.

ಎಲ್ಲ ರೈತರು ಬಿಟಿ ಹತ್ತಿಯ ಬೆನ್ನು ಹತ್ತಿದ್ದ ಸಂದರ್ಭದಲ್ಲಿ ಹೈಬ್ರಿàಡ್‌ ತಳಿಗಳಿಗೆ ತಿಲಾಂಜಲಿ ಇಟ್ಟಿರುವ ಚಂದ್ರಶೇಖರ ಪಾಟೀಲ, ಜವಾರಿ ನವಣಿ, ರಾಗಿ, ಸಾವಿ, ಬಳ್ಳಿ ಶೇಂಗಾ, ಗೆಜ್ಜೆ ಶೇಂಗಾ, ಹೆಸರು, ತೊಗರಿ, ಅಲಸಂದಿಯಂತಹ ದ್ವಿದಳ ಧಾನ್ಯಗಳ ಜೊತೆಗೆ ಮಿಶ್ರಬೆಳೆಯಾಗಿ ಬೆಳೆದು ವಿಶಿಷ್ಟ ಪ್ರಯೋಗ ನಡೆಸಿದ್ದಾರೆ. ಅಲ್ಲದೇ, ಬಾಳೆ, ಊದಲು ಬೆಳೆಗಳನ್ನು ನಿರಂತರವಾಗಿ ಸಹಜವಾಗಿಯೇ ಬೆಳೆಯುತ್ತಿದ್ದಾರೆ. ಇದರಿಂದ ಖರ್ಚು ಕಡಿಮೆಯಾಗಿ ಲಾಭ ಪಡೆಯುತ್ತಿದ್ದಾರೆ. ಇದು ಇತರ ರೈತರಿಗೆ ಮಾದರಿಯಾಗಿದೆ.

Advertisement

ಅಂಥ ದೊಡ್ಡ ಲಾಭದಾಯಕ ಬೆಳೆ ಈವರೆಗೂ ಬಂದಿಲ್ಲ ಎನ್ನುವ ಅವರು, ಪ್ರಕೃತಿಗೆ ಪೂರಕವಾದ, ಮುಂದಿನ ಪೀಳಿಗೆಗೂ ಭೂಮಿಯನ್ನು ವರದಾನವಾಗಿ ಉಳಿಸಿ ಹೋಗುವ ನಿಟ್ಟಿನಲ್ಲಿ ಸಾವಯವ ಕೃಷಿ ಇಂದಿನ ಅಗತ್ಯವೂ ಹೌದು.

ಅನಿವಾರ್ಯತೆಯೂ ಹೌದು. ಹೀಗಾಗಿ, ಸಾವಯವ ಕೃಷಿ ನನಗೆ ಹೆಮ್ಮೆ ಹಾಗೂ ಖುಷಿಯ ಸಂಗತಿಯಾಗಿದೆ ಎಂದು ಪಾಟೀಲ ಹೇಳುತ್ತಾರೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಾವಯವ ಕೃಷಿ ಅನುಕರಣೀಯ ಕೃಷಿ ಪದ್ಧತಿಯಾಗಿದೆ. ಹೈನುಗಾರಿಕೆಯಂತಹ ಪೂರಕ ಉದ್ಯೋಗದ ಮೂಲಕ ಈ ಕೃಷಿಯಲ್ಲಿ ಅವರು ಖಂಡಿತ ನೆಮ್ಮದಿಯ ಬದುಕು ಕಾಣಲು ಸಾಧ್ಯವಿದೆ ಎನ್ನುವ ಪಾಟೀಲರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

– ಮಂಜುನಾಥ ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next