Advertisement

ಮತದಾನಕ್ಕೆ ನೀಡಿದ ಹೊಸ ಪ್ರೇರಣೆಯಿಂದ ಯಶಸ್ಸು

06:30 AM May 17, 2018 | |

ಕುಂದಾಪುರ: ವಿಧಾನಸಭಾ ಚುನಾವಣೆ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದವರಲ್ಲಿ ಕುಂದಾಪುರ ಚುನಾವಣಾಧಿಕಾರಿ, ಸಹಾಯಕ ಕಮಿಷನರ್‌ ಟಿ. ಭೂಬಾಲನ್‌ ಅವರೂ ಒಬ್ಬರು. ಚುನಾವಣೆ ನಿರ್ವಹಣೆ ಬಗ್ಗೆ ಅವರು ಉದಯವಾಣಿಯೊಂದಿಗೆ ಮಾತುಕತೆ ನಡೆಸಿದ್ದಾರೆ.  

Advertisement

ಈ ಹಿಂದೆ ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸಿದ್ದೀರಾ?
       ನಾನು ಎಸಿಯಾಗಿ ಏಳು ತಿಂಗಳಷ್ಟೇ ಆಗಿದೆ. ಐಎಎಸ್‌ ಅಧಿಕಾರಿಯಾಗಿ ಎರಡು ವರ್ಷಗಳಷ್ಟೇ ಆಗಿದೆ. ಇದೇ ಮೊದಲ ಚುನಾವಣೆ.

ಏನಾದರೂ ಗೊಂದಲಗಳಾಗಿದ್ದವೇ?
      ಅಂತಹ ಗೊಂದಲಗಳು ಆಗಿಲ್ಲ. ಗೊಂದಲಗಳಾಗುವ ಸಂದರ್ಭ ಬಂದರೂ ಆರಂಭದಲ್ಲಿಯೇ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದೆವು. ಯಾರು ತೊಂದರೆ ಕೊಡುವ ಸಾಧ್ಯತೆ ಇದೆಯೋ ಅವರ ಬಳಿ ಮಾತನಾಡಿ ಘಟನೆಯೇ ನಡೆಯದಂತೆ ಮಾಡುತ್ತಿದ್ದೆವು.

ಹೊಸ ಮಾದರಿಯ ಚುನಾವಣೆಗೆ ಪ್ರೇರಣೆ ಏನು?
    ಜನರಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಮೂಡಿ ಬರಬೇಕು. ಎಲ್ಲರೂ ಚುನಾವಣೆಯನ್ನು ಪ್ರೀತಿಯಿಂದ ಎದುರುಗೊಳ್ಳಬೇಕು. ಅದಕ್ಕಾಗಿ ಅವರಿಗೆ ಅಗತ್ಯವಿರುವ ಮೂಲ ಸೌಕರ್ಯ ನೀಡಬೇಕು. ಜನ ಮತದಾನಕ್ಕೆ ಬಂದವರು ಶಾಪ ಹಾಕಿಕೊಂಡು ಹೋಗು ವಂತಾಗಬಾರದು. ಮತದಾನದಿಂದ ದೂರ ಉಳಿಯುವಂತಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ನಾವು ಹೊಸ ಉಪಕ್ರಮಗಳನ್ನು ಕೈಗೊಂಡೆವು. ಯುವ ಮತದಾರರಿಗಾಗಿ ಸೆಲ್ಫಿ ಸ್ಪರ್ಧೆ ಹಮ್ಮಿಕೊಂಡೆವು. ಉತ್ತಮ ಪ್ರತಿಕ್ರಿಯೆ ಕಂಡುಬಂತು. ಸರದಿ ಸಾಲು ಇಲ್ಲದ ಮತಗಟ್ಟೆಗಳು ಕೂಡಾ ಸಾಕಷ್ಟು ಉತ್ತಮ ಪ್ರತಿಕ್ರಿಯೆಗೆ ಕಾರಣವಾಯಿತು. ಜನರಿಗೆ ವಿಶ್ರಾಂತಿ ಕೊಠಡಿ ನೀಡಿ, ಟೋಕನ್‌ ಪದ್ಧತಿ ಮೂಲಕ ಸಾಲಿನಲ್ಲಿ ನಿಲ್ಲುವ ಹಂಗಿಲ್ಲದ ಚುನಾವಣೆಗೆ ಜನ ಸ್ಪಂದಿಸಿದರು. ಇದಕ್ಕೆ ಕಾಲೇಜು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಹಕರಿಸಿದರು.

ಕಠಿನ ಕ್ರಮಗಳಿಗೆ ಮುಂದಾದಾಗ ಪ್ರತಿರೋಧ ಬಂದಿದೆಯೇ?
     ಒಂದು ಕಡೆ ಮಾತ್ರ ದಾಳಿಗೆ ಹೋದ ನಮ್ಮ ಮೇಲೆಯೇ ದಾಳಿ ಮಾಡುವ ಯತ್ನ ನಡೆಯಿತು. ಉಳಿದಂತೆ ಎಲ್ಲಿಯೂ ಅಂತಹ ಘಟನೆಗಳು ನಡೆದಿಲ್ಲ. ಜನ ದಾಳಿ ಸಂದರ್ಭ ಕೂಡಾ ಸಹಕರಿಸಿದರು. 

Advertisement

ಸಮಸ್ಯೆಗಳೇನಾದರೂ ಆಗಿತ್ತೇ? 
     ಅಂತಹ ಹೇಳಿಕೊಳ್ಳುವಂತಹ ಸಮಸ್ಯೆ ಕಾಣಿಸಲಿಲ್ಲ. ಇವಿಎಂ, ವಿವಿಪ್ಯಾಟ್‌ ಸಮಸ್ಯೆ ತಾಂತ್ರಿಕ ಸಮಸ್ಯೆಯಾಗಿದ್ದು ಅದನ್ನು ತತ್‌ಕ್ಷಣ ಬಗೆಹರಿಸಲಾಗಿದೆ.   

ಚುನಾವಣೆಯ ಯಶಸ್ಸಿಗೆ ಕಾರಣ?
    ತಂಡದ ಸಾಮೂಹಿಕ ಕೆಲಸ. ತಹಶೀಲ್ದಾರ್‌, ಗ್ರಾಮ ಕರಣಿಕರು ಹಾಗೂ ಇತರ ಇಲಾಖೆಯ ಸಿಬಂದಿ, ಅಧಿಕಾರಿಗಳು ನಾವು ಹಂಚಿಕೆ ಮಾಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ನಿದ್ದೆ ಬಿಟ್ಟು ಕೆಲಸ ಮಾಡಿದ್ದಾರೆ. 

ಚುನಾವಣಾ ಅಕ್ರಮದ ದೂರುಗಳು ಬರುತ್ತಿದ್ದವೇ?
    ಊಟ ನೀಡಿದ್ದು, ಹಣ ಹಂಚಿದ್ದು ದೂರು ಬಂದಿದೆ. ಕೆಲವೆಡೆ ನಾವು ಹೋದಾಗ ಏನೂ ಇರುತ್ತಿರಲಿಲ್ಲ. ಹಂಚುತ್ತಿದ್ದವರ ಬಳಿಯೂ ಮಾಹಿತಿ ದಾರರಿರುತ್ತಿದ್ದರು. ಇನ್ನು ಕೆಲವು ಸುಳ್ಳು ದೂರು. ನಮ್ಮ ಚೆಕ್‌ ಪೋಸ್ಟ್‌ನಲ್ಲಿ 10 ಲಕ್ಷ ರೂ. ನಗದು, ಅಬಕಾರಿ ಅಕ್ರಮ ಇತ್ಯಾದಿ ಹಿಡಿಯಲಾಗಿದೆ.

ಮತದಾನ ಜಾಗೃತಿ ಕುರಿತು?
    ಮತದಾನ ಪ್ರಮಾಣ ಏರಿಕೆ ಕುರಿತು ನಾವು ಕೈಗೊಂಡ ನೂತನ ಉಪಕ್ರಮಗಳು ಸಹಕಾರಿಯಾಗಿವೆ. ಕಳೆದ ಅವಧಿಗಿಂತ 3.3 ಶೇ.ದಷ್ಟು ಮತದಾನ ಹೆಚ್ಚಳವಾಗಿದೆ. ನಮ್ಮ ಉದ್ದೇಶ ಕೂಡಾ ಮತದಾನ ಪ್ರಮಾಣ ಹೆಚ್ಚಳ ಮಾಡುವುದೇ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next