ಮೂಡುಬಿದಿರೆ: ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಪ್ರಸ್ತಾವನೆಯಿಂದ ಕೆಲಕಾಲ ಸುದ್ದಿಯಾಗಿದ್ದ ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿ, ನಿಡ್ಡೋಡಿ ಗ್ರಾಮದ ಕೊಲತ್ತಾರುಪದವಿನಲ್ಲಿ ಸುರಂಗ ಮಾರ್ಗ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ನೈಸರ್ಗಿಕವಾಗಿ ನಿರ್ಮಿತವಾದುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೊಲತ್ತಾರಪದವು ಪ್ರದೇಶ ಮುರಕಲ್ಲನ್ನು ಹೊದ್ದು ಸಮತಟ್ಟಾಗಿದ್ದು, ಇಲ್ಲಿ ಬಹಳ ಸಂಖ್ಯೆಯಲ್ಲಿ ಕೆಂಪುಕಲ್ಲಿನ ಕೋರೆಗಳಿವೆ. ಇಂಥ ಒಂದು ಕಡೆಯಲ್ಲಿ ಕೋರೆಗೆಂದು ಅಗೆತ ನಡೆಸಿದಾಗ ಪುಟ್ಟ ಹೊಂಡವೊಂದು ಪತ್ತೆಯಾಗಿತ್ತು. ಇದನ್ನು ಬಿಡಿಸಿದಾಗ ಸುಮಾರು ಮೂರಡಿ ವೃತ್ತಾಕಾರದಲ್ಲಿ ಗೋಚರಿಸಿದ ಹೊಂಡದಲ್ಲಿ ಓರ್ವ ವ್ಯಕ್ತಿ ಕೊಂಚ ಕಷ್ಟ ಪಟ್ಟು ಇಳಿಯಬಹುದಾಗಿರುವುದು ಕಂಡುಬಂದಿತು. ಇದನ್ನು ಈ ಪರಿಸರದ ಕೃಷಿಕರಾದ ಮೆಲೊಯ್ ಮೊರಾಸ್, ಅಶ್ವತ್ಥಪುರ ಶ್ರೀನಿವಾಸ ಗೌಡ, ಜೋಯ್ ಡಿ’ಸೋಜಾ, ಸತೀಶ್ ವಂಟಿಮಾರ್ ಅವರು ಸ್ವತಃ ಹಗ್ಗ ಇಳಿಸಿ ಪರಿಶೀಲಿಸಿದಾಗ ಸುರಂಗ ಮಾರ್ಗದಂಥ ಸ್ವರೂಪ ಕಂಡು ಬಂದಿದೆ.
ಮೇಲ್ಭಾಗದಿಂದ ಸುಮಾರು 13 ಅಡಿ ಆಳಕ್ಕೆ ಇಳಿದಂತೆಲ್ಲ ಒಳಭಾಗದಲ್ಲಿ ಸುಮಾರು 5 ಅಡಿ ವಿಸ್ತೀರ್ಣದಲ್ಲಿ ಸುರಂಗಮಾರ್ಗ ಪೂರ್ವ-ಉತ್ತರ ದಿಕ್ಕಿನತ್ತ ಸಾಗಿದಂತೆ ಕಂಡುಬಂದಿದೆ ಎಂದೂ ಕೊಂಚ ದೂರದಲ್ಲಿ ಈ ಸುರಂಗ ಮಾರ್ಗಕ್ಕೆ ಅಡ್ಡಲಾಗಿ ದೊಡ್ಡ ಕಲ್ಲುಗಳು ಬಿದ್ದಿದ್ದು, ಇನ್ನು ಮಾರ್ಗವು ಮುಂದವರಿದಿರುವ ಸಾಧ್ಯತೆ ಇದೆ ಎಂದೂ ಟಾರ್ಚ್, ಮೊಬೈಲ್ ಲೈಟ್ ಸಹಿತ ಇಳಿದವರು ತಿಳಿಸಿದ್ದಾರೆ.
ಗುಡ್ಡ ಪ್ರದೇಶದಲ್ಲಿ ನೀರು ಇಂಗಿದ ಪರಿಣಾಮವಾಗಿ, ಇಲ್ಲವೇ ಒಳಗೊಳಗೇ ಹುಟ್ಟಿಕೊಂಡ ನೀರಿನ ಒರತೆಯ ಹಲವು ಮೂಲಗಳು ಒಂದಾಗಿ ಹರಿದ ರಭಸಕ್ಕೆ ನೈಸರ್ಗಿಕವಾಗಿ ಇದು ನಿರ್ಮಾಣವಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಹಿರಿಯರು ಅಭಿಪ್ರಾಯಪಡುತ್ತಿದ್ದಾರೆ.
ಕಂದಾಯ ಇಲಾಖೆ, ಭೂಗರ್ಭ ಇಲಾಖೆ, ಪುರಾತತ್ವ ಇಲಾಖೆಯವರು ಸೂಕ್ತವಾಗಿ ಈ ಹೊಂಡ, ಸುರಂಗ ಸ್ವರೂಪವನ್ನು ಪರಿಶೀಲಿಸಿ, ನಿಜ ಸ್ವರೂಪವನ್ನು ದಾಖಲಿಸಬಹುದಾಗಿದೆ.
ಅಪಾಯ
ಈ ಭಾಗದಲ್ಲಿ ಜನವಸತಿ ಇಲ್ಲದೇ ಇರುವುದರಿಂದ ಅಕಸ್ಮಾತ್ ಜಾನುವಾರು, ವಿಷಯ ಗೊತ್ತಿಲ್ಲದೆ ಸುಮ್ಮನೇ ಅಡ್ಡಾಡುವವರು ಈ ಹೊಂಡಕ್ಕೆ ಬಿದ್ದು ಪ್ರಾಣಾಪಾಯ ಉಂಟಾಗಬಹುದಾದ ಕಾರಣ ಕಲ್ಲಮುಂಡ್ಕೂರು ಪಂಚಾಯತ್‌ನವರು ತತ್‌ಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಲ್ಲಿ ಸೂಕ್ತ ಬೇಲಿ ವ್ಯವಸ್ಥೆ ಮಾಡಬೇಕಾಗಿದೆ.