ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರ ಬಹುದಿನಗಳ ಕನಸಾದ ಸಬ್ ಅರ್ಬನ್ ರೈಲು ಯೋಜನೆ ನನಸಾಗುವ ಸಮಯ ಬರುತ್ತಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.
ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ಬೆಂಗಳೂರು ಸಬ್ ಅರ್ಬನ್ ರೈಲು ವ್ಯವಸ್ಥೆಗೆ ಶೀಘ್ರವೇ ಚಾಲನೆ ನೀಡುವಂತೆ ಸಚಿವರ ಬಳಿ ಮನವಿ ಮಾಡಲಾಗಿದೆ. ಈ ಸಂಬಂಧ ರೈಲ್ವೆ ಬೋರ್ಡ್ ಅಧ್ಯಕ್ಷರ ಜತೆಯೂ ಚರ್ಚೆ ಮಾಡಿದ್ದೇನೆ. ನ.4ರಂದು ನವದೆಹಲಿಯಲ್ಲಿ ಈ ಸಂಬಂಧ ರೈಲ್ವೆ ಮಂಡಳಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷರು ನ.2ರಂದು ಬೆಂಗಳೂರಿಗೆ ಆಗಮಿಸಿ, ಯೋಜನೆ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನ ಸಂಬಂಧ ರಾಜ್ಯದ ಸಂಸದರೆದ್ದಾರೆ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ. ಎರಡೂ ಸಭೆಗಳ ಬಳಿಕ ಯೋಜನೆಗೆ ಅಂತಿಮ ಸ್ವರೂಪ ಸಿಗಲಿದೆ ಎಂದರು.
ಯೋಜನೆಗೆ ತ್ವರಿತ ಚಾಲನೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ಈಗಾಗಲೇ ಕೇಂದ್ರದ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದ್ದು, 17 ಸಾವಿರ ಕೋಟಿ ರೂ. ನೀಡಲಾಗಿದೆ. ಹಿಂದಿನ ಡಿಪಿಆರ್ (ಡೀಟೈಲ್ಡ್ ಪ್ರಾಜೆಕ್ಟ್ರಿ ಪೋರ್ಟ್)ನಲ್ಲಿ ಮೆಟ್ರೋ ಇರುವ ಕಡೆ ಸಬ್ ಅರ್ಬನ್ ರೈಲು ಇರಬಾರದು, ಇದರಿಂದ ಮೆಟ್ರೋ ಆದಾಯ ಕಡಿಮೆ ಆಗುತ್ತದೆ ಎಂಬ ನೆಪ ಹೇಳಲಾಗಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪರಿಷ್ಕೃತ ಡಿಪಿಆರ್ ಕಳುಹಿಸಿಕೊಡಲಾಗಿದೆ. ಈ ಯೋಜನೆಯಿಂದ ಬೆಂಗಳೂರಿನ ಹೊರ ಭಾಗದ ಜನರಿಗೂ ಅನುಕೂಲ ಆಗಲಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಆಗಿದೆ ಎಂದು ಹೇಳಿದ್ದಾರೆ.