ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿಗೆ ಸಬರ್ಬನ್ ರೈಲು ಸೇವೆ ಘೋಷಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಎರಡು ದಶಕಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದಂತಾಗಿದೆ. ಹದಿನೇಳು ಸಾವಿರ ಕೋಟಿ ರೂ. ವೆಚ್ಚದಲ್ಲಿ 160 ಕಿ.ಮೀ. ಸಬರ್ಬನ್ ಮಾರ್ಗ ಅನುಷ್ಠಾನಗೊಂಡರೆ, ನಿಜಕ್ಕೂ ಬೆಂಗಳೂರು ಸುತ್ತಮುತ್ತ 100 ಕಿ.ಮೀ. ವ್ಯಾಪ್ತಿಯ ಸಂಚಾರ ದಟ್ಟಣೆ ಸಮಸ್ಯೆಗೂ ಪರಿಹಾರ ದೊರಕಲಿದೆ.
2018-19 ನೇ ಸಾಲಿನಲ್ಲಿ ಗಂಗಾವತಿ-ಕಾರಟಗಿ 28 ಕಿ.ಮೀ. ಹೊಸ ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಬ್ಲಾದ್-ಕಲಬುರಗಿ, ಸಾವಳಗಿ-ಬಬಲಾದಿ , ಗಂಗಾಪುರ ರಸ್ತೆ-ಹುಣಸಿ, ಬಿಂಕದಕಟ್ಟಿ-ಹುಲಕೋಟಿ, ದೇವರಪಲ್ಲಿ-ಪೆನುಕೊಂಡ, ಗದಗ-ಬಿಂಕದಕಟ್ಟಿ, ಹುಬ್ಬಳ್ಳಿ ದಕ್ಷಿಣ-ಸವನೂರು, ಹುಲಕೋಟಿ-ಅಣ್ಣೀಗೇರಿ, ಕೊಪ್ಪಳ-ಗಿಣಿಗೆರ-ಮುನೀರಾಬಾದ್, ತುಮಕೂರು-ಗುಬ್ಬಿ ಜೋಡಿ ಮಾರ್ಗ ಪೂರ್ಣಗೊಳಿಸುವುದು. ಗುಲ್ಬರ್ಗ-ಅಕ್ಕಲಕೋಟೆ, ಗುಂತ್ಕಲ್-ಕಲ್ಲೂರು, ಮೀರಜ್ -ಬೆಳಗಾವಿ ವಿದ್ಯುದ್ದೀಕರಣ ಪೂರ್ಣಗೊಳಿಸುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಇದರಿಂದ ರಾಜ್ಯದ ರೈಲ್ವೆ ವ್ಯವಸ್ಥೆ ಮತ್ತಷ್ಟು ಬಲವರ್ಧನೆಗೊಳ್ಳಲಿದೆ.
ಆದರೆ, ಹೊಸ ಮಾರ್ಗಗಳ ಬೇಡಿಕೆಗೆ ಮತ್ತಷ್ಟು ಸ್ಪಂದಿಸಬಹುದಿತ್ತು. ಈ ಹಿಂದೆ ರಾಜ್ಯದಲ್ಲಿ ಘೋಷಣೆ ಮಾಡಿದ್ದ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಅನುದಾನ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಬೆಂಗಳೂರು-ಹುಬ್ಬಳ್ಳಿ-ಮುಂಬೈ ಸೂಪರ್‌ಫಾಸ್ಟ್, ಹುಬ್ಬಳ್ಳಿ-ಬೆಳಗಾವಿ ರಾತ್ರಿ ಸೇವೆ, ಹೊಸಪೇಟೆ-ಬೆಂಗಳೂರು ನಡುವೆ ಮತ್ತೂಂದು ರೈಲು ಸೇವೆ, ಸೆಂಟ್ರಲ್ ರೈಲ್ವೆ ವಲಯದಲ್ಲಿರುವ ಕಲಬುರಗಿ ಪ್ರತ್ಯೇಕ ವಲಯ ಮಾಡುವ ಬೇಡಿಕೆ, ಮಂಗಳೂರು ನೈರುತ್ಯ ವಲಯಕ್ಕೆ ಸೇರಿಸುವ ಬೇಡಿಕೆ ಬಗ್ಗೆಯೂ ಪ್ರಸ್ತಾಪವಿಲ್ಲ. ಹುಬ್ಬಳ್ಳಿ-ಲೋಂಡಾ-ಮೀರಜ್, ಗದಗ-ಹೊಟಗಿ ಜೋಡಿ ಮಾರ್ಗದ ಬಗ್ಗೆಯೂ ಬಜೆಟ್‌ನಲ್ಲಿ ಹೇಳಿಲ್ಲ. ಹುಬ್ಬಳ್ಳಿ-ಬೆಂ ಗಳೂರು ವಿದ್ಯುದ್ದೀಕರಣದ ಬಗ್ಗೆಯೂ ಪ್ರಸ್ತಾಪವಿಲ್ಲ. ಉಳಿದಂತೆ, ದೇಶಾದ್ಯಂತ 3600 ಕಿ.ಮೀ. ರೈಲ್ವೆ ಹಳಿ ಮೇಲ್ದರ್ಜೆಗೇರಿಸುವುದು.
ರಾಷ್ಟ್ರೀಯ ರೈಲು ಸಂರಕ್ಷಣ ಕೋಶಕ್ಕೆ ಹೆಚ್ಚಿನ ಅನುದಾನ ನೀಡುವುದು. ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಹವಾಮಾನ ವೈಪರೀತ್ಯ ಮುನ್ಸೂಚನಾ ಸಾಧನ ಅಳವಡಿಸಿ ಅಪಘಾತ ತಪ್ಪಿಸುವುದು. 600 ಪ್ರಮುಖ ನಿಲ್ದಾಣಗಳ ಅಭಿವೃದ್ಧಿ, ವೈಫೈ ಸೇವೆ ಕಲ್ಪಿಸುವುದು ಸೇರಿದಂತೆ ಜೋಡಿ ಮಾರ್ಗ, ವಿದ್ಯುದ್ದೀಕರಣ, ಗೇಜ್ ಪರಿವರ್ತನೆಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.ಒಟ್ಟಾರೆ, ರೈಲ್ವೆ ವಲಯಕ್ಕೆ ಆಶಾದಾಯಕ.
ಕೃಷ್ಣಪ್ರಸಾದ್, ರೈಲ್ವೆ ಹೋರಾಟಗಾರ