ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಘಟನೆಗಳ ಪ್ರಕರಣ ಗಣನೀಯವಾಗಿ ಇಳಿಕೆಯಾಗಿರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ (ಏಪ್ರಿಲ್ 06) ರಾಜ್ಯಸಭೆಗೆ ನೀಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ನೇತ್ರ ಸಮಸ್ಯೆ ಪರಿಹಾರಕ್ಕೆ 5 ತಲೆಮಾರಿನ ಸೇವೆ; ಗಿಡಮೂಲಿಕೆಗಳ ಮೂಲಕ ತಯಾರಿಸಿದ ಔಷಧಿ ನೀಡಿಕೆ
2018ರಲ್ಲಿ 417 ಪ್ರಕರಣಗಳು ದಾಖಲಾಗಿದ್ದು, 2021ರಲ್ಲಿ 229ಕ್ಕೆ ಇಳಿಕೆಯಾಗಿದೆ. ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ಕೇಂದ್ರ ಸರ್ಕಾರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಹೊಂದಿದೆ ಎಂದರು.
2018ಕ್ಕೆ (417 ಪ್ರಕರಣ) ಹೋಲಿಕೆ ಮಾಡಿದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯ ಘಟನೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2019ರಲ್ಲಿ 255 ಪ್ರಕರಣ, 2020ರಲ್ಲಿ 244 ಪ್ರಕರಣ ಹಾಗೂ 2021ರಲ್ಲಿ 229 ಪ್ರಕರಣ ವರದಿಯಾಗಿದೆ.
2019ರ ಆಗಸ್ಟ್ 5 ರಿಂದ 2021ರ ನವೆಂಬರ್ ನಡುವೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 87 ನಾಗರಿಕರು ಸಾವನ್ನಪ್ಪಿದ್ದು, 99 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಆದರೆ 2014ರ ಮೇ ನಿಂದ 2019ರ ಆಗಸ್ಟ್ ನಡುವೆ 177 ನಾಗರಿಕರು ಹತ್ಯೆಗೀಡಾಗಿದ್ದು, 406 ಭದ್ರತಾ ಸಿಬಂದಿಗಳು ಹುತಾತ್ಮರಾಗಿದ್ದರು ಎಂದು ಸಚಿವ ರೈ ನೀಡಿರುವ ಅಂಕಿಅಂಶದಲ್ಲಿ ವಿವರಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆ ನಡೆಯದಂತೆ ತಡೆಯಲು ಭದ್ರತಾ ವ್ಯವಸ್ಥೆ ಮತ್ತು ಗುಪ್ತಚರ ಇಲಾಖೆ ಹೆಚ್ಚು ಕಾರ್ಯಪ್ರವೃತ್ತವಾಗಿದೆ ಎಂದು ಸಚಿವ ರೈ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.