Advertisement

ಕಬ್ಬಿನಿಂದ ಸಕ್ಕರೆಗಿಂತ ಉಪ ಉತ್ಪನ್ನದ ಆದಾಯವೇ ಹೆಚ್ಚು

06:00 AM Nov 22, 2018 | |

ಬೆಂಗಳೂರು: ಕಬ್ಬಿನ ಬೆಲೆ ನಿಗದಿ ಕುರಿತು ರೈತರು ಮತ್ತು ಕಾರ್ಖಾನೆ ಮಾಲಿಕರ ನಡುವೆ ಪ್ರತಿ ವರ್ಷ ಸಂಘರ್ಷ ನಡೆಯುತ್ತಲೇ ಇದೆ. ಆದರ,  ಕಬ್ಬಿನಿಂದ ದೊರೆಯುವ ಉಪ ಉತ್ಪನ್ನಗಳಿಂದ ಕಾರ್ಖಾನೆ ಮಾಲೀಕರು ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದರಾದರೂ ರೈತರು ಹಾಗೂ ಸರ್ಕಾರಕ್ಕೆ ನಷ್ಟದ ಲೆಕ್ಕ ತೋರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಕಬ್ಬಿನಿಂದ ಸಕ್ಕರೆ, ಮೊಲಾಸಿಸ್‌, ಅಲ್ಕೋಹಾಲ್‌, ಕಬ್ಬಿನ  ಸಿಪ್ಪೆ, ವಿದ್ಯುತ್‌ ದೊರೆಯುತ್ತದೆ. ಪ್ರಮುಖವಾಗಿ ಬಹುತೇಕ ಕಾರ್ಖಾನೆಗಳು ಸಕ್ಕರೆ ದರವನ್ನು ಮಾತ್ರ ತೋರಿಸಿ ಕಬ್ಬಿಗೆ ಬೆಲೆ ನಿಗದಿ ಮಾಡುವುದರಿಂದ ರೈತರಿಗೆ ಬೆಲೆ ಕಡಿಮೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬೆಳೆಯುವ ಕಬ್ಬಿನ ಇಳುವರಿ ಪ್ರಮಾಣ ಕನಿಷ್ಠ ಶೇ. 11 ರಿಂದ 12 ರ ವರೆಗೂ ಇರುತ್ತದೆ. ಹೀಗಾಗಿ ಕನಿಷ್ಠವೆಂದರೂ 3300 ರೂ. ಎಫ್ಆರ್‌ಪಿ ಆಧಾರದಲ್ಲಿಯೇ ದೊರೆಯಬೇಕು. ಆ ನಂತರ ಕಬ್ಬಿನ ಉಪ ಉತ್ಪನ್ನ ಪ್ರತಿ ಟನ್‌ ಕಬ್ಬಿಗೆ 45 ಕೆಜಿ ಮೊಲಾಸಿಸ್‌ ದೊರೆಯುತ್ತದೆ. ಪ್ರತಿ ಕೆಜಿ  ಮೊಲಾಸಿಸ್‌ಗೆ 50 ರಿಂದ 59ರೂ. ಮಾರಾಟವಾಗುತ್ತದೆ. ಅದರಿಂದ 2475 ರೂ. 3000 ಸಾವಿರ ವರೆಗೆ ಆದಾಯ ಬರುತ್ತದೆ. ಮೊಲಾಸಿಸ್‌ನಿಂದ ಕನಿಷ್ಠ 10 ಲೀಟರ್‌ ಅಲ್ಕೋಹಾಲ್‌ ಉತ್ಪಾದನೆಯಾಗುತ್ತದೆ. ಒಂದು ಲೀಟರ್‌ ಅಲ್ಕೋಹಾಲ್‌ ಬೆಲೆ ಕನಿಷ್ಠ 45 ರೂಪಾಯಿ ಇದ್ದು, ಅದರಿಂದಲೂ ಸುಮಾರು 450 ರಿಂದ 500 ರೂ. ಆದಾಯ ಬರಲಿದೆ. ಅಲ್ಲದೇ ಪ್ರತಿ ಟನ್‌ ಕಬ್ಬಿನಿಂದ ಕನಿಷ್ಠ 300 ರಿಂದ 330 ಕೆಜಿ ಕಬ್ಬಿನ ಸಿಪ್ಪೆ ದೊರೆಯಲಿದ್ದು ಅದರಿಂದ ವಿದ್ಯುತ್‌ ಉತ್ಪಾದನೆ ಅಥವಾ ಗೊಬ್ಬರ ತಯಾರಿಸುತ್ತಾರೆ. ಅದರಿಂದಲೂ ಕನಿಷ್ಠ 1 ಸಾವಿರದಿಂದ 1200 ರೂ. ಆದಾಯ ಬರಲಿದೆ. ಪ್ರತಿ ದಿನ 5 ಸಾವಿರ ಟನ್‌ ಕಬ್ಬು ನುರಿಸುವ ಕಾರ್ಖಾನೆ 10 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ. ರಾಜ್ಯ ಸರ್ಕಾರ ಪ್ರತಿ ಯುನಿಟ್‌ ವಿದ್ಯುತ್‌ನ್ನು 3.5 ರೂ. ಖರೀದಿ ಮಾಡುತ್ತದೆ.

ರೈತರ ಪ್ರಕಾರ ಒಂದು ಟನ್‌ ಕಬ್ಬಿನಿಂದ ಕಾರ್ಖಾನೆ ಮಾಲಿಕರಿಗೆ ಕನಿಷ್ಠ 10 ರಿಂದ 11 ಸಾವಿರ ರೂಪಾಯಿ ಆದಾಯ ಬರಲಿದೆ. ಸಕ್ಕರೆಗಿಂತ ಉಪ ಉತ್ಪನ್ನಗಳಿಂದ ಸುಮಾರು 7500 ರಿಂದ 8000 ರೂ.ಆದಾಯ ಬರಲಿದೆ. ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ಕಳೆದ ಹಂಗಾಮಿನಲ್ಲಿ ಸಕ್ಕರೆ ಬೆಲೆ ಗರಿಷ್ಠ 3130 ರೂ. ಮಾರಾಟವಾಗಿದೆ. ಅದರ ಆಧಾರದಲ್ಲಿ ರೈತರಿಗೆ ಕಬ್ಬಿನ ಬೆಲೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರದ ಎಫ್ಆರ್‌ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ಪ್ರಕಾರ, ಸಕ್ಕರೆಯ ಇಳುವರಿ ಪ್ರಮಾಣ ಶೇ 10 ರಷ್ಟಿದ್ದರೆ, 2750 ರೂ ಎಂದು ನಿಗದಿ ಪಡಿಸಲಾಗಿದೆ. ಪ್ರತಿ ಟನ್‌ನಲ್ಲಿ ಶೇ 1 ರಷ್ಟು ಇಳುವರಿ ಪ್ರಮಾಣ ಹೆಚ್ಚಾದರೆ ಪ್ರತಿ ಟನ್‌ಗೆ ಕಾರ್ಖಾನೆಗಳು 275 ರೂ. ಹೆಚ್ಚಿಗೆ ಹಣ ನೀಡಬೇಕು.

Advertisement

ಎಸ್‌ಎಪಿ ಜಾರಿಗೆ ರೈತರ ಬೇಡಿಕೆ
ರಾಜ್ಯ ಸರ್ಕಾರ 2012 ರಲ್ಲಿ ರಾಜ್ಯ ಸಲಹಾ ದರ (ಎಸ್‌ಎಪಿ) ಜಾರಿಗೆ ತಂದಿದೆ. ಈ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರ ಎಫ್ಆರ್‌ಪಿ ದರ ನಿಗದಿ ಮಾಡಿದ ನಂತರ ರಾಜ್ಯ ಸರ್ಕಾರ ರಾಜ್ಯದಲ್ಲಿನ ಕಬ್ಬಿನ ಇಳುವರಿ ಆಧಾರದಲ್ಲಿ ರಾಜ್ಯ ಸಲಹಾ ದರವನ್ನು ನಿಗದಿ ಮಾಡಲು ಅವಕಾಶವಿದೆ. ಈ ಕಾಯ್ದೆಯ ಪ್ರಕಾರ ರಾಜ್ಯ ಸರ್ಕಾರ ಕಬ್ಬಿನ ಹಂಗಾಮು ಆರಂಭಕ್ಕೂ ಮುನ್ನವೇ ಪ್ರತಿ ವರ್ಷ ಎಸ್‌ಎಪಿ ನಿಗದಿ ಮಾಡಿದರೆ ರೈತರಿಗೆ ಪ್ರತಿ ವರ್ಷ ನಿರ್ಧಿಷ್ಠ ಬೆಲೆ ದೊರೆಯುವ ಬಗ್ಗೆ ಖಾತ್ರಿಯಾಗುವುದಲ್ಲದೇ, ಕಾರ್ಖಾನೆ ಮಾಲೀಕರೊಂದಿಗೆ ಪ್ರತಿ ವರ್ಷ ಸಂಘರ್ಷಕ್ಕೆ ಇಳಿಯುವ ಗೊಂದಲ ತಪ್ಪಲಿದೆ ಎನ್ನುವುದು ರೈತರ ವಾದ.

ಆದರೆ, ಕಳೆದ ನಾಲ್ಕು ವರ್ಷದಿಂದ ಕಾರ್ಖಾನೆ ಮಾಲೀಕರು ಉಪ ಉತ್ಪನ್ನಗಳಿಂದ ಯಾವುದೇ ಲಾಭವಾಗಿರುವ ಬಗ್ಗೆ ದಾಖಲೆ ತೋರಿಸಿಲ್ಲ. ಪ್ರತಿ ವರ್ಷ ಸರ್ಕಾರಕ್ಕೆ ನಷ್ಟವನ್ನೇ ತೋರಿಸಿ ಕಾರ್ಖಾನೆ ಮಾಲೀಕರು ರೈತರಿಗೆ ಹಣ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಕಾರ್ಖಾನೆ ಮಾಲೀಕರು ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಆದಾಯವನ್ನು ತೋರಿಸದೇ ಸಕ್ಕರೆ ದರದ ಆಧಾರದಲ್ಲಿ ರೈತರಿಗೆ ಬೆಲೆ ನೀಡುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಆದಾಯ ಹಂಚಿಕೆ ಸೂತ್ರದಲ್ಲಿ ತಪ್ಪು ಮಾಹಿತಿ ನೀಡಿ ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಎಸ್‌ಪಿ ಕಾಯ್ದೆ ಜಾರಿಗೊಳಿಸಿ, ಪ್ರತಿ ವರ್ಷ ಕಬ್ಬಿನ ಸೀಸನ್‌ ಶುರುವಾಗುವ ಮೊದಲೇ ದರ ನಿಗದಿ ಮಾಡಬೇಕು.
 – ಸುಭಾಸ್‌ ಶಿರಬೂರು, ರೈತ ಮುಖಂಡರು.

ಈಗಿರುವ ಸಕ್ಕರೆ ಮಾರುಕಟ್ಟೆ ಹಾಗೂ ಉಪ ಉತ್ಪನ್ನದ ಆದಾಯದಲ್ಲಿ ಕೇಂದ್ರ ಸರ್ಕಾರದ ಎಫ್ಆರ್‌ಪಿ ನೀಡಲು ಯಾವುದೇ ತೊಂದರೆಯಾಗುವುದಿಲ್ಲ. ರಾಜ್ಯ ಸರ್ಕಾರ ಎಸ್‌ಎಪಿ ನಿಗದಿ ಮಾಡದಿರುವುದರಿಂದ ಗೊಂದಲ ಉಂಟಾಗಿದೆ.
– ಲಕ್ಷ್ಮಣ ಸವದಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಕೃಷ್ಣಾ ಸಕ್ಕರೆ ಕಾರ್ಖಾನೆ, ಅಧ್ಯಕ್ಷ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next