Advertisement
ಉಡುಪಿ, ಮಂಗಳೂರು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳನ್ನೊಳಗೊಂಡ ರಾಜ್ಯದ ಮೀನುಗಾರರು ಕಳೆದ ಜುಲೈಯಿಂದಲೂ ಬಾಕಿ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಇಲಾಖೆಯ ಸಚಿವರು, ಅಧಿಕಾರಿಗಳು, ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಬಿಡುಗಡೆಯಾಗಿಲ್ಲ.
ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಸಬ್ಸಿಡಿ ಸೀಮೆ ಎಣ್ಣೆಗೆ ಅರ್ಹವಾಗಿರುವ 4,514 ದೋಣಿಗಳಿದ್ದು, 2013ರ ಆದೇಶದಂತೆ ತಲಾ 300 ಲೀ.ನಂತೆ ಮಾಸಿಕ 1,355 ಕಿಲೋ ಲೀ. ಸಬ್ಸಿಡಿ ಸೀಮೆಎಣ್ಣೆ ಸಿಗುತ್ತಿದೆ. 2021-22ನೇ ಸಾಲಿನಲ್ಲಿ ಕೇಂದ್ರ ದಿಂದ 1,355 ಕಿ.ಲೀ.ನಂತೆ ವರ್ಷಕ್ಕೆ (9 ತಿಂಗಳಿಗೆ) 12,195 ಕಿ.ಲೀ. ಬಿಡುಗಡೆಯಾಗಬೇಕಿತ್ತು. ಆದರೆ ಈವರೆಗೆ 7,080 ಕಿ.ಲೀ. ಬಿಡುಗಡೆಯಾಗಿದ್ದು, ನವೆಂಬರ್ ವರೆಗೆ ಹಂಚಿಕೆ ಮಾಡಲಾಗಿದೆ. ಡಿಸೆಂಬರ್‌ನಿಂದ ಮುಂದಿನ ಮಾರ್ಚ್ ವರೆಗೆ 5,115 ಕಿ.ಲೀ. ಸಿಗಬೇಕಿದೆ. ಡಿಸೆಂಬರ್ ಮುಗಿದರೂ ಆ ತಿಂಗಳದ್ದು ಇನ್ನೂ ಸಿಕ್ಕಿಲ್ಲ. ಈಗ ಉತ್ತಮ ಮೀನಿನ ಸೀಸನ್ ಆಗಿದ್ದು, ಸಕಾಲದಲ್ಲಿ ಸೀಮೆಎಣ್ಣೆ ಸಿಗದೇ ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ. 10,100ಕ್ಕೂ ಅಧಿಕ ದೋಣಿ
ವಾಸ್ತವಾಗಿ ರಾಜ್ಯದಲ್ಲಿ 10,100ಕ್ಕಿಂತಲೂ ಅಧಿಕ ನಾಡದೋಣಿಗಳಿವೆ. ಒಂದು ದೋಣಿ ಯಲ್ಲಿ ಕನಿಷ್ಠ 6ರಂತೆ 60,500ಕ್ಕಿಂತಲೂ ಮಿಕ್ಕಿ ಮೀನುಗಾರರಿದ್ದಾರೆ. ಈ ದೋಣಿಗಳಿಗೆ ತಲಾ 300 ಲೀ.ನಂತೆ ವಾರ್ಷಿಕ 30,300 ಕಿ.ಲೀ. ಸೀಮೆ ಎಣ್ಣೆ ಅಗತ್ಯವಿದೆ. ವರ್ಷದಿಂದ ವರ್ಷಕ್ಕೆ ದೋಣಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸರಕಾರ ಈಗಲೂ 2013ರ ಲೆಕ್ಕದಂತೆ ವಿತರಿಸುತ್ತಿದೆ. ಅದೂ ಸಕಾಲದಲ್ಲಿ ಸಿಗುತ್ತಿಲ್ಲ ಎನ್ನುವುದು ಮಲ್ಪೆ ನಾಡದೋಣಿ ಮೀನುಗಾರರ ಸಹಕಾರಿ ಸಂಘದ ಕಾರ್ಯದರ್ಶಿ ಗೋಪಾಲ್ ಆರ್.ಕೆ. ಅಳಲು.
Related Articles
Advertisement
ನಿರ್ಲಕ್ಷ್ಯ ಯಾಕೆ?ರಾಜ್ಯಕ್ಕೆ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ವಿಳಂಬ ವಾಗಿದ್ದರೂ ನೆರೆಯ ಕೇರಳಕ್ಕೆ ಕಾಲಕಾಲಕ್ಕೆ ಪೂರೈಕೆ ಯಾಗುತ್ತಿದೆ. ಕೇರಳಕ್ಕೆ ವಾರ್ಷಿಕ 21,888 ಕಿಲೋ ಲೀ. ಸಿಗಬೇಕಿದ್ದು ನವೆಂಬರ್ ವರೆಗೆ 15,108 ಕಿ.ಲೀ. ಮತ್ತು ಬಾಕಿ ಉಳಿದ 6,780 ಕಿ.ಲೀ. ಡಿ. 1ಕ್ಕೆ ಬಿಡುಗಡೆಯಾಗಿದೆ. ನಮಗೆ ಮಾತ್ರ ಯಾಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೀನುಗಾರರದ್ದು. ಕೇಂದ್ರದಿಂದ ಬಿಡುಗಡೆಗೆ ಬಾಕಿ ಇರುವ ಸೀಮೆಎಣ್ಣೆ ಕುರಿತಂತೆ ಸ್ವತಃ ದಿಲ್ಲಿಗೆ ಹೋಗಿ ಮನವಿ ಸಲ್ಲಿಸಲಾಗಿದೆ. ಆ ಬಳಿಕ 2-3 ಸಲ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಇಲಾಖೆಯ ಕಾರ್ಯದರ್ಶಿಗಳು ಪ್ರತೀ ವಾರ ಈ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಸಚಿವರ ಗಮನದಲ್ಲಿಯೂ ಇದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗ ಬಿಡುಗಡೆಯಾಗುವ ನಿರೀಕ್ಷೆಯಿದೆ.
– ರಾಮಾಚಾರಿ, ಮೀನುಗಾರಿಕಾ
ಇಲಾಖೆಯ ರಾಜ್ಯ ನಿರ್ದೇಶಕ ನಾವು ಸಬ್ಸಿಡಿ ಸೀಮೆಎಣ್ಣೆ ಬಾಕಿ ಬಿಡುಗಡೆ ಬಗ್ಗೆ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಬೆಂಗಳೂರಿಗೆ 3-4 ಸಲ ಹೋಗಿ ಬಂದಿದ್ದೇವೆ. ಕೇಂದ್ರ ಸಚಿವರು, ಮೀನುಗಾರಿಕೆ ಸಚಿವರು, ಇಲಾಖಾ ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದೇವೆ. ಎಲ್ಲಿ ಬಾಕಿ ಆಗಿದೆ ಅಂತ ಗೊತ್ತಿಲ್ಲ. ಇನ್ನು ಒಂದು ವಾರ ಕಾಯುತ್ತೇವೆ. ಅಷ್ಟರೊಳಗೆ ಕೊಡದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ.
– ಯಶವಂತ, ಅಧ್ಯಕ್ಷರು, ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ -ಪ್ರಶಾಂತ್ ಪಾದೆ