ಸಿಂಧನೂರು: ಮೂಗಿಗಿಂತ ಮೂಗುತಿಯೇ ಭಾರ ಎನ್ನುವ ಮಾತು ತಾಲೂಕಿನ ರೇಷ್ಮೆ ಇಲಾಖೆಗೆ ಅನ್ವಯಿಸುತ್ತದೆ. ಆರ್ಥಿಕ ಲೆಕ್ಕಾಚಾರದಲ್ಲಿ ಇಡೀ ಇಲಾಖೆ ನಡೆಸಲು ಸರ್ಕಾರಕ್ಕೆ ಬೀಳುತ್ತಿರುವ ಖರ್ಚಿನ ಅರ್ಧ ಭಾಗದಷ್ಟು ಕೂಡ ರೈತರಿಗೆ ಪ್ರಯೋಜನ ದೊರಕಿಲ್ಲ!. ನೀರಾವರಿ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ರೇಷ್ಮೆ ಬೆಳೆಯತ್ತ ಹೆಚ್ಚಿನ ರೈತರು ಒಲವು ತೋರದ ಹಿನ್ನೆಲೆಯಲ್ಲಿ ಇಲಾಖೆ ಇದ್ದರೂ ಇಲ್ಲದಂತಾಗಿದೆ. 10 ಹೆಕ್ಟೇರ್‌ನಲ್ಲಿ ಹಿಪ್ಪು ನೇರಳೆ ನಾಟಿ ಗುರಿ ಹೊಂದಿದ ಇಲಾಖೆ 2 ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡಿಸುವಲ್ಲಿ ಯಶಸ್ಸು ಕಂಡಿದೆ.
ವಾರ್ಷಿಕ ಸಾಧನೆ ಶೇ.0.25 ಎನ್ನುತ್ತಿದೆ ಇಲಾಖೆ ದಾಖಲೆ. ಬಹುತೇಕರಿಗೆ ಪ್ರಯೋಜನ ದೊರೆಯದಿದ್ದರೂ ತಾಲೂಕಿನಲ್ಲಿ ಕನಿಷ್ಟ 50 ಎಕರೆಯಲ್ಲಿ ರೇಷ್ಮೆ ಬೆಳೆಸುವ ಉದ್ದೇಶವೂ ಈಡೇರಿಲ್ಲ.
ಕೇಂದ್ರವಿದ್ರೂ ಪ್ರಯೋಜನವಿಲ್ಲ: ರೇಷ್ಮೆ ಇಲಾಖೆ ತಾಂತ್ರಿಕ ಸಲಹಾ ಕೇಂದ್ರವನ್ನು ಸ್ಥಳೀಯವಾಗಿ ಉಳಿಸಿದ ನಂತರವೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ರೇಷ್ಮೆ ಹುಳು ಸಾಕಣೆಯ ಸಲಕರಣೆ ಖರೀದಿಗೆ ಸಹಾಯಧನ ನೀಡುವುದು, ರೇಷ್ಮೆ ಗೂಡು ಬಿಚ್ಚಾಣಿಕೆ ಮಾಡಿ, ರೇಷ್ಮೆ ನೂಲು ತಯಾರಿಸುವುದು, ರೇಷ್ಮೆ ಮೊಟ್ಟೆಗಳ ಚಾಕಿ ಉತ್ತೇಜಿಸುವುದು, ಹಿಪ್ಪು ನೇರಳೆ ಕ್ಷೇತ್ರ ಹೆಚ್ಚಿಸುವುದು ಇಲಾಖೆ ಜವಾಬ್ದಾರಿ. ಈ ನಿಟ್ಟಿನಲ್ಲಿ ಏನೆಲ್ಲ ಕಸರತ್ತು ನಡೆಸಿದರೂ ಪ್ರಯತ್ನ ಫಲ ನೀಡಿಲ್ಲ.
ಕಳೆದ ವರ್ಷ ಒಬ್ಬರಿಗೇ ಸಬ್ಸಿಡಿ: ರೇಷ್ಮೆ ಕೃಷಿಯ ಗುರಿ ವಾರ್ಷಿಕ ಗುರಿ 41 ಎಕರೆ 30 ಗುಂಟೆ ಸಿಂಧನೂರು ತಾಲೂಕಿನಲ್ಲಿದ್ದರೆ, ಗುಂಡಾ ವಲಯದಲ್ಲಿ 28 ಎಕರೆಯಲ್ಲಿ ರೇಷ್ಮೆ ಮಾಡಬೇಕಿತ್ತು. ಈವರೆಗೂ 1,020 ಮೊಟ್ಟೆ ಚಾಕಿ ಕಟ್ಟಲಾಗಿದೆ. 890 ಮೊಟ್ಟೆ ಹಾರ್ವೆಸ್ಟರ್ ಆಗಿದೆ. 560 ಕೆ.ಜಿ ಗೂಡಾಗಿದೆ. ಪ್ರತಿ ಕೆ.ಜಿಗೆ 330 ರೂ. ನಂತೆ ಬಂದರೂ ಇದರ ಮೊತ್ತ 1,84,800 ರೂ. ಗಳಾಗುತ್ತದೆ. ಇಷ್ಟೇ ಪ್ರಮಾಣದಲ್ಲಿ ಮಾತ್ರ ರೇಷ್ಮೆ ಕೃಷಿ ಮಾಡಲಾಗಿದೆ. ತಾಲೂಕಿನ ಒಬ್ಬ ರೈತರಿಗೆ ಮಾತ್ರ 3 ಲಕ್ಷ 60 ಸಾವಿರ ರೂ. ಸಬ್ಸಿಡಿ ಪಾವತಿಯಾಗಿದೆ. ಇಬ್ಬರು ರೈತರ ಪೈಕಿ ಒಬ್ಬರಿಗೆ ಮಾತ್ರ ಹಣ ನೀಡಿರುವ ಇಲಾಖೆ ಮತ್ತೂಬ್ಬರಿಗೆ ಮುಂದಿನ ವರ್ಷದಲ್ಲಿ ಹಣ ಪಾವತಿಸುವುದಾಗಿ ಸರದಿಯಲ್ಲಿ ನಿಲ್ಲಿಸಿದೆ.
ಲಾಭ ಕಡಿಮೆ: ರೇಷ್ಮೆ ಬೆಳೆ ಉತ್ತೇಜಿಸುವ ನಿಟ್ಟಿನಲ್ಲಿ ಸಾಮಾನ್ಯ ವರ್ಗದ ರೈತರಿಗೆ 37,500 ರೂ., ಎಸ್ಸಿ, ಎಸ್ಟಿ ವರ್ಗದ ರೈತರಿಗೆ 45,000 ರೂ. ನಂತೆ ಸಬ್ಸಿಡಿ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದರ ಪ್ರಯೋಜನ ಹೆಚ್ಚಿನ ರೈತರಿಗೆ ತಲುಪುತ್ತಿಲ್ಲ. ಉಮಲೂಟಿ, ವಿರಾಪುರ, ಹೊಗರನಾಳ, ಬೋಗಾಪುರ, ವಿರೂಪಾಪುರ, ವಲ್ಕಂದಿನ್ನಿ, ರಾಗಲಪರ್ವಿ, ರತ್ನಾಪುರ ಗ್ರಾಮ ಹೊರತುಪಡಿಸಿದರೆ, ಇಲ್ಲಿನ ರೇಷ್ಮೆ ಇಲಾಖೆ ಪಟ್ಟಿಯಲ್ಲಿ ಬೇರೆ ಗ್ರಾಮಗಳು ಇಲ್ಲ. ತಾಲೂಕಿನಲ್ಲಿ ಕೃಷಿಕರ ಅನುಕೂಲಕ್ಕೆ ಇರುವ ಸರ್ಕಾರದ ಇಲಾಖೆ ಒಬ್ಬ ರೈತರನ್ನು ಮಾತ್ರ ರೇಷ್ಮೆಗೆ ಒಳಪಡಿಸುವುದರಲ್ಲಿ ಮಾತ್ರ ಯಶಸ್ಸು ಕಂಡಿದೆ.
2020-21ನೇ ಸಾಲಿನಲ್ಲಿ ಇಬ್ಬರು ರೈತರು ರೇಷ್ಮೆ ಹುಳು ಸಾಕಣೆ ಮನೆ ಕಟ್ಟಿದ್ದಾರೆ. ಅವರಿಗೆ ಸಬ್ಸಿಡಿ ಮೊತ್ತ ಬಿಡುಗಡೆ ಆಗಬೇಕಿತ್ತು. ಒಬ್ಬರಿಗೆ ಮಾತ್ರ ಹಣ ಬಂದಿದ್ದು, ಮತ್ತೂಬ್ಬರಿಗೆ ಬಿಡುಗಡೆಯಾಗಲಿದೆ.
ಮರಿಯಪ್ಪ, ರೇಷ್ಮೆ ವಿಸ್ತೀರ್ಣಾಧಿಕಾರಿ,
ರೇಷ್ಮೆ ಇಲಾಖೆ, ಸಿಂಧನೂರು
*ಯಮನಪ್ಪ ಪವಾರ